ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Zombie Drug: ಜೋಂಬಿ ಡ್ರಗ್ ಅಂತ ವೈರಲ್‌ ಆದ ವಿಡಿಯೋ ಅಸಲಿಯತ್ತೇನು?‌ ಪೊಲೀಸರು ಹೇಳಿದ್ದಿಷ್ಟು

ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂದು ‌ಒಂದು ವಿಡಿಯೊವನ್ನು ವೈರಲ್​ ಮಾಡಲಾಗಿತ್ತು. ಸದ್ಯ ತನಿಖೆಯಿಂದ ಅದರ ಅಸಲಿಯತ್ತು ಬಯಲಿಗೆ ಬಂದಿದೆ. ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ವೈರಲ್‌ ವಿಡಿಯೋ

ಬೆಂಗಳೂರು, ಏ. 10: ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್​ (viral video) ಆಗಿತ್ತು. ಅದರಲ್ಲಿ ವ್ಯಕ್ತಿಯೊಬ್ಬ ಗಂಟೆಗಟ್ಟಲೆ ನಿಂತಲ್ಲೇ ನಿಂತಿದ್ದುದು ಕಂಡುಬಂದಿತ್ತು. ಇದರಿಂದ ಆತಂಕಿತರಾದ ನೆಟಿಜನ್ಸ್‌, ಬೆಂಗಳೂರಿಗೆ ಜೋಂಬಿ ಡ್ರಗ್ಸ್​ (zombie drug) ಕಾಲಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್ ಕೂಡ ಧ್ವನಿ ಎತ್ತಿದ್ದರು. ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಈ ಬಗ್ಗೆ ತನಿಖೆ ಮಾಡಿದ್ದು, ಈ ವೇಳೆ ಘಟನೆಯ ಅಸಲಿಯತ್ತು ಬಯಲಾಗಿದೆ.

ವಿಡಿಯೋದಲ್ಲಿ ಇರುವ ವ್ಯಕ್ತಿ ಪಂಜಾಬ್ ಮೂಲದ ಲಾರಿ ಚಾಲಕ ರಾಜವೀರ್ ಸಿಂಗ್​. ಈತ ಈ ಹಿಂದೆ ಅಫೀಮು ಸೇವನೆ ಮಾಡಿದ್ದ. ಹೀಗಾಗಿ ಆತನ ಕುಟುಂಬ ಅವನನ್ನು ಡಿ ಅಡಿಕ್ಷನ್ ಸೆಂಟರ್​ಗೆ ಸೇರಿಸಿದ್ದರು. ಬಳಿಕ ಆತ ಬೆಂಗಳೂರಿಗೆ ಬಂದಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ಚಾಲಕರ ಜೊತೆಗೆ ಸೇರಿಕೊಂಡು ಶೆಡ್​ನಲ್ಲಿ ವಾಸ ಮಾಡುತ್ತಿದ್ದ. ಈತನಿಗೆ ಆರ್ಥರೈಟಿಸ್ (ಸಂಧಿವಾತ) ಮತ್ತು ಸೈನಸೈಟಿಸ್ ಎಂಬ ಕಾಯಿಲೆ ಕೂಡ ಇದೆ.

ಲಾರಿ ಚಾಲಕರ ಜೊತೆಗೆ ಸೇರಿ ಕಂಠ ಪೂರ್ತಿ ಮದ್ಯ ಸೇವನೆ ಮಾಡಿದ್ದ. ಬಳಿಕ ಎರಡು ಮಾತ್ರೆಯನ್ನು ಎಂದಿನಂತೆ ತೆಗೆದುಕೊಂಡಿದ್ದ. ಮಾತ್ರೆಗಳು ಮತ್ತು ಮದ್ಯ ಸೇರಿ ಕೆಮಿಕಲ್ ರಿಯಾಕ್ಷನ್​ನಿಂದ ಕಣ್ಣು ಮಂಜಾಗಿತ್ತು. ನಡೆಯುವುದು, ಓಡಾಡುವುದು ಕಷ್ಟವಾಗಿತ್ತು. ಹೀಗಾಗಿ ಒಂದೇ ಕಡೆ ನಿಂತಲ್ಲಿಯೇ ನಿಂತಿದ್ದ. ಇದನ್ನು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂದು ವೈರಲ್​ ಮಾಡಲಾಗಿತ್ತು. ಸದ್ಯ ತನಿಖೆಯಿಂದ ಅಸಲಿಯತ್ತು ಬಯಲಿಗೆ ಬಂದಿದೆ. ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಭಾರತಕ್ಕೂ ಜಾಂಬಿ ಡ್ರಗ್ ಎಂಟ್ರಿ? ಅರೆ ಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಯುವಕ

ವಿಡಿಯೋ ಮಾಡಿದ, ಶೇರ್​ ಮಾಡಿದವರಿಗೆ ಶಿಕ್ಷೆ

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್​ ಸಿಂಗ್ ಮಾತನಾಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಆ ವ್ಯಕ್ತಿ ಇಲ್ಲಿಯವರು ಅಲ್ಲ. ಎಣ್ಣೆ ಕುಡಿದು ಬಳಿಕ ಮೆಡಿಸಿನ್ ತೆಗೆದುಕೊಂಡಿದ್ದಕ್ಕೆ ಈ ರೀತಿ ಆಗಿದೆ. ಆತನಿಗೆ ಮೆಡಿಕಲ್ ಚಿಕಿತ್ಸೆ ಮಾಡಲಾಗಿದ್ದು ಯಾವುದೇ ಡ್ರಗ್ಸ್​ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಈ ರೀತಿ ವಿಡಿಯೋ ಹರಿಬಿಡುವ ಮುನ್ನ ಯೋಚನೆ ಮಾಡಿ. ಇಲ್ಲಾ ಮೊದಲು ಪೊಲೀಸರಿಗೆ ತಿಳಿಸಿ. ಈ ರೀತಿ ಸುಖಾ ಸುಮ್ಮನೆ ವೈರಲ್ ಮಾಡುವುದು ಸರಿಯಲ್ಲ. ಇದು ಸಿಟಿಗೆ ಮತ್ತು ಒಬ್ಬ ವ್ಯಕ್ತಿಗೆ ಕೆಟ್ಟ ಹೆಸರು ತರುವ ವಿಚಾರವಾಗಿದೆ. ಈ ವಿಡಿಯೋ ವೈರಲ್ ಮಾಡಿರುವ ವ್ಯಕ್ತಿ ಪತ್ತೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಡ್ರಗ್ಸ್​ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್​ ಬಗ್ಗೆ ಝೀರೋ ಟಾಲರೆನ್ಸ್ ಇದೆ. ಜನರು ಆತಂಕ ಪಡುವುದು ಬೇಡ. ಸಿಟಿ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೆ ಕಾನೂನು ಕ್ರಮ ಆಗಲಿದೆ. ವಿಡಿಯೋ ಶೇರ್ ಮಾಡಿದವರಿಗೂ ನೋಟಿಸ್ ಜಾರಿಯಾಗಲಿದೆ ಎಂದು ಸೀಮಂತ್ ಕುಮಾರ್​ ಸಿಂಗ್ ಹೇಳಿದ್ದಾರೆ.

ಹರೀಶ್‌ ಕೇರ

View all posts by this author