ಬೆಂಗಳೂರು: ಗಣೇಶ ಹಬ್ಬ (Ganesh Chaturthi 2026) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಸಿದ್ಧತೆಗಳು ಶುರುವಾಗಿದೆ. ಗಣೇಶ ಮೂರ್ತಿ ಖರೀದಿ, ಮಂಟಪ ನಿರ್ಮಾಣಕ್ಕೆ ಅನುಮತಿ ತೆಗೆದುಕೊಳ್ಳುವ ಕಾರ್ಯದಲ್ಲಿ ಗಣೇಶ ಮಂಡಳಿಗಳು ತೊಡಗಿವೆ. ಈ ನಡುವೆ ಬೆಂಗಳೂರಿನಲ್ಲಿ ಗಣೇಶೋತ್ಸವ ಆಯೋಜನೆಗೆ (Ganeshotsav DJ Ban) ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಗಣೇಶ ಹಬ್ಬಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ನಿಗದಿ ಮಾಡಿದ ಸಮಯ ಮೀರುವಂತೆ ಇಲ್ಲ. ಸುಪ್ರೀ ಕೋರ್ಟ್ ಆದೇಶದಂತೆ ಯಾವುದೇ ಡಿಜೆ ಬಳಕೆ ಮಾಡಲು ಅವಕಾಶ ಇಲ್ಲ. ಕಾನೂನುಬದ್ಧವಾಗಿ ಅನುಮತಿಸಲಾದ ಡೆಸಿಬಲ್ ಮಿತಿಯೊಳಗೆ ಧ್ವನಿವರ್ಧಕ ಬಳಸಲು ಮಾತ್ರ ಅವಕಾಶವಿರಲಿದೆ.
ಇನ್ನು ಆಯೋಜಕರ ಬಳಿ ಪೊಲೀಸರು ಸ್ವಯಂ ಸೇವಕರ ಲಿಸ್ಟ್ ಕೂಡ ಕೇಳಿದ್ದಾರೆ. ಗಣೇಶ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಮಾರ್ಗದ ಕುರಿತು ಮೊದಲೇ ಪೊಲೀಸರಿಗೆ ತಿಳಿಸಬೇಕು, ಯಾವುದೇ ಕಾರಣಕ್ಕೂ ಒಮ್ಮೆ ನೀಡಿದ ಮಾರ್ಗದಲ್ಲಿ ಭದ್ರತೆಯ ಕಾರಣ ಬದಲಾವಣೆ ಮಾಡಲು ಪೊಲೀಸರಿಗೆ ಅನುಮತಿ ನೀಡಲಾಗಿದೆ.
ಎಲ್ಲಾ ಇಲಾಖೆಗಳ ಅನುಮತಿ ಕಡ್ಡಾಯ
ಈ ಬಗ್ಗೆ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪ್ರತಿಕ್ರಿಯಿಸಿ, ಗೌರಿ ಗಣೇಶ ಹಬ್ಬಕ್ಕೆ ಪಿಒಪಿ ಗಣೇಶ ಬಳಕೆ ಅವಕಾಶ ಇಲ್ಲ. ಆಯೋಜಕರಿಗೆ ಮನವಿ ಮಾಡುತ್ತಿದ್ದು, ಈಗಾಗಲೇ ನಿಗದಿ ಮಾಡಿರುವ ಸಮಯವನ್ನು ಪಾಲನೆ ಮಾಡಬೇಕು. ರೂಟ್ ಕ್ಲಿಯರೆನ್ಸ್ ಮಾರ್ಗದ ಮೂಲಕವೇ ಸಾಗಬೇಕು. ಬೇರೆ ಬೇರೆ ಇಲಾಖೆಗಳು ನೀಡುವ ಎಲ್ಲಾ ಅನುಮತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರತಿ ವರ್ಷ ಸೌಂಡ್ ಬಗ್ಗೆ ಸಮಸ್ಯೆ ಬರುತ್ತದೆ, ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ನೀಡಿರುವ ಸೌಂಡ್ ಮಾತ್ರ ಬಳಕೆ ಮಾಡಿ. ಈ ಬಾರಿ ವಿಶೇಷವಾಗಿ ಸ್ವಯಂ ಸೇವಕರ ಪಟ್ಟಿಯನ್ನು ಪೊಲೀಸರಿಗೆ ನೀಡಬೇಕು. ಹಬ್ಬ ಶುರುವಾಗಿ, ಮುಕ್ತಾಯ ಆಗುವವರೆಗೂ ಸ್ವಯಂ ಸೇವಕರೊಂದಿಗೆ ಪೊಲೀಸರು ಸಂಪರ್ಕದಲ್ಲಿ ಇರ್ತಾರೆ. ಇಬ್ಬರ ನಡುವೆ ಒಂದು ಉತ್ತಮ ಸಂವಹನ ನಡೆಯಲು ಇದು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.
ಈ ನಿಯಮಗಳ ಪಾಲನೆ ಕಡ್ಡಾಯ
ಗಣೇಶ ಉತ್ಸವ ಸಮಿತಿಯ ಸದಸ್ಯರು ವಿನಾಯಕನ ವಿಗ್ರಹಗಳ ವಿವರಗಳು, ಪೆಂಡಾಲ್‌ಗಳು, ಧ್ವನಿವರ್ಧಕ ವ್ಯವಸ್ಥೆಗಳು ಹಾಗೂ ಫ್ಲೆಕ್ಸ್ ಬ್ಯಾನರ್‌ಗಳ ಮಾಹಿತಿಯ ಜೊತೆಗೆ, ವಿಗ್ರಹಗಳ ಎತ್ತರ ಮತ್ತು ಆಚರಣೆಯ ಅವಧಿಯಂತಹ ವಿವರಗಳನ್ನು ಪೊಲೀಸರಿಗೆ ಒದಗಿಸಬೇಕಾಗುತ್ತದೆ. ಅಲ್ಲದೆ, ವಿಗ್ರಹ ವಿಸರ್ಜನೆಯ ದಿನಾಂಕ, ಸಮಯ ಮತ್ತು ಮೆರವಣಿಗೆಯ ಮಾರ್ಗದ ಕುರಿತಾದ ಮಾಹಿತಿಯನ್ನೂ ಸಲ್ಲಿಸುವುದು ಕಡ್ಡಾಯವಾಗಿದೆ.
ಗಣೇಶ ಪೆಂಡಾಲ್‌ಗಳಲ್ಲಿ ಅಶ್ಲೀಲ ಪ್ರದರ್ಶನಗಳು ಇರಬಾರದು ಮತ್ತು ವಿಸರ್ಜನಾ ಮೆರವಣಿಗೆಗೆ ಯಾರೂ ಮದ್ಯಪಾನ ಮಾಡಿ ಬರಬಾರದು. ಪೆಂಡಾಲ್‌ಗಳಲ್ಲಿ ಅಥವಾ ಮೆರವಣಿಗೆಯ ಸಮಯದಲ್ಲಿ ಡಿಜೆ ಬಳಕೆಗೆ ಅನುಮತಿಯಿಲ್ಲ. ಉತ್ಸವ ಸಮಿತಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.