ಬೆಂಗಳೂರು: ಖಾಸಗಿ ಫೋಟೊಗಳನ್ನು (Private photos) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಯುವತಿಯರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ರಾಜಧಾನಿಯಲ್ಲಿ ನಡೆದಿರುವ ಈ ಘಟನೆ ಉದಾಹರಣೆಯಾಗಿದೆ. ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಕಳುಹಿಸಿದ್ದ ಖಾಸಗಿ ಫೋಟೊಗಳು ಅಶ್ಲೀಲ ತಾಣದಲ್ಲಿ ಅಪ್ಲೋಡ್ ಆಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೂರ್ವ ವಿಭಾಗದ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇಂದಿರಾನಗರ ನಿವಾಸಿಯಾದ 28 ವರ್ಷದ ಟೆಕ್ಕಿ ಯುವತಿ ಸಂತ್ರಸ್ತೆಯಾಗಿದ್ದಾಳೆ. ತನ್ನ ಪ್ರಿಯಕರನ ಕೋರಿಕೆಯಂತೆ ಕೆಲವೊಂದು ಖಾಸಗಿ ಫೋಟೊಗಳನ್ನು ರವಾನಿಸಿದ್ದಳು. ಆ ಫೋಟೊಗಳನ್ನು ಸ್ನ್ಯಾಪ್ಚಾಟ್ ಮೂಲಕ ಕಳುಹಿಸಿದ್ದಳು. ಆದರೆ ತನ್ನ ಖಾಸಗಿ ನಗ್ನ ಫೋಟೊ ಮತ್ತು ವಿಡಿಯೊಗಳು ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿರುವ ವಿಷಯ ತಿಳಿದು ಶಾಕ್ ಆಗಿದ್ದಾಳೆ.
ದುಷ್ಕರ್ಮಿಗಳು ಯುವತಿಯ ಸ್ನ್ಯಾಪ್ಚಾಟ್ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿದ್ದ ಖಾಸಗಿ ದೃಶ್ಯಗಳನ್ನು ಕದ್ದು ಪೋರ್ನ್ ವೆಬ್ಸೈಟ್ಗೆ ಹರಿದುಬಿಟ್ಟಿದ್ದಾರೆ. ತನ್ನ ಖಾಸಗಿ ಫೋಟೋಗಳನ್ನು ಪೋರ್ನ್ ತಾಣದಲ್ಲಿ ನೋಡಿ ತೀವ್ರ ಶಾಕ್ ಆದ ಯುವತಿ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಯುವತಿ ಸಲ್ಲಿಸಿರುವ ದೂರಿನಲ್ಲಿ ಸಾಮಾಜಿಕ ಜಾಲತಾಣಗಳಿಂದ ತನ್ನ ಖಾಸಗಿ ಫೋಟೊ-ವಿಡಿಯೊಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.