ಬೆಂಗಳೂರು: ರಸ್ತೆ ಬದಿ ಲೈಟ್ ಕಂಬ ಬಿದ್ದು ನೇಪಾಳ ಮೂಲದ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ನಗರದ ಮಾರತ್ತಹಳ್ಳಿಯ ಸಂಜಯನಗರದಲ್ಲಿ ನಡೆದಿದೆ. ಶುಕ್ರವಾರ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಆರ್ಕೆಸ್ಟ್ರಾ ಕೂಡ ನಡೆಯುತ್ತಿತ್ತು. ರಾತ್ರಿ 11 ಗಂಟೆಯಲ್ಲಿ ಜನ ರಸ್ತೆಯ ಪಕ್ಕದಲ್ಲಿ ನಿಂತು ನೋಡುತ್ತಿದ್ದಾಗ ಏಕಾಏಕಿ ಕಂಬ ಬಿದ್ದು, ಅವಘಡ ಸಂಭವಿಸಿದೆ.
ಲೈಟ್ ಕಂಬ ಹಳೆಯದಾಗಿದ್ದು, ಕರೆಂಟ್ ಕನೆಕ್ಷನ್ ಇರಲಿಲ್ಲ. ಕಂಬ ಮಾತ್ರ ಹಾಗೇ ಬಿಡಲಾಗಿತ್ತು. ಜಿಬಿಎ ಅಧಿಕಾರಿಗಳಿಗೆ ತುಂಬಾ ದಿನದಿಂದ ತೆರವು ಮಾಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಸದ್ಯ ಸಾವನ್ನಪ್ಪಿದ್ದ ವ್ಯಕ್ತಿ ನೇಪಾಳದವನಾಗಿದ್ದು, ಆತನ ಗುರುತು ಪತ್ತೆ ಮಾಡಲು ಮುಂದಾಗಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರಿನಲ್ಲಿ ಬಿ.ಕಾಂ ವಿದ್ಯಾರ್ಥಿಯ ಭೀಕರ ಹತ್ಯೆ; ನಾಲ್ವರು ಅಪ್ರಾಪ್ತರ ಬಂಧನ
ಬೆಂಗಳೂರು: ಯುವತಿಯೊಬ್ಬಳಿಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ವಿಚಾರಕ್ಕೆ ಆರಂಭವಾದ ಗಲಾಟೆ ಅಂತಿಮವಾಗಿ ಬಿ.ಕಾಂ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಯೋಗೇಶ್ ಹತ್ಯೆಯಾದ ವಿದ್ಯಾರ್ಥಿ. ಆರೋಪಿಗಳ ಪೈಕಿ ಒಬ್ಬಾತ ಪ್ರೀತಿಸುತ್ತಿದ್ದ ಯುವತಿಯ ಬಗ್ಗೆ ಯೋಗೇಶ್ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಆತನ ಸ್ನೇಹಿತರ ಗುಂಪು ಯೋಗೇಶ್‌ನನ್ನು ಮುಗಿಸಲು ಸಂಚು ರೂಪಿಸಿತ್ತು. ಇದಕ್ಕಾಗಿ ಆನ್‌ಲೈನ್ ಮೂಲಕ ಚಾಕು ಆರ್ಡರ್ ಮಾಡಿ ತರಿಸಿಕೊಂಡಿದ್ದರು.
ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಯೋಗೇಶ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ ಗುಂಪು, ಅಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಚಾಕುವಿನಿಂದ ಯೋಗೇಶ್‌ನ ಎದೆಯ ಭಾಗಕ್ಕೆ ಬಲವಾಗಿ ಇರಿಯಲಾಗಿದೆ. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಅತಿಯಾದ ರಕ್ತಸ್ರಾವದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ (ಎಪಿ ನಗರ) ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ವಶಕ್ಕೆ ಪಡೆಯಲಾದ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪರಾರಿಯಾಗಿರುವ ಪ್ರಮುಖ ಆರೋಪಿಯ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡ ತನಿಖೆ ಮುಂದುವರಿಸಿದೆ.