ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌; ದಿಢೀರ್‌ ಬೆಳವಣಿಗೆಗೆ ಕಾರಣವೇನು?

Prajwal Revanna: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿದೆ. ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರು, ತುಮಕೂರು ತಲುಪಿದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಪ್ರಜ್ಞಲ್‌ ರೇವಣ್ಣ (ಸಂಗ್ರಹ ಚಿತ್ರ)

ತುಮಕೂರು, ಅ. 12: ಜೀವಾವಧಿ ಶಿಕ್ಷೆಗೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆಗೆ ದಿಢೀರ್‌ ತಡೆ ಬಿದ್ದಿದೆ. ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರು, ತುಮಕೂರು ತಲುಪಿದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಸದ್ಯ ಈ ಪ್ರಕ್ರಿಯೆ ಭಾರಿ ಕುತೂಹಲ ಮೂಡಿಸಿದೆ. ಪ್ರಜ್ಞಲ್‌ ಅವರನ್ನು ಯಾಕಾಗಿ ವಾಪಸ್‌ ಬೆಂಗಳೂರಿಗೆ ಕರೆತರಲಾಯಿತು ಎನ್ನುವುದಕ್ಕೆ ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ.

ಸಿಎಆರ್‌ (CAR) ಎಸ್ಕಾರ್ಟ್‌ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಬೆಳಗಾವಿಗೆ ಕರೆದೊಯ್ಯುತ್ತಿದ್ದರು. ಪೊಲೀಸ್‌ ವಾಹನ ತುಮಕೂರು ತಲುಪುತ್ತಿದ್ದಂತೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರಿಂದ ಬೆಂಗಾವಲು ಪಡೆಗೆ ತುರ್ತು ಕರೆ ಬಂತು. ಬೆಳಗಾವಿಗೆ ಕರೆದೊಯ್ಯದಂತೆ ಸೂಚನೆ ಸಿಕ್ಕಿತು.

ಹೀಗಾಗಿ ಮೇಲಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಪ್ರಯಾಣವನ್ನು ಸ್ಥಗಿತಗೊಳಿಸಿ, ಪ್ರಜ್ವಲ್‌ ರೇವಣ್ಣ ಅವರನ್ನು ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2 ಪ್ರಮುಖ ಪ್ರಕರಣಗಳ ವಿಚಾರಣೆ

ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗಿರುವ ಎರಡು ಪ್ರಮುಖ ಪ್ರಕರಣಗಳ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಚಾರಣೆಯ ಕೆಲವು ಹಂತಗಳಲ್ಲಿ ಅವರು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಾದ ಅಗತ್ಯವಿರುತ್ತದೆ. ಹೀಗಾಗಿ ಅವರನ್ನು ಬೆಂಗಳೂರಿಗೆ ವಾಪಸ್‌ ಕರೆಸಿರುವ ಸಾಧ್ಯತೆ ಇದೆ.

ಸ್ಥಳಾಂತರಕ್ಕೆ ಮುಂದಾಇದ್ದು ಏಕೆ?

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್​​ ರೇವಣ್ಣ ಸೆಲ್​ನಲ್ಲಿ ಮೊಬೈಲ್​ ಪತ್ತೆಯಾದ ಹಿನ್ನೆಲೆಯಲ್ಲಿ ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಳಿಸಲು ಮುಂದಾಗಿತ್ತು ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ನಡೆಸಿದ ಪರಿಶೀಲನೆ ವೇಳೆ ಸ್ಮಾರ್ಟ್‌ಫೋನ್, ಚಾರ್ಜರ್, ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಜೈಲಿನಲ್ಲಿದ್ದೇ ಅವರು ಹೊರಗಿನ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನುವ ದೃಶ್ಯಗಳೂ ಬಹಿರಂಗವಾಗಿದ್ದವು.‌

ಘಟನೆ ಬಳಿಕ ಮೊದಲ ಹಂತವಾಗಿ ಪ್ರಜ್ವಲ್ ರೇವಣ್ಣ ಅವರಿಗಿದ್ದ ಪ್ರತ್ಯೇಕ ಸೆಲ್ ಸೌಲಭ್ಯವನ್ನು ರದ್ದುಗೊಳಿಸಿ, ಸಿಸಿಟಿವಿ ಕಣ್ಗಾವಲಿರುವ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಪ್ರಭಾವ ಬಳಸಿ ಮತ್ತೆ ಅಕ್ರಮ ಚಟುವಟಿಕೆಗಳು ಮುಂದುವರಿಯುವ ಆತಂಕ ಹಾಗೂ ಭದ್ರತಾ ಕಾರಣಗಳಿಂದಾಗಿ, ಅವರನ್ನು ಕಠಿಣ ನಿಯಮಾವಳಿಗಳುಳ್ಳ ದೂರದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲು ಕಾರಾಗೃಹ ಇಲಾಖೆ ಹಾಗೂ ಗೃಹ ಇಲಾಖೆ ಮುಂದಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಫೋನ್‌ ಕರೆ ಮಾಡಿದ ಪ್ರಜ್ವಲ್‌ ರೇವಣ್ಣ; ವಿಡಿಯೋ ವೈರಲ್‌

ಪ್ರಜ್ಞಲ್‌ ಮೊಬೈಲ್‌ ಬಳಿಸಿದ ವಿಡಿಯೊ ವೈರಲ್‌

ಜೈಲಿನಲ್ಲಿ ಪ್ರಜ್ವಲ್‌ ಮೊಬೈಲ್‌ ಫೋನ್‌ ಹಿಡಿದುಕೊಂಡು ಮಾತನಾಡುತ್ತಿರುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಜೈಲಿನ ಸೆಲ್​ನಲ್ಲಿ ಪ್ರಜ್ವಲ್​ ರೇವಣ್ಣ ಮಾತನಾಡಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಆದರೆ ಅವರು ಯಾರ ಬಳಿ ಮಾತನಾಡಿದ್ದಾರೆ ಎನ್ನುವುದನ್ನುಇನ್ನೂ ಗೊತ್ತಾಗಿಲ್ಲ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author