ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ಮಂಗಳವಾರ ಸಂಜೆ ಭಾರಿ ವ್ಯತ್ಯಯವಾಗಿದೆ. ಒಂದು ರೈಲಿನಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರೈಲುಗಳು ಒಂದೇ ನಿಲ್ದಾಣಗಳಲ್ಲಿ ನಿಂತಿವೆ. ಸಮಸ್ಯೆ ಸರಿಪಡಿಸಲು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರು.
ಈ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ಒಂದು ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿದೆ. ತಾಂತ್ರಿಕ ದೋಷವನ್ನು ಶೀಘ್ರವಾಗಿ ಸರಿಪಡಿಸಲು ಕಾರ್ಯಾಚರಣೆ ಹಾಗೂ ನಿರ್ವಹಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಉಂಟಾಗಿರುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ತಿಳಿಸಿದೆ.
ಸಂಜೆಯಾದ ಕೂಡಲೇ ನಮ್ಮ ಮೆಟ್ರೋ ನೇರಳೆ ಮಾರ್ಗ ಪ್ರಯಾಣಿಕರಿಂದ ತುಂಬಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಕಂಪನಿಗಳ ಉದ್ಯೋಗಿಗಳು ಕೆಲಸ ಮುಗಿಸಿ ಮನೆಗಳಿಗೆ ತೆರಳಲು ನೇರಳೆ ಮಾರ್ಗದ ರೈಲುಗಳನ್ನು ಅವಲಂಬಿಸಿರುತ್ತಾರೆ. 30 ನಿಮಿಷಕ್ಕೂ ಅಧಿಕ ಕಾಲ ರೈಲು ಸ್ಥಗಿತವಾಗಿರುವುದರಿಂದ ಕಬ್ಬನ್ ಪಾರ್ಕ್, ಎಂಜಿ ರಸ್ತೆ, ಟ್ರಿನಿಟಿ, ಹಲಸೂರು, ಇಂದಿರಾನಗರ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂದಿತು.
Bengaluru Metro fire: ಬೆಂಗಳೂರಿನ ನಾಗಸಂದ್ರ ಮೆಟ್ರೋ ಸ್ಟೇಷನ್‌ನಲ್ಲಿ ಬೆಂಕಿ ಅವಘಡ; ಆತಂಕದ ಸ್ಥಿತಿ ನಿರ್ಮಾಣ
ಪ್ರಸ್ತುತ ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ಹಾಗೂ ಎಂ ಜಿ ರಸ್ತೆ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ರೈಲುಗಳು ಸಂಚರಿಸುತ್ತಿವೆ. ಎಂಜಿ ರಸ್ತೆಯಿಂದ ಮಾಗಡಿ ರಸ್ತೆವರೆಗೂ ಸಂಚಾರ ಸ್ಥಗಿತವಾಗಿದೆ.