Shivaram Hebbar: ಶಾಸಕ ಶಿವರಾಮ್ ಹೆಬ್ಬಾರ್‌ಗೂ ಬಿಜೆಪಿಗೂ ಸಂಬಂಧ ಇಲ್ಲ: ಆರ್.ಅಶೋಕ್ ಶಾಕಿಂಗ್ ಹೇಳಿಕೆ!
Shivaram Hebbar: ಶಾಸಕ ಶಿವರಾಮ್ ಹೆಬ್ಬಾರ್‌ಗೂ ನಮ್ಮ ಪಕ್ಷಕ್ಕೂ ಮುಗಿದ ಅಧ್ಯಾಯ. ಅವರು ಈಗ ನಮ್ಮ ಪಕ್ಷದವರಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಹಲವು ತಿಂಗಳುಗಳಿಂದ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡು ಬರುತ್ತಿರುವ ಬಗ್ಗೆ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.


ಬೆಂಗಳೂರು: ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ( Shivaram Hebbar) ಅವರು ಹಲವು ತಿಂಗಳುಗಳಿಂದ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡು ಬರುತ್ತಿರುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಕೊನೆಗೂ ಮೌನ ಮುರಿದಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಶಾಕಿಂಗ್ ಹೇಳಿಕೆ ನೀಡಿದ್ದು, ಶಾಸಕ ಶಿವರಾಮ್ ಹೆಬ್ಬಾರ್‌ಗೂ ನಮ್ಮ ಪಕ್ಷಕ್ಕೂ ಮುಗಿದ ಅಧ್ಯಾಯ. ಅವರು ಈಗ ನಮ್ಮ ಪಕ್ಷದವರಲ್ಲ ಎಂದು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸದನದಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೆ, ಹೆಬ್ಬಾರ್ ಅವರು ಕುಳಿತೇ ಇರುತ್ತಾರೆ. ಅವರನ್ನು ನಾವು ಕೈ ಬಿಟ್ಟಿದ್ದೇವೆ. ಶಿವರಾಮ್ ಹೆಬ್ಬಾರ್‌ಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಿಗೇ ಆಗಲಿ ಕೊಲೆ ಬೆದರಿಕೆ ಹಾಕಬಾರದು. ಹಿಂದುತ್ವದ ಪರ ಮಾತನಾಡುವ, ಹೋರಾಡುವ ಯಾರಿಗೇ ಆಗಲಿ ನಮ್ಮ ಬೆಂಬಲ ಇರಲಿದೆ. ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ, ಅವರು ವಿಧಾನಸಭೆಯಲ್ಲಿ ಸುಮ್ಮನೇ ಕುಳಿತುಕೊಳ್ಳುತ್ತಿದ್ದರು. ಕರೆದರೂ ಬರುತ್ತಿರಲಿಲ್ಲ. ಆದ್ದರಿಂದ ಅವರದ್ದು ಮುಗಿದ ಅಧ್ಯಾಯ, ಅವರ ಬಗ್ಗೆ ನಮ್ಮ ಬಳಿ ಕೇಳಲು ಬರಬೇಡಿ ಎಂದು ಅಶೋಕ್ ಹೇಳಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ಅಧಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಹೆಬ್ಬಾರ್ ಬಗ್ಗೆ ನೀವ್ಯಾಕೆ ಕನವರಿಸ್ತೀರಿ, ನೋಟಿಸ್ ಕೊಟ್ಟಾಗಿದೆ, ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತೆ ಬಿಡಿ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | BY Vijayendra: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು ಕೇಂದ್ರದ ವಿರುದ್ಧ ಅಪಪ್ರಚಾರ: ವಿಜಯೇಂದ್ರ
ಮುಸ್ಲಿಮರಿಗೆ ಅಲ್ಪಸಂಖ್ಯಾತ ಮಾನ್ಯತೆ ಏಕೆ?
ಜಾತಿ ಗಣತಿ ವರದಿ ವಿಚಾರಕ್ಕೆ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ಟೋಪಿ ಹಾಕಿಕೊಂಡು ಏಕೆ ಜಾತಿ ಗಣತಿ ವರದಿ ಹಿಂದೆ ಬಿದ್ದಿದ್ದಾರೋ ಗೊತ್ತಿಲ್ಲ. ಇದು ಹತ್ತು ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆ. ಈಗ ಜನಸಂಖ್ಯೆ ಹೆಚ್ಚಾಗಿದೆ. ಸಮೀಕ್ಷೆ ಮಾಡಿದಾಗ ಆರು ಕೋಟಿ ಇದ್ದರು. ಈಗ ಏಳು ಕೋಟಿ ಜನ ಇದ್ದಾರೆ. ಒಂದು ಕೋಟಿ ಜನರು ಸಮುದ್ರಕ್ಕೆ ಬೀಳಬೇಕಾ? ಮುಸ್ಲಿಮರು ನಂ.1 ಎಂದಾದರೆ ಅಲ್ಪಸಂಖ್ಯಾತ ಮಾನ್ಯತೆ ಏಕೆ ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಕಾಯ್ದೆ ಜಾರಿಗೆ ಬಿಡಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲ್ಲ ಎನ್ನಲು ಜಮೀರ್ ಯಾರು?, ಕಂಡ ಜಾಗವನ್ನೆಲ್ಲ ವಕ್ಫ್‌ದು ಅಂತ ಹೇಳಲು ಬೋರ್ಡ್ಗೆ ಯುಪಿಎ ಸರ್ಕಾರ ಹೇಗೆ ಅಧಿಕಾರ ಕೊಟ್ಟಿತು? ಪಾರ್ಲಿಮೆಂಟ್ ನಿರ್ಧಾರ ಅದು. ಮಾಡಲೇಬೇಕು. ಅಂಬೇಡ್ಕರ್ ಸಂವಿಧಾನ ಇದು. ಮಾಡಿಯೇ ಮಾಡಿಸ್ತೇವೆ. ಕಾಂಗ್ರೆಸ್ ಎಷ್ಟು ಸಾರಿ ಸಂವಿಧಾನ ಬದಲಾವಣೆ ಮಾಡಿಲ್ಲ. ವಕ್ಫ್ ಕಾಯ್ದೆ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.