ಬೆಂಗಳೂರು: ಶಸ್ತ್ರಚಿಕಿತ್ಸೆ ಬಳಿಕ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬರು ನೋವಿನಿಂದ ನರಳಾಡಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ವೈದ್ಯರ ಎಡವಟ್ಟಿನಿಂದ ರೋಗಿ ಪ್ರಾಣ ಕಳೆದುಕೊಂಡ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ವಿರುದ್ಧ ರೋಗಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ಶಾ ನವಾಜ್ ಎಂಬುವವರೇ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ದುರ್ದೈವಿ. ಮರ್ಮಾಂಗದಲ್ಲಿ ಗಡ್ಡೆ ಕಾಣಿಸಿಕೊಂಡ ಹಿನ್ನೆಲೆ ಶಾ ನವಾಜ್ ಒಂದೂವರೆ ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿದ್ದರು. ಸೋಂಕಿನ ಕಾರಣ ಆತನ ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು, ನಂತರ ಮುಂದಿನ ಚಿಕಿತ್ಸೆಗಾಗಿ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಿದ್ದರು. ಆದರೆ, ಆಪರೇಷನ್ ವಿಭಾಗ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಡುವೆ ಸಮನ್ವಯತೆಯ ಕೊರತೆಯ ಕಾರಣದಿಂದ, ಗಾಯ ಆರುವ ಮುನ್ನವೇ ರೋಗಿಯನ್ನು ಡಿಸ್ಚಾರ್ಜ್ ಆಗುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಕನಿಷ್ಠಪಕ್ಷ ಶಸ್ತ್ರಚಿಕಿತ್ಸೆ ಮಾಡಿದ ಜಾಗಕ್ಕೆ ಹೊಲಿಗೆ ಕೂಡ ಹಾಕದೆ ಅವರನ್ನು ಆಸ್ಪತ್ರೆಯಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮತ್ತೆ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಅನಿವಾರ್ಯವಾಗಿ ಶಾ ನವಾಜ್ ಅವರ ಪತ್ನಿ ತಮ್ಮ ಗಂಡನನ್ನು ಮೂರು ದಿನಗಳ ಕಾಲ ಆಸ್ಪತ್ರೆಯ ಹೊರಗಿನ ಫುಟ್‌ಪಾತ್‌ನಲ್ಲೇ ಇರಿಸಿದ್ದರು. ರಕ್ತಸ್ರಾವ, ತೀವ್ರ ನೋವಿನಿಂದ ನರಳಿ ಶಾ ನವಾಜ್ ಕೊನೆಯುಸಿರೆಳೆದಿದ್ದಾರೆ. ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಶಾ ನವಾಜ್ ಅವರ ಪತ್ನಿ ಮತ್ತು ನಾಲ್ವರು ಮಕ್ಕಳು ಬೀದಿಗೆ ಬಿದ್ದಿದ್ದಾರೆ.
ತನಿಖೆಗೆ ಸಮಿತಿ ರಚನೆ
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್, ಪ್ರಕರಣದ ತನಿಖೆಗಾಗಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ರೋಗಿಯನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ ನಮ್ಮ ಗಮನಕ್ಕೆ ಬಂದಿದೆ. ಸಮಿತಿಯ ವರದಿಯ ಆಧಾರದ ಮೇಲೆ ವೈದ್ಯರು ಅಥವಾ ಸಿಬ್ಬಂದಿಯ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.