ಬೆಂಗಳೂರು, ಆ. 17: ಸೆಲೆಬ್ರೆಟಿಗಳೇ ತುಂಬಿಕೊಂಡಿರುವ ಪರಪ್ಪನ ಅಗ್ರಹಾರ ಜೈಲು (Parappana Agrahara Central Prison) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ (Prajwal Revanna) ಬಳಿ ಮತ್ತೊಂದು ಫೋನ್ ಪತ್ತೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಲ್ಲಿ ಪ್ರಜ್ವಲ್‌ಗೆ ರಾಜಾತಿಥ್ಯ ದೊರಕುತ್ತಿರುವುದು ಬಟಾಬಯಲಾಗಿತ್ತು. ರೇಡ್ ವೇಳೆ ಪ್ರಜ್ವಲ್ ಬ್ಯಾರಕ್‌ನಲ್ಲಿದ್ದ ಬಟ್ಟೆಗಳ ನಡುವೆ ಮೊಬೈಲ್, ಸ್ಯಾನ್‌ಡಿಸ್ಕ್ ಪೆನ್‌ಡ್ರೈವ್, ಚಾರ್ಜರ್ ಹಾಗೂ ನೀಲಿ ಬಣ್ಣದ ಪಾಕೆಟ್ ನೋಟ್‌ಬುಕ್ ಪತ್ತೆಯಾಗಿತ್ತು. ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಬಟ್ಟೆಗಳ ಮಧ್ಯೆ ಹುದುಗಿಸಿಟ್ಟದ್ದ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಫೋನ್ ಪತ್ತೆಯಾಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಜೈಲು ಅಧಿಕಾರಿಗಳು ಇದೀಗ ನಡೆಸಿದ ಮತ್ತೊಂದು ಸುತ್ತಿನ ದಾಳಿಯಲ್ಲಿ ಪ್ರಜ್ವಲ್ ಬಳಿ ಬೇರೊಂದು ಮೊಬೈಲ್ ಪತ್ತೆಯಾಗಿದೆ. ದೇವರ ಫೋಟೊ ಹಿಂದೆ ಇರಿಸಲಾಗಿದ್ದ ಮೊಬೈಲ್ ಇದಾಗಿದ್ದು, ಸಿಮ್ ಇಲ್ಲದೆ ಸ್ವಿಚ್ ಆಫ್ ಆಗಿದ್ದ ಸ್ಥಿತಿಯಲ್ಲಿತ್ತು. ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಬಳಿಕ ಹೆಚ್ಚಿನ ವಿವರ ಲಭ್ಯವಾಗಲಿದೆ.
ರಾಜಾರೋಷವಾಗಿ ಮೊಬೈಲ್ ಬಳಸಿದ್ದ ಪ್ರಜ್ವಲ್
ಫೋನ್ ಹಿಡಿದುಕೊಂಡು ಪ್ರಜ್ವಲ್ ಮಾತನಾಡುತ್ತಿರುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜೈಲಿನ ಸೆಲ್‌ನಲ್ಲಿ ಪ್ರಜ್ವಲ್ ರೇವಣ್ಣ ಮಾತನಾಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ʼʼಹೊರಗಡೆ ಬಾ, ನಾನು ಅವರಿಗೆ ಫೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ. ಅತ್ತುಕೊಂಡು ಕೂತಿದ್ದರು. ನೀನು ಫೋನ್ ಮಾಡಿಲ್ಲ. ಏನ್ ಮಾಡುತ್ತಿದ್ದೆ?ʼʼ ಎಂದೆಲ್ಲ ಪ್ರಜ್ವಲ್ ಹೇಳುತ್ತಿದ್ದುದು ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ ಅವರು ಯಾರ ಬಳಿ ಮಾತನಾಡಿದ್ದಾರೆ ಎನ್ನುವುದನ್ನುಇನ್ನೂ ಗೊತ್ತಾಗಿಲ್ಲ.
ದಾಳಿ ನಡೆದಿದ್ದೇಕೆ?
ಜೈಲಿನಲ್ಲಿರುವ ರೌಡಿಗಳು ಹೊರಗಿನ ರೌಡಿಗಳ ಜತೆ ಸಂಪರ್ಕದಲ್ಲಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮತ್ತು ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎನ್ನುವ ಆರೋಪದ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಪರಿಶೀಲನೆ ವೇಳೆ ಜೈಲಿನಲ್ಲಿ ಪತ್ತೆಯಾದ 10ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಅತ್ಯಾಚಾರ ಪ್ರಕರಣದ ಕೈದಿಯಾಗಿ ಪ್ರತ್ಯೇಕ ಬ್ಯಾರಕ್‌ನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ ಆ್ಯಂಡ್ರಾಯ್ಡ್ ಫೋನ್ ಹೇಗೆ ಬಂತು? ಎಷ್ಟು ದಿನಗಳಿಂದ ಬಳಕೆ ಮಾಡುತ್ತಿದ್ದರು? ಪ್ರಜ್ವಲ್‌ಗೆ ಮೊಬೈಲ್ ತಂದು ಕೊಟ್ಟವರು ಯಾರು? ಎಂಬುದರ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಈ ಹಿಂದೆಯೂ ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ಸುದ್ದಿಯಲ್ಲಿತ್ತು. ಕೆಲವು ದಿನಗಳ ಹಿಂದೆ ನಡೆದ ಬೃಹತ್ ಕಾರ್ಯಾಚರಣೆ ವೇಳೆ ಕೈದಿಗಳ ಬಳಿ ಇದ್ದ ಫೋನ್, ಸಿಮ್ ಕಾರ್ಡ್, ಚಾರ್ಜರ್, ಇಯರ್‌ಫೋನ್, ವಿವಿಧ ಬಗೆಯ ಶೂ, ದಿಂಬು, ಪಾತ್ರೆ, ಅಡುಗೆ ಸಾಮಗ್ರಿ ಮತ್ತು ಚೇರ್ ವಶಪಡಿಸಿಕೊಳ್ಳಲಾಗಿತ್ತು. ಸುಮಾರು ಎರಡು ಟ್ರ್ಯಾಕ್ಟರ್ ಲೋಡ್‌ನಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಇಷ್ಟಾಗಿಯೂ ಇಂತಹ ಪ್ರಕರಣ ಮರುಕಳಿಸುತ್ತಲೇ ಇದೆ.