ಬೆಂಗಳೂರು, ನ.3: ಎಸ್ಐಆರ್ ವಿಷಯದಲ್ಲಿ ಅಪಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ (Dr Jitendra Singh) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯು ಮತಪತ್ರದ ಆಧಾರದಲ್ಲೇ ನಡೆದಿದೆ. ಆದರೂ ಕಾಂಗ್ರೆಸ್ ಪಕ್ಷ ಸೋತಿದೆ. ಜನತೆ ಕಾಂಗ್ರೆಸ್ಸನ್ನು ಇದೀಗ ದ್ವೇಷಿಸುವಂತಾಗಿದೆ ಎಂದು ತಿಳಿಸಿದರು.
ಮತದಾರರ ಸ್ಥಳಾಂತರ, ಸಾವು, ಹೊರದೇಶದಿಂದ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿ ಮತದಾರರ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವುದು ಅನಿವಾರ್ಯವಾಗುತ್ತದೆ. ಕಳೆದ 20 ವರ್ಷಗಳಿಂದ ಎಸ್ಐಆರ್ ನಡೆದಿರಲಿಲ್ಲ. ಹೀಗೆ ಸುದೀರ್ಘ ಕಾಲ ನಡೆಯದ ಎಸ್ಐಆರ್ ವಿಚಾರದಲ್ಲಿ ಕ್ರಮ ಕೈಗೊಂಡಿದ್ದಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸತ್ತವರ ಹೆಸರು ರದ್ದು ಮಾಡುವುದು, ಅಕ್ರಮ ನುಸುಳುಕೋರರ ಹೆಸರು ರದ್ದತಿ, ಎರಡು ಕಡೆ ಮತದಾನದ ಸಮಸ್ಯೆ ನಿವಾರಣೆ ಮಾಡಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಸ್ಐಆರ್ ಅನಿವಾರ್ಯ ಎಂದರು. ಸುಮಾರು 13 ಕೋಟಿ ಜನರ ಹೆಸರು ರದ್ದಾಗಿದೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಇದರ ಪೈಕಿ 6 ಕೋಟಿ 3 ಲಕ್ಷದಷ್ಟು ಮತಗಳು ಊರಿನ ಬದಲಾವಣೆ ಕಾರಣಕ್ಕಾಗಿ ರದ್ದಾಗಿವೆ. ಅವರಿಗೆ ಎರಡು ಕಡೆ ಮತ ಇರುವುದು ಸಾಧ್ಯವಿಲ್ಲ. ಸುಮಾರು 3 ಕೋಟಿ ಜನರು ಮೃತಪಟ್ಟಿದ್ದಾರೆ. ಸುಮಾರು 1 ಕೋಟಿ ಜನರು ಎರಡು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎಂದು ವಿವರಿಸಿದರು.
ಎರಡು ಕಡೆ ಇದ್ದವರ ಹೆಸರು ರದ್ದು ಮಾಡಿದ್ದು ಕಾಂಗ್ರೆಸ್, ಟಿಎಂಸಿಯಂಥ ಪಕ್ಷಗಳಿಗೆ ಸಮಸ್ಯೆ ತಂದೊಡ್ಡಿದೆ ಎಂದು ಟೀಕಿಸಿದ ಅವರು, ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುದು ತಪ್ಪೇ ಎಂದು ಪ್ರಶ್ನಿಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಒಬ್ಬರೇ ಎರಡು ಮತ ಹೊಂದಿದ್ದವರ ಒಂದು ಕಡೆಯ ಹೆಸರು ರದ್ದು ಮಾಡಲಾಗಿದೆ. ಕರ್ನಾಟಕದಲ್ಲೂ 7 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇತ್ತು ಎಂದು ಗಮನ ಸೆಳೆದರು.
ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಎಸ್ಐಆರ್ ಅನಿವಾರ್ಯ
ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಎಸ್ಐಆರ್ ಅನಿವಾರ್ಯತೆ ಇತ್ತು. ಅರ್ಹತೆ ಇದ್ದ ಯಾರ ಹೆಸರನ್ನೂ ಈ 13 ಕೋಟಿಯಲ್ಲಿ ರದ್ದು ಮಾಡಿಲ್ಲ ಎಂದು ಹೇಳಿದರು. ಬೋಗಸ್ ಮತ ಪಡೆಯುತ್ತಿದ್ದ ಹಾಗೂ ಮೃತ ಮತದಾರರ ಹೆಸರಿನಲ್ಲಿ ಬೇರೊಬ್ಬರಿಂದ ಮತದಾನ ಮಾಡಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಷ್ಕರಣೆಯಿಂದ ಆತಂಕ ಉಂಟಾಗಿದೆ. ಹತ್ತಾರು ವರ್ಷಗಳಿಂದ ನಕಲಿ ಮತದಾನ ನಡೆದಿತ್ತು. ಮೋದಿಯವರ ಸರ್ಕಾರ ಇದಕ್ಕೆ ಅಂಕುಶ ಹಾಕಿದ್ದರಿಂದ ಕಾಂಗ್ರೆಸ್ಸಿಗರಿಗೆ ಆತಂಕ ಉಂಟಾಗಿದೆ ಎಂದು ದೂರಿದರು. ಸುಮಾರು 2.5 ಕೋಟಿ ಯುವ ಮತದಾರರು ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿ.ವೈ. ವಿಜಯೇಂದ್ರ ಕಿಡಿ
ದೇಶವಿರೋಧಿಗಳಿಗೆ ವಿದೇಶಿ ನೆರವು ಲಭಿಸುತ್ತಿತ್ತು. ಕಾಕ್ರೋಚ್ ಪಕ್ಷದ ದೀಪ್ಕೆಗೆ ಅಮೆರಿಕದಿಂದ, ಆಶುತೋಷ್ಗೆ ಪಾಕಿಸ್ತಾನದ ರಾಜಕೀಯ ನೇತಾರರಿಂದ ಹಣಕಾಸಿನ ನೆರವು ಲಭಿಸುತ್ತಿತ್ತು ಎಂದು ಆರೋಪಿಸಿದ ಅವರು, ಇವರೆಲ್ಲರೂ ವಿಶ್ವಾಸಾರ್ಹ ನಾಯಕರಲ್ಲ ಎಂದು ಟೀಕಿಸಿದರು. ಈ ವೇಳೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ ಉಪಸ್ಥಿತರಿದ್ದರು.