ಟಿ.ನರಸೀಪುರ: ಗಣೇಶ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸ್ತೀನಿ ಎಂದು ಹೇಳಿದ್ದ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಟಿ.ನರಸೀಪುರ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಭಾನುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ್ದಾರೆ. ವಿಪಕ್ಷ ನಾಯಕ ಅಶೋಕ್, ಸಂಸದ ಯದುವೀರ್ ಒಡೆಯರ್, ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಸೇರಿ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ.
ಇನ್ಸ್‌ಪೆಕ್ಟರ್ ಧನಂಜಯ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ಗಣೇಶೋತ್ಸವ ಎಂದರೆ ಒಂದು ಐಕ್ಯತೆಯ ಸಂಕೇತ, ಒಂದು ಭಕ್ತಿ ಭಾವದ ಸಂಕೇತ. ಹಬ್ಬದ ಸಂದರ್ಭದಲ್ಲಿ ಮೈಸೂರಿನ ಟಿ. ನರಸೀಪುರದ ಪೊಲೀಸ್ ಅಧಿಕಾರಿ ದುರಹಂಕಾರದ ಪರಮಾವಧಿಯಲ್ಲಿ ಮಾತನಾಡಿರುವುದು, ಹಿಂದುಗಳ ಭಾವನೆಗೆ ಧಕ್ಕೆ ತಂದಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಣೇಶ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಮುಂದೆ ಹೋಗಬಾರದು, ಪಟಾಕಿ ಸಿಡಿಸಬಾರದು, ನೃತ್ಯ ಮಾಡಬಾರದು, ಮೌನದಿಂದ ಸಾಗಬೇಕು ಎಂದು ಉತ್ಸವ ಸಮಿತಿಗೆ ಬೆದರಿಕೆ ಹಾಕಿರುವುದು ಖಂಡನೀಯ. ಈ ರೀತಿ ಪೊಲೀಸ್ ಇಲಾಖೆಯೇ ಬೆದರಿಕೆ ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.