ಬೆಂಗಳೂರು, ಏ.10: ತನ್ನಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಪತ್ನಿಯ ಮೇಲೆ ಬಲವಂತವಾಗಿ ಸಂಭೋಗ (Physical Abuse) ನಡೆಸಿದ ಪತಿ (husband) ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ (Karnataka high court) ನಿರಾಕರಿಸಿದೆ. ಬಲವಂತದ ಸಂಭೋಗ, ಜೀವ ಬೆದರಿಕೆ ಮತ್ತು ಮನೆಗೆ ಅತಿಕ್ರಮ ಪ್ರವೇಶ ಆರೋಪ ಮೇಲೆ ಪತ್ನಿ (wife) ನಗರದ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನ ಸಂಬಂಧ ತನ್ನ ವಿರುದ್ಧ ಅಧೀನ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ತಮಿಳುನಾಡಿನ ದಕ್ಷಿಣ ಮಧುರೈ ಜಿಲ್ಲೆಯ ನಿವಾಸಿ ಆರ್.ನಿಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಜಾಗೊಳಿಸಿತು.
ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು, ತನ್ನ ಖಾಸಗಿ ಭಾಗದಲ್ಲಿ ಉಂಟಾದ ನೋವಿನಿಂದ ರಾತ್ರಿ ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ಪತ್ನಿ (ದೂರುದಾರೆ) ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯ ದಾಖಲಾತಿಗಳಲ್ಲಿ ಪತ್ನಿ ಹೊರರೋಗಿಗಳ ವಿಭಾಗಕ್ಕೆ ದಾಖಲಾಗಿರುವುದಾಗಿ ಉಲ್ಲೇಖವಾಗಿದೆ. ಸಂಭೋಗ ನಡೆದಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳುತ್ತದೆ. ಇದರಿಂದ ಪತಿಯನ್ನು ಸುಳ್ಳು ಕೇಸಿನಲ್ಲಿ ಪತ್ನಿ ಸಿಲುಕಿಸಿರುವುದು ತಿಳಿಯುತ್ತದೆ ಎಂದರು.
ದೂರುದಾರೆ ಪತ್ನಿ ಖುದ್ದು ವಾದ ಮಂಡಿಸಿ, ಘಟನೆ ನಡೆದ ದಿನ ನಾನು ಮುಂಜಾನೆ 4.40ಕ್ಕೆ ತುರ್ತು ನಿಗಾ ಘಟಕಕ್ಕೆ ದಾಖಲಾಗಿದ್ದೇನೆ. ಆ ಸಮಯದಲ್ಲಿ ಹೊರರೋಗಿ ವಿಭಾಗ ತೆರೆದಿರಲಿಲ್ಲ. ಆ ಸಮಯದಲ್ಲಿ ಸ್ತ್ರೀರೋಗ ತಜ್ಞೆ ಇರಲಿಲ್ಲ. ಅದಕ್ಕೆ ನೀವು ದಾಖಲಾಗಬೇಕೇ ಎಂದು ನನಗೆ ಆಸ್ಪತ್ರೆ ಸಿಬ್ಬಂದಿ ಕೇಳಿದ್ದರು. ಆ ದಾಖಲಾತಿ ಫಾರಂನಲ್ಲಿ ಆ ಸಮಯ ಉಲ್ಲೇಖವಾಗಿದೆ. ಇನ್ನೂ ಪೊಲೀಸರು ಸಂಗ್ರಹಿಸಿರುವ ಸಿಡಿಆರ್‌ಯಿಂದ ಘಟನೆ ನಡೆದಾಗ ಪತಿ ಘಟನಾ ಸ್ಥಳದಲ್ಲಿರುವುದು ದೃಢಪಟ್ಟಿದೆ ಎಂದು ತಿಳಿಸಿದರು.
ಆರೋಪಿ ಪರ ವಕೀಲರು, ಪತ್ನಿ ದಾಖಲಿಸಿರುವ ಕ್ರೌರ್ಯ ಪ್ರಕರಣ ಕುರಿತು ಮಾತುಕತೆ ನಡೆಸಲು ಪತ್ನಿಯೇ ಮನೆಗೆ ಪತಿಯನ್ನು ಕರೆದಿದ್ದರು. ಆ ವೇಳೆ ಸಂಭೋಗ ನಡೆದೇ ಇಲ್ಲ ಎಂದು ಪ್ರತಿಪಾದಿಸಿದರು. ಪತ್ನಿಯು, 2016ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ ಎಂದು ಪತಿ ಹೇಳುತ್ತಿದ್ದಾರೆ. ಆದರೆ, 2019ರಿಂದ ಪ್ರತ್ಯೇಕವಾಗಿ ವಾಸವಾಗಿದ್ದೇವೆ ಎಂದು ನಾನು ಹೇಳುತ್ತಿದ್ದೇನೆ. ಘಟನೆಯು 2021ರ ಅಂತ್ಯದಲ್ಲಿ ನಡೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
Physical Abuse: ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಿಹಾರದ ಕೂಲಿ ಕಾರ್ಮಿಕ
ಪತಿಯ ಪರ ವಕೀಲರು, ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಕಾಯ್ದಿರಿಸಬೇಕು ಎಂದು ಎಂದು ಕೋರಿದರು. ಅಂತಿಮವಾಗಿ ನ್ಯಾಯಪೀಠ, ಆರೋಪಗಳನ್ನು ಕೈಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪತಿಗೆ ಅನುಮತಿಸಿ ಅರ್ಜಿ ವಜಾಗೊಳಿಸಿತು.
ದೂರವಿದ್ದರೂ ಮನೆಗೇಕೆ ಹೋದರು? ನ್ಯಾಯಪೀಠ ಪ್ರಶ್ನೆ
ಆಗ ನ್ಯಾಯಮೂರ್ತಿಗಳು ಪತಿಯ ಪರ ವಕೀಲರನ್ನು ಉದ್ದೇಶಿಸಿ, ಸಂಭೋಗ ನಡೆದಿಲ್ಲ ಎಂದು ಪತಿ ಹೇಳುತ್ತಿದ್ದಾರೆ. ಆದರೆ, ವಿಚಾರಣಾ ನ್ಯಾಯಾಲಯ ವಿಚಾರಣೆ ರದ್ದತಿಗೆ ಕೋರಿದ ಈ ಅರ್ಜಿ ವಿಚಾರಣೆ ವೇಳೆ ಘಟನೆ ನಡೆದ ದಿನ ಏನೆಲ್ಲಾ ಸಂಭವಿಸಿದೆ ಎಂದು ಹೈಕೋರ್ಟ್ ನಿರ್ಧರಿಸಬೇಕೇ? ಈ ಕುರಿತು ವಿಚಾರಣಾ ನ್ಯಾಯಾಲಯವೇ ಸಾಕ್ಷ್ಯಧಾರಗಳ ವಿಚಾರಣೆ ನಡೆಸಿ ನಿರ್ಧರಿಸಬೇಕಲ್ಲವೇ? ಪತಿ ಮತ್ತು ಪತ್ನಿ ಪ್ರತ್ಯೇಕಗೊಂಡು ವಾಸ ಮಾಡುತ್ತಿದ್ದಾಗ, ಪತ್ನಿಯೊಂದಿಗೆ ಬಲವಂತದ ಸಂಭೋಗ ನಡೆಸಿದರೆ ಅದು ಅತ್ಯಾಚಾರ ಆಗುತ್ತದೆ ಎಂದು ಭಾರತೀಯ ದಂಡ ಸಂಹಿತೆ 376(ಬಿ) ಹೇಳುತ್ತದೆ. ಈ ಪ್ರಕರಣದಲ್ಲಿ ಪತಿ ಮತ್ತು ಪತ್ನಿ ಎರಡು ವರ್ಷ ಹಿಂದೆಯೇ ಪ್ರತ್ಯೇಕಗೊಂಡಿದ್ದಾರೆ. ಮತ್ತೇಕೆ ಪತ್ನಿ ಮನೆಗೆ ಪತಿ ಹೋದರು ಎಂದು ಪ್ರಶ್ನಿಸಿದರು.
Belagavi News: ಮದುವೆ ಆಗೋದಾಗಿ ನಂಬಿಸಿ ಯುವತಿ ಮೇಲೆ ನಿರಂತರ ಅತ್ಯಾಚಾರ, ವಂಚನೆ: ಆರೋಪಿ ಅರೆಸ್ಟ್
ಕ್ರೌರ್ಯ ಅಪರಾಧ ಮತ್ತು ಜೀವನಾಂಶ ವಿಚಾರಗಳ ವಿಚಾರಣೆ ವೇಳೆ, 2016ರಲ್ಲಿಯೇ ಪತ್ನಿ ಸ್ವ-ಇಚ್ಛೆಯಿಂದ ಮನೆಬಿಟ್ಟು ಹೋಗಿದ್ದಾರೆ ಎಂಬುದಾಗಿ ಪತಿಯೇ ಹೇಳಿದ್ದಾರೆ. ಆದರೆ, ಅತ್ಯಾಚಾರ ಕೇಸ್ ಬಂದಾಗ ನಾವು ಜೊತೆಗೆ ಇದ್ದೇವೆ ಎಂದು ಪತಿ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಅತ್ಯಾಚಾರ ಪ್ರಕರಣ ರದ್ದುಪಡಿಸಲಾಗದು. ದೋಷಾರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ. ಇಲ್ಲವೇ ಈ ಅರ್ಜಿಯನ್ನು ಮೆರಿಟ್ ಮೇಲೆ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದರೆ ಹೇಳಿ, ಕೂಡಲೇ ತೀರ್ಪು ಬರೆಸಲಾಗುವುದು ಎಂದು ಪತಿ ಪರ ವಕೀಲರಿಗೆ ಸೂಚಿಸಿತು.
ಬಲವಂತದ ಸೆಕ್ಸ್‌ಗೆ 7 ವರ್ಷ ಜೈಲು ಶಿಕ್ಷೆ
ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಪತ್ನಿ ಜೊತೆಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಐಪಿಸಿ 376ಬಿ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಿದ್ದು, ಕಾನೂನು ಪ್ರಕಾರ 7ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.