ಬೆಂಗಳೂರು ಫೆ 17: ಸಾರ್ವಜನಿಕ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ. ರಾಮಯ್ಯ (P Ramaiah) ಮಾದರಿಯಾಗಿ ಕಾಣುತ್ತಾರೆ. ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಶ್ಲಾಘಸಿದರು. ಗಾಂಧಿ ಭವನದಲ್ಲಿ ನಡೆದ ಹಿರಿಯ ಪತ್ರಕರ್ತ ದಿವಂಗತ ಪಿ. ರಾಮಯ್ಯ ಅವರ ಶ್ರದ್ಧಾಂಜಲಿ ಹಾಗೂ "ನಾನು ಹಿಂದೂ ರಾಮಯ್ಯ" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಆಗುಹೋಗುಗಳನ್ನು, ಒಳಿತು ಕೆಡುಕುಗಳನ್ನೇ ಧ್ಯಾನಿಸುವ ಪತ್ರಕರ್ತರು ಸದಾ ಈ ಧಾವಂತದಲ್ಲಿಯೇ ಉಳಿದು ಕ್ರಮೇಣ ಅಸೂಕ್ಮರಾಗುವ, ಸಂವೇದನೆಗಳನ್ನು ಕಳೆದುಕೊಳ್ಳುವ ಅಪಾಯ ಹೆಚ್ಚು. ಇದನ್ನು ಪ್ರಜ್ಞಾಪೂರ್ವಕಾಗಿ ಮೀರುವ ಪ್ರಯತ್ನ ಮಾಡಿದಾಗಷ್ಟೆ ವೃತ್ತಿ ಘನತೆ ಹೆಚ್ಚುತ್ತದೆ. ನಮ್ಮೆಲ್ಲರ ವೈಯಕ್ತಿಕ ಹಳಹಳಿಕೆ, ಧಾವಂತಗಳ ನಡುವೆಯೂ ಇತರರ ಘನತೆಗೆ ಕುಂದು ಬಾರದಂತೆ ವೃತ್ತಿಪರರಾಗುವುದು, ಪತ್ರಿಕೋದ್ಯಮ ನಡೆಸುವುದು, ಪತ್ರಕರ್ತರಾಗಿ ಉಳಿಯುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದರು.
ಅಗಲಿದ ಹಿರಿಯ ಚೇತನ ಪಿ. ರಾಮಯ್ಯ ಈ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಪತ್ರಕರ್ತರಾಗುವುದು ಒಂದು ನಮೂನೆಯ ದೀಕ್ಷೆ ಇದ್ದಂತೆ. ಒಮ್ಮೆ ನೀವು ಪತ್ರಕರ್ತರೆಂದು ಗುರುತಿಸಿಕೊಂಡ ಮೇಲೆ ಕೆಲವು ನಿಷ್ಠುರ ಗುಣಗಳು ಅನಾಯಸವಾಗಿ ಬಂದುಬಿಡುತ್ತವೆ. ಮುಂದೆ ರಾಜಕಾರಣಿಯಾದರೂ ಸರಿಯೇ, ಉದ್ಯಮಿಯಾದರೂ ಸರಿಯೇ. ಒಮ್ಮೆ ಪತ್ರಕರ್ತರಾದವರು ಮಾಜಿಯಾಗಲಾರರು, ನಿವೃತ್ತರಾಗಲಾರರು. ಚಲನಶೀಲತೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಇದ್ದ ಪತ್ರಕರ್ತರಿಗೆ ಸಾವು ಇರದು ಎಂದು ಅಭಿಪ್ರಾಯಪಟ್ಟರು.
ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಬಲ್ಲರು. ಅವರಿಗೂ ಆತ್ಮತೃಪ್ತಿ ತರಬಲ್ಲವು. ಇಂಥಾ ಆತ್ಮತೃಪ್ತಿ ಗಳಿಸಿದ್ದಾಗಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದ ರಾಮಯ್ಯ ಅವರು, ತಾವು ಸಾರ್ಥಕ್ಯವಾಗಿ ಬಾಳಿ, ತಮ್ಮೊಡನಿರುವ ವೃತ್ತಿಪರರ ಘನತೆಯನ್ನು ಎತ್ತಿ ಹಿಡಿದು ಪತ್ರಕರ್ತರಾಗಿ ಅಷ್ಟೆ ಅಲ್ಲ ವ್ಯಕ್ತಿತ್ಚ ದೃಷ್ಟಿಯಿಂದಲೂ ಅನುಸರಣೀಯರಾಗಿದ್ದರು ಎಂದು ಧನ್ಯತೆ ಅರ್ಪಿಸಿದರು.
ಸಾರ್ವಜನಿಕ ಜೀವನ ವಿಪರೀತ ಕಲುಷಿತ ಮತ್ತು ಕಳಪೆ ಆಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಅವರಂತಹ ಒಂದು ಅಪ್ಪಟ ಮಾದರಿ ನಮ್ಮನ್ನೆಲ್ಲಾ ಅಗಲಿದೆ. ರಾಮಯ್ಯ ಅವರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆ-ಮೌಲ್ಯ-ನೈತಿಕ ಶಕ್ತಿ ಹೆಚ್ಚಿಸಲು ಶ್ರಮಿಸಿದರು ಎಂದು ವಿವರಿಸಿದರು.
ಹಾಗೆಯೇ ಪಿ.ರಾಮಯ್ಯ ಅವರು ರಾಜಕಾರಣಿಯಾಗಿ ರಾಜಕಾರಣದ ಉದ್ದೇಶ, ಕಾಳಜಿಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಸಾರ್ವಜನಿಕ ಜೀವನದ ಮೌಲ್ಯವನ್ನು ಉನ್ನತ ಮಟ್ಟದಲ್ಲಿ ಉಳಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ಪಿ. ರಾಮಯ್ಯ ಪತ್ರಕರ್ತರಾಗಿ, ರಾಜಕಾರಣಿಯಾಗಿ ಅವರು ತಮ್ಮ ಕಾಲದ ಸಾರ್ವಜನಿಕ ಬದುಕಿನ ಮೌಲ್ಯಗಳ ಪ್ರತಿರೂಪವಾಗಿದ್ದರು. ವೃತ್ತಿಪರತೆ ಮತ್ತು ಸಾಮಾಜಿಕ ಬದ್ಧತೆ ರಾಮಯ್ಯನವರ ವ್ಯಕ್ತಿತ್ವದ ಎರಡು ಕಣ್ಣುಗಳಾಗಿದ್ದವು.
ಸುದ್ದಿಯನ್ನು ಅವರು ಗ್ರಹಿಸುತ್ತಿದ್ದ ರೀತಿಯೇ, ಅವರು ಸಮಾಜಮುಖಿ ಆಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಆಗ ಸಮಾಜಮುಖಿಯಲ್ಲದ ಪತ್ರಕರ್ತರಿಗೆ ವೃತ್ತಿಯಲ್ಲಿ ಜಾಗ ಇರಲಿಲ್ಲ, ಸಮಾಜಮುಖಿಯಲ್ಲದ ಬರಹಗಳಿಗೆ ಪುಟಗಳಲ್ಲಿ ಜಾಗವೂ ಸಿಗುತ್ತಿರಲಿಲ್ಲ. ಈ ಹೊತ್ತಿನಲ್ಲಿ ಇವೆರಡೂ ಮಾದರಿಗಳೂ ಸವಕಲಾಗಿ ಕಾಣುತ್ತಿರುವುದು ಬೇಸರದ ಸಂಗತಿ ಎಂದರು.
ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಕೆ.ವಿ. ಪ್ರಭಾಕರ್
ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೋಡೆ ಪಿ ಕೃಷ್ಣ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, KUWJ ಅಧ್ಯಕ್ಷ ಶಿವಾನಂದ ತಗಡೂರು, ಈ ಸಂಜೆ ಸಂಪಾದಕ ಟಿ. ವೆಂಕಟೇಶ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ. ವಿಠ್ಠಲ್ ಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಇತರರು ಉಪಸ್ಥಿತರಿದ್ದರು.