ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R Hithendra IPS: ಬೆಂಗಳೂರಿನಲ್ಲಿ 5 ಪ್ರತ್ಯೇಕ ಪೊಲೀಸ್‌ ಕಮಿಷನರೇಟ್‌; ನಗರದ ಮೊದಲ ಮುಖ್ಯ ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ

New Chief Police commissioner of Bengaluru: ರಾಜ್ಯ ಸರ್ಕಾರವು ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ನಗರವನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ ವಿಭಜಿಸಿದೆ. ಆರ್. ಹಿತೇಂದ್ರ ಅವರು ಬೆಂಗಳೂರು ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರು: ನಗರದ ನೂತನ ಮುಖ್ಯ ಪೊಲೀಸ್ ಕಮಿಷನರ್ ಆಗಿ ಆರ್. ಹಿತೇಂದ್ರ (R Hithendra IPS) ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನೇಮಕಾತಿ ಆದೇಶ ಹೊರಬಂದ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಹೊಸ ಹುದ್ದೆಯ ಕರ್ತವ್ಯ ಆರಂಭಿಸಿದ್ದಾರೆ. ಈ ಹಿಂದಿನ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಆರ್. ಹಿತೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಅಕ್ಟೋಬ‌ರ್ 6ರಂದು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಪೊಲೀಸ್ ಕಮಿಷನ‌ರ್ ಹುದ್ದೆಯನ್ನು 'ಮುಖ್ಯ ಪೊಲೀಸ್ ಕಮಿಷನ‌ರ್' ಎಂದು ಉನ್ನತೀಕರಿಸಲಾಗಿತ್ತು. ಇದೀಗ ನಗರದ ಮೊದಲ 'ಮುಖ್ಯ ಪೊಲೀಸ್ ಕಮಿಷನರ್' (New Chief Police commissioner of Bengaluru) ಆಗಿ ಆರ್. ಹಿತೇಂದ್ರ ಅವರು ನೇಮಕಗೊಂಡಿದ್ದಾರೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ದಳ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಆರ್. ಹಿತೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಇವರಿಗೆ ನಗರದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ನೀಡಲಾಗಿದೆ.

ಈ ಹಿಂದೆ ಹಿತೇಂದ್ರ ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರ ಅನುಭವಕ್ಕೆ ಬೆಂಗಳೂರು ನಗರದ ಪೊಲೀಸ್ ಇಲಾಖೆಯ ನೇತೃತ್ವ ವಹಿಸುವ ಜವಾಬ್ದಾರಿ ನೀಡಲಾಗಿದೆ. ನೇಮಕಾತಿ ಆದೇಶ ಪ್ರಕಟವಾದ ಬೆನ್ನಲ್ಲೇ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಪೊಲೀಸ್‌ ಆಯುಕ್ತ ಆರ್. ಹಿತೇಂದ್ರ ಅವರು, ಬೆಂಗಳೂರು ನಗರ ಪೊಲೀಸ್ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿ ಈ ಹಿಂದೆ ಹಲವು ಹಿರಿಯ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಕಾರ್ಯವನ್ನ ಮುಂದುವರಿಸುವ ಭಾಗವಾಗಿ ಇದೀಗ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳನ್ನು ರಚಿಸಲಾಗಿದೆ. ಬೆಂಗಳೂರು ನಗರದ ಜನಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ನಗರದ ವಿಸ್ತೀರ್ಣ, ಜನಸಂಖ್ಯೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಜನರಿಗೆ ಇನ್ನಷ್ಟು ಉತ್ತಮ ಪೊಲೀಸ್ ಸೇವೆ ಒದಗಿಸುವುದು ಐದು ಕಮಿಷನರೇಟ್‌ಗಳ ರಚನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

IPS Officers Transfer: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿ ರಾಜ್ಯದ 32 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರಿನ ಕಾನೂನು ಸುವ್ಯವಸ್ಥೆ, ಸಂಚಾರ ವ್ಯವಸ್ಥೆಯನ್ನ ಸಮರ್ಥವಾಗಿ ನಿಭಾಯಿಸುವುದು ಹಾಗೂ ನಿಯಂತ್ರಿಸುವುದರ ಜೊತೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಸಾರ್ವಜನಿಕರಿಗೆ ಕಾಣುವಂತಾಗಬೇಕು. ನಮ್ಮ ಕೆಲಸ ಮಾತನಾಡುವಂತೆ ಕಾರ್ಯನಿರ್ವಹಿಸುತ್ತೇವೆ. ನನ್ನ ಅನುಭವದ ಆಧಾರದ ಮೇಲೆ ಇಲಾಖೆಯಲ್ಲಿ ಹೊಸ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಕಳೆದ ಮೂರು ವರ್ಷಗಳಿಂದ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಅಲ್ಲದೆ, ಸಿಬಿಐನಲ್ಲಿಯೂ ಕೆಲಸ ಮಾಡಿದ ಅನುಭವವಿದೆ. ಈ ಅನುಭವವನ್ನು ಬಳಸಿಕೊಂಡು ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ನೂತನ ವಲಯ ಆಯುಕ್ತರ ನೇಮಕ

ಬೆಂಗಳೂರು ನಗರದಲ್ಲಿ ಹೊಸದಾಗಿ ಸೃಷ್ಟಿಸಲಾಗಿರುವ ಐದು ವಲಯಗಳ ಪೊಲೀಸ್ ಆಯುಕ್ತರ ಹುದ್ದೆಗಳಿಗೆ ಐಜಿಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ:

  • ಆರ್. ಹಿತೇಂದ್ರ - ಮುಖ್ಯ ಪೊಲೀಸ್ ಆಯುಕ್ತರು
  • ಲಾಭೂ ರಾಮ್ -ಕೇಂದ್ರ ವಲಯ
  • ಡಾ. ಪಿ.ಎಸ್. ಹರ್ಷ - ಪೂರ್ವ ವಲಯ
  • ವಿಕಾಶ್ ಕುಮಾರ್ ವಿಕಾಶ್ - ಪಶ್ಚಿಮ ವಲಯ
  • ಡಾ. ಎಂ.ಬಿ. ಬೋರಲಿಂಗಯ್ಯ - ಉತ್ತರ ವಲಯ
  • ಹೇಮಂತ್ ಎಂ. ನಿಂಬಾಳ್ಕರ್ - ಸಂಚಾರ ವಲಯ