ಬೆಂಗಳೂರು: ವರ್ತೂರು ಬಳಿಯ ಕೊಡತಿ ಕ್ರಿಕೆಟ್ ಗ್ರೌಂಡ್‌ನಲ್ಲಿ ರುಂಡ ಪತ್ತೆಯಾಗಿದ್ದ ಪ್ರಕರಣಕ್ಕೆ (Human head found) ಟ್ವಿಸ್ಟ್ ಸಿಕ್ಕಿದೆ. ಮೊದಲಿಗೆ ಕೊಲೆ ಮಾಡಿ ವ್ಯಕ್ತಿಯ ರುಂಡವನ್ನು ಬಿಸಾಡಿರೋ ಶಂಕೆ ವ್ಯಕ್ತವಾಗಿತ್ತು. ಆದರೆ, ಅದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕನೊಬ್ಬನ ರುಂಡ ಎಂಬುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಗ್ರೌಂಡ್‌ನಲ್ಲಿ ಪತ್ತೆಯಾದ ರುಂಡ ಆಂಧ್ರಪ್ರದೇಶದ ಪುಂಗನೂರು ಮೂಲದ ವಿಶ್ವನಾಥ್ (28) ಎಂಬ ಯುವಕನದ್ದು ಎಂದು ಗುರುತಿಸಲಾಗಿದೆ. ಪ್ರೀತಿಯಲ್ಲಿ ಬಿದ್ದಿದ್ದ ವಿಶ್ವನಾಥ್, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಗರ್ಲ್‌ಫ್ರೆಂಡ್ ಜತೆ ಕರೆ ಮಾಡಿ ಮಾತನಾಡಿದ್ದ. ಬಳಿಕ ಕಳೆದ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ರೈಲು ಹರಿದ ರಭಸಕ್ಕೆ ಆತನ ದೇಹ ಹಾಗೂ ರುಂಡ ಎರಡು ತುಂಡಾಗಿದ್ದವು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ರೈಲ್ವೇ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ರಾತ್ರಿ ಪರಿಶೀಲನೆ ವೇಳೆ ಅವರಿಗೆ ತಲೆಯಿಲ್ಲದ ದೇಹ ಮಾತ್ರ ಪತ್ತೆಯಾಗಿತ್ತು, ರುಂಡ ಸಿಕ್ಕಿರಲಿಲ್ಲ.
ಬೆಳಗಿನ ಜಾವ ಬೀದಿ ನಾಯಿಗಳು ಆತನ ರುಂಡವನ್ನು ಸುಮಾರು 400 ಮೀಟರ್ ದೂರ ಕಚ್ಚಿಕೊಂಡು ಬಂದು ಕೊಡತಿ ಕ್ರಿಕೆಟ್ ಗ್ರೌಂಡ್‌ನಲ್ಲಿ ತಂದಿಟ್ಟಿದ್ದವು. ಬೆಳಿಗ್ಗೆ ಗ್ರೌಂಡ್‌ನಲ್ಲಿ ರುಂಡ ಕಂಡು ಬೆಚ್ಚಿಬಿದ್ದ ಸ್ಥಳೀಯರು ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಮನಬಂದಂತೆ ಥಳಿಸಿದ ಪತಿ: ವಿಡಿಯೊ ವೈರಲ್
ಸ್ಥಳಕ್ಕೆ ಧಾವಿಸಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣದ ನೈಜತೆಯನ್ನು ಹೊರಗೆಳೆದಿದ್ದಾರೆ. ಪ್ರಸ್ತುತ ಪತ್ತೆಯಾದ ರುಂಡವನ್ನು ವರ್ತೂರು ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.