ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳ (Mobile theft) ಸಂಖ್ಯೆ ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಈ ನಡುವೆ ಐಪಿಎಲ್ ಪಂದ್ಯಗಳನ್ನೂ ಟಾರ್ಗೆಟ್ ಮಾಡಿರುವ ಕಳ್ಳರು, ಕ್ರೀಡಾಂಗಣದಲ್ಲಿ ತಮ್ಮ ಕೈಚಳಕ ತೋರಿರುವುದು ಕಂಡುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಮಾರ್ಚ್ 28ರದಂದು ನಡೆದ ಆರ್‌ಸಿಬಿ ಮತ್ತು ಎಚ್‌ಆರ್‌ಎಚ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ 50ಕ್ಕೂ ಹೆಚ್ಚು ಮೊಬೈಲ್‌ಗಳ ಕಳ್ಳತನ ನಡೆದಿರುವುದು ಕಂಡುಬಂದಿದೆ. ಇದರಿಂದ ಪಂದ್ಯ ನೋಡುವ ಸಂತಸದಲ್ಲಿದ್ದ ಹಲವು ಪ್ರೇಕ್ಷಕರು ಬೇಸರದಲ್ಲೇ ಕ್ರೀಡಾಂಗಣದಿಂದ ನಿರ್ಗಮಿಸಿದ್ದಾರೆ.
ಮೊಬೈಲ್ ಫೋನ್ ಕಳ್ಳರು ವ್ಯವಸ್ಥಿತವಾಗಿ ಕೃತ್ಯ ಎಸಗಿದ್ದು, ಈ ಬಗ್ಗೆ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಐಪಿಎಲ್ ಪಂದ್ಯ ವೀಕ್ಷಣೆಗೆ ತೆರಳುವವರು ತುಂಬಾ ಎಚ್ಚರದಿಂದ ಇರಬೇಕು. ಯಾಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಎಚ್‌ಆರ್‌ಎಚ್ ಪಂದ್ಯದ ವೇಳೆ P3 ಸ್ಟ್ಯಾಂಡ್ ಒಂದರಲ್ಲೇ ನನ್ನ ಗಂಡನ ಫೋನ್ ಸೇರಿ 50 ರಿಂದ 60 ಮೊಬೈಲ್‌ಗಳು ಕಳ್ಳತನವಾಗಿವೆ.
ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ನನ್ನ ಪತಿ ನೀರು ತರಲು ಹೋದಾಗ ಅವರ ಫೋನ್ ಕಳುವಾಗಿರುವುದು ಗಮನಕ್ಕೆ ಬಂದಿದೆ. ಅವರಂತೆ ಅಲ್ಲಿ ಹತ್ತಾರು ಜನರು ಫೋನ್ ಕಳೆದುಕೊಂಡು ಕಂಗಾಲಾಗಿದ್ದರು. ಈ ಬಗ್ಗೆ ನಾವು ಸ್ಟೇಡಿಯಂನಲ್ಲಿದ್ದ ಪೊಲೀಸರಿಗೆ ತಿಳಿಸಿದಾಗ ಯಾವುದೇ ಪ್ರಯೋಜನವಾಗಲಿಲ್ಲ.
ಬಳಿಕ ನಾವು ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿ ಹಲವು ಮಂದಿ ಫೋನ್ ಕಳ್ಳತನವಾಗಿದ್ದ ಬಗ್ಗೆ ದೂರು ನೀಡಲು ನಿಂತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆ ವೇಳೆಗೆ ಪೊಲೀಸರು ಸುಮಾರು 10 ರಿಂದ 12 ಅಪ್ರಾಪ್ತ ವಯಸ್ಸಿನ ಹುಡುಗರನ್ನು ವಶಕ್ಕೆ ಪಡೆದಿದ್ದರು. ಅವರು ತಂಡದ ಜರ್ಸಿ ಧರಿಸಿ, ಕಾಂಪ್ಲಿಮೆಂಟರಿ ಟಿಕೆಟ್ ಹಿಡಿದುಕೊಂಡಿದ್ದರು. ಹೀಗಾಗಿ ಇದು ದೊಡ್ಡ ಮಟ್ಟದ ಸಂಘಟಿತ ಜಾಲವಿರಬಹುದು. ನಾವು ಈ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಚೆನ್ನೈ ಮತ್ತು ಮುಂಬೈನಲ್ಲಿ ಇದೇ ರೀತಿ ಮೊಬೈಲ್‌ಗಳ ಕಳ್ಳತನವಾಗಿರುವುದು ತಿಳಿದುಬಂತು ಎಂದು ಹೇಳಿದ್ದಾರೆ.
IPL 2026 Tickets: ಈಡೇರಿದ ಶಾಸಕರ ಬೇಡಿಕೆ; ಪ್ರತಿ ಐಪಿಎಲ್ ಪಂದ್ಯಕ್ಕೂ ಸಿಗುತ್ತೆ 3 ಟಿಕೆಟ್!
ಈ ರೀತಿ ಎಲ್ಲಾ ಐಪಿಎಲ್ ಮ್ಯಾಚ್‌ಗಳಲ್ಲೂ ನಡೆಯುತ್ತಿದೆ. ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಪ್ರೇಕ್ಷಕರು ಆಹಾರ ಮತ್ತು ಪಾನೀಯ ತರಲು ಹೋದಾಗ ಕಳ್ಳರು ಆ ಸಮಯವನ್ನು ಬಳಸಿಕೊಂಡಿದ್ದಾರೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.