ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pravasi Prapancha: ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ

Radisson Blu Atria: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಹೊಟೇಲ್‌ಗಳು ಕೇವಲ ಕಟ್ಟಡಗಳಲ್ಲ. ಅವು ಈ ನಗರದ ಬೆಳವಣಿಗೆಯ ಕಥೆಯ ಭಾಗವಾಗಿವೆ. ಕೆಲವು ಹೊಟೇಲ್‌ಗಳು ಕೇವಲ ಅತಿಥಿಗಳಿಗೆ ಆಹಾರ ಮತ್ತು ಕೊಠಡಿಗಳನ್ನು ನೀಡುವ ಸರಳ ಆತಿಥ್ಯ ತಾಣಗಳಲ್ಲ, ಅವು ಒಂದು ತಲೆಮಾರಿನ ನೆನಪುಗಳನ್ನು ಸಂಗ್ರಹಿಸಿಟ್ಟಿರುವ ಮ್ಯೂಸಿಯಂಗಳಂತೆ, ಇತಿಹಾಸದ ಕೊಂಡಿಯಂತೆ ನಗರದೊಂದಿಗೆ ಬೆಸೆದುಕೊಂಡಿರುತ್ತವೆ. ಬೆಂಗಳೂರಿನ ಹೃದಯ ಭಾಗದ ಪ್ಯಾಲೇಸ್ ರಸ್ತೆಯಲ್ಲಿರುವ ರ‍್ಯಾಡಿಸನ್ ಬ್ಲೂ ಏಟ್ರಿಯಾ ಅಂಥ ಅಪರೂಪದ ಪಂಚತಾರಾ ಹೊಟೇಲ್ ಗಳಲ್ಲೊಂದು.

ರ‍್ಯಾಡಿಸನ್ ಬ್ಲೂ ಏಟ್ರಿಯಾ ಹೊಟೇಲ್‌

ಈ ಜನರೇಶನ್ ನ ಮಂದಿಗೆ ರ‍್ಯಾಡಿಸನ್ ಬ್ಲೂ ಅಂದರೆ ತಕ್ಷಣ ಇಂದಿನ ಹೊಟೇಲ್ ಕಣ್ಮುಂದೆ ಬರಬಹುದು. ಆದರೆ ಹಳೆಯ ತಲೆಮಾರಿನ ಜನರಿಗೆ ಗೊತ್ತಾಗಬೇಕು ಅಂದರೆ ಏಟ್ರಿಯಾ ಹೊಟೇಲ್ ಅಂತಲೇ ಹೇಳಬೇಕು. ರಾಜ್ಯದ ಪ್ರತಿಷ್ಠಿತ ಪಂಚತಾರಾ ಹೊಟೇಲ್ ಗಳ ಅಗ್ರಪಟ್ಟಿಯಲ್ಲಿ ಮಿಂಚುವ ಹೆಸರು ಏಟ್ರಿಯಾ. ಹಳೆಯ ಬೇರಿಗೂ ಹೊಸ ಚಿಗುರಿಗೂ ತಕ್ಷಣ ಕನೆಕ್ಟ್ ಆಗಬೇಕು ಎಂಬ ಕಾರಣಕ್ಕೆ ಇಂದಿಗೆ ಇದು ರ‍್ಯಾಡಿಸನ್ ಬ್ಲೂ ಏಟ್ರಿಯಾ ಎಂದೇ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿದೆ. ಹೌದು ಇಂದು ನಾವು ನೋಡುವ ಭವ್ಯವಾದ ರ‍್ಯಾಡಿಸನ್ ಬ್ಲೂ ಏಟ್ರಿಯಾದ ಇತಿಹಾಸ, ವಾಸ್ತವವಾಗಿ ಏಟ್ರಿಯಾ ಹೊಟೇಲ್ ಎಂಬ ಹೆಸರಿನಿಂದ ಆರಂಭವಾಗುತ್ತದೆ. 1990ರ ದಶಕದಲ್ಲಿ ಬೆಂಗಳೂರಿನ ಆತಿಥ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದ ಕಾಲ. ಐಟಿ ಕ್ರಾಂತಿ ಇನ್ನೂ ತನ್ನ ಬಾಲ್ಯಾವಸ್ಥೆಯಲ್ಲಿದ್ದರೂ, ಬೆಂಗಳೂರು ದೇಶದ ಪ್ರಮುಖ ವ್ಯಾಪಾರ ಮತ್ತು ಆಡಳಿತ ಕೇಂದ್ರವಾಗಿ ರೂಪುಗೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ನಗರದ ಹೃದಯಭಾಗದಲ್ಲಿದ್ದ ಏಟ್ರಿಯಾ ಹೊಟೇಲ್, ಬೆಂಗಳೂರಿನ ಪ್ರಮುಖ ಸಾಮಾಜಿಕ ಮತ್ತು ಕಾರ್ಪೊರೆಟ್ ತಾಣಗಳಲ್ಲಿ ಒಂದಾಗಿ ಬೆಳೆದಿತು.

ಹಳೆಯ ಬೆಂಗಳೂರಿಗರ ಜತೆ ಮಾತನಾಡಿದರೆ ಏಟ್ರಿಯಾ ಎಂಬ ಹೆಸರು ಅವರಿಗೆ ಕೇವಲ ಹೊಟೇಲನ್ನು ನೆನಪಿಸುವುದಿಲ್ಲ; ಕುಟುಂಬದ ಸಂಭ್ರಮಗಳು, ವಾರಾಂತ್ಯದ ಭೋಜನಗಳು, ಮದುವೆಗಳು, ವ್ಯಾವಹಾರಿಕ ಕೂಟಗಳು ಮತ್ತು ಸ್ನೇಹಿತರ ಭೇಟಿಗಳನ್ನು ನೆನಪಿಸುತ್ತದೆ. ಏಟ್ರಿಯಾದ ಪ್ರಸಿದ್ಧ ’ತಿಜೌರಿ’ ರೆಸ್ಟೋರೆಂಟ್ ಅಂದಿನ ದಿನಗಳಲ್ಲಿ ಬೆಂಗಳೂರಿನ ಆಹಾರ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿತ್ತು. ಅನೇಕ ಕುಟುಂಬಗಳು ವಾರಕ್ಕೊಮ್ಮೆ ಇಲ್ಲಿಗೆ ಊಟಕ್ಕೆ ಬರುವುದು ಒಂದು ಸಂಪ್ರದಾಯವಾಗಿತ್ತು. ಹಲವು ಮದುವೆಗಳು, ಆರತಕ್ಷತೆಗಳು ಮತ್ತು ಕುಟುಂಬದ ಮಹತ್ವದ ಕಾರ್ಯಕ್ರಮಗಳು ಇದೇ ಆವರಣದಲ್ಲಿ ನಡೆದಿವೆ ಎಂದು ಹಳೆಯ ಗ್ರಾಹಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಕೆಲವರಿಗೆ ಇದು ‘ಸೆಕೆಂಡ್ ಹೋಮ್’ ಎಂಬ ಭಾವನೆಯನ್ನು ಮೂಡಿಸಿದ ಹೊಟೇಲ್ ಆಗಿತ್ತು. ಒಂದು ಹೊಟೇಲ್ ಗೆ ಇದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ? ಅತಿಥಿಗಳು ಗ್ರಾಹಕರಾಗಿ ಬಂದು, ಕುಟುಂಬದ ಸದಸ್ಯರಂತೆ ಮರಳಿ ಹೋಗುವುದು ಈ ಹೊಟೇಲ್ ನ ಜನಪ್ರಿಯತೆಗೆ ಕುರುಹು.

Radisson Blue Dining Room

ನಗರದ ರೂಪಾಂತರಕ್ಕೆ ಸಾಕ್ಷಿ

ಬೆಂಗಳೂರು ನಗರ ಗಾರ್ಡನ್ ಸಿಟಿಯಿಂದ ಐಟಿ ಕ್ಯಾಪಿಟಲ್ ಆಗಿ ಬದಲಾಗುವ ಪರಿವರ್ತನೆಯನ್ನು ಏಟ್ರಿಯಾ ಹತ್ತಿರದಿಂದ ಕಂಡಿದೆ. ಇನ್ ಫ್ಯಾಕ್ಟ್ ಅದಕ್ಕೆ ಸಾಕ್ಷಿಯಾಗಿ ನಿಂತಿದೆ. ವಿಧಾನಸೌಧ, ಕಬ್ಬನ್ ಪಾರ್ಕ್, ಬೆಂಗಳೂರು ಗಾಲ್ಫ್ ಕ್ಲಬ್, ಯುಬಿ ಸಿಟಿ, ಹೈಕೋರ್ಟ್ ಹೀಗೆ ಎಲ್ಲ ಪ್ರಮುಖ ಸ್ಥಳಗಳಿಗೆ ಅತ್ಯಂತ ಸನಿಹದಲ್ಲಿರುವ ಏಟ್ರಿಯಾ ನಗರದ ಎಲ್ಲ ಅಭಿವೃದ್ಧಿ ಮತ್ತು ರೂಪಾಂತರಕ್ಕೆ ಸಾಕ್ಷಿಯಾಗಿ ನಿಂತಿತ್ತು. ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ವಿದೇಶಿ ಪ್ರತಿನಿಧಿಗಳು ಈ ಹೊಟೇಲ್‌ನಲ್ಲಿ ತಂಗಿದ್ದಾರೆ. ನಗರದ ಆಡಳಿತ ಮತ್ತು ವ್ಯಾಪಾರಿಕ ವಲಯದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಿದ ಹೊಟೇಲ್ ಎಂಬ ಹೆಗ್ಗಳಿಕೆಯನ್ನು ಏಟ್ರಿಯಾ ಪಡೆದಿತ್ತು.

ಜಗಮಗಿಸುತಿಹುದು ಕಾಪು ಶ್ರೀ ಮಾರಿ ಗುಡಿ

ಸಹಭಾಗಿತ್ವದಲ್ಲಿ ಬದಲಾಯ್ತು ಹೆಸರು

2015ರ ವೇಳೆಗೆ ಜಾಗತಿಕ ಆತಿಥ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿದ್ದವು. ಅತಿಥಿಗಳ ನಿರೀಕ್ಷೆಗಳು ಹೆಚ್ಚಾಗಿದ್ದವು. ವಿಶ್ವಮಟ್ಟದ ಸೌಲಭ್ಯಗಳು, ಆಧುನಿಕ ವಿನ್ಯಾಸ, ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗುರುತುಗಳ ಅಗತ್ಯ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಏಟ್ರಿಯಾ ಒಂದು ಮಹತ್ವದ ನಿರ್ಧಾರ ಕೈಗೊಂಡಿತು. ರ‍್ಯಾಡಿಸನ್ ಸಮೂಹದೊಂದಿಗೆ ಗುಂಪಿನೊಂದಿಗೆ ಸಹಭಾಗಿತ್ವ ಮಾಡಿಕೊಂಡು, ಸಂಪೂರ್ಣ ನವೀಕರಣ ಮತ್ತು ಪುನರ್‌ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಸುಮಾರು ಎರಡು ವರ್ಷಗಳ ಕಾಲ ಹೊಟೇಲ್ ಮುಚ್ಚಲ್ಪಟ್ಟು, ಅದರ ಒಳಾಂಗಣ, ಕೊಠಡಿಗಳು, ಸಾರ್ವಜನಿಕ ಸ್ಥಳಗಳು ಮತ್ತು ಸೇವಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಮರುರೂಪಿಸಲಾಯಿತು. ಇದು ಕೇವಲ ಹೆಸರಿನ ಬದಲಾವಣೆ ಆಗಿರಲಿಲ್ಲ. ಇದು ಸ್ಥಳೀಯ ಪರಂಪರೆ ಮತ್ತು ಜಾಗತಿಕ ಗುಣಮಟ್ಟದ ನಡುವಿನ ಸಂಗಮವಾಗಿತ್ತು.

ಈಗ ರ‍್ಯಾಡಿಸನ್ ಬ್ಲೂ ಏಟ್ರಿಯಾ

ಪುನಾರಂಭದ ನಂತರ ರ‍್ಯಾಡಿಸನ್ ಬ್ಲೂ ಏಟ್ರಿಯಾ, ಆತಿಥ್ಯ ಕ್ಷೇತ್ರದಲ್ಲಿ ಹೊಸ ರೂಪದಲ್ಲಿ ಬಂದು ತನ್ನ ಆಕರ್ಷಣೆ ಹೆಚ್ಚಿಸಿಕೊಂಡಿತು. ವಿಶ್ವಮಟ್ಟದ ವಿನ್ಯಾಸ, ಐಷಾರಾಮಿ ಕೊಠಡಿಗಳು, ಆಧುನಿಕ ಸಭಾಂಗಣಗಳು, ಸುಧಾರಿತ ಆಹಾರ ವ್ಯವಸ್ಥೆಗಳು ಮತ್ತು ರ‍್ಯಾಡಿಸನ್ ಬ್ರ್ಯಾಂಡ್‌ನ ಸೇವಾ ಮಾನದಂಡಗಳು ಸೇರಿಕೊಂಡವು. ಆದರೆ ಈ ಹೊಟೇಲ್ ನ ಅಸಲಿ ಯಶಸ್ಸು ಏನಂದರೆ ಎಲ್ಲ ಆಧುನಿಕತೆಯ ನಡೆವೆಯೂ ಇದು ಹಳೆಯ ಏಟ್ರಿಯಾದ ಆತ್ಮವನ್ನು ಕಳೆದುಕೊಳ್ಳಲಿಲ್ಲ.

ಇಂದಿಗೂ ತಿಜೌರಿ ಹೆಸರನ್ನು ಉಳಿಸಿಕೊಂಡಿರುವುದು ಅದಕ್ಕೆ ಒಂದು ಉದಾಹರಣೆ. ಹೊಸ ಪೀಳಿಗೆಯ ಅತಿಥಿಗಳಿಗೆ ಆಧುನಿಕ ಅನುಭವವನ್ನು ನೀಡುತ್ತಲೇ, ಹಳೆಯ ಗ್ರಾಹಕರ ನೆನಪುಗಳನ್ನು ಜೀವಂತವಾಗಿಡುವ ಪ್ರಯತ್ನವನ್ನು ಹೊಟೇಲ್ ಯಶಸ್ವಿಯಾಗಿ ಮಾಡಿದೆ.

Radisson Blue Living Area

ರ‍್ಯಾಡಿಸನ್ ಬ್ರ್ಯಾಂಡ್‌ನ ಜಾಗತಿಕ ಶಕ್ತಿ

ರ‍್ಯಾಡಿಸನ್ ಬ್ಲೂ ಇಂದಿಗೆ ವಿಶ್ವದ ಅತ್ಯಂತ ಹೆಸರಾಂತ ಹೊಟೇಲ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಅದರ ಭಾಗವಾಗುವ ಮೂಲಕ ಏಟ್ರಿಯಾ ಜಾಗತಿಕ ಅತಿಥಿ ಸೇವಾ ಜಾಲದ ಅಂಗವಾಗಿದೆ. ಇಂದು ಇಲ್ಲಿ ತಂಗುವ ಅತಿಥಿಗಳು ಕೇವಲ ಹೊಟೇಲ್ ಎಂಬ ಭಾವದಲ್ಲಿ ತಂಗುವುದಿಲ್ಲ; ರ‍್ಯಾಡಿಸನ್ ಬ್ಲೂ ಏಟ್ರಿಯಾ ಎಂಬ ಹೆಮ್ಮೆಯಲ್ಲಿ ವಿಶ್ವದರ್ಜೆಯ ಆತಿಥ್ಯತಾಣದಲ್ಲಿ ತಂಗಿದ್ದೇವೆ ಎಂಬ ಹೆಮ್ಮೆಯನ್ನು ಅನುಭವಿಸುತ್ತಾರೆ.

ಪರಂಪರೆಯ ಭಾಗ ರ‍್ಯಾಡಿಸನ್ ಬ್ಲೂ ಏಟ್ರಿಯಾ

ಒಂದು ಹೊಟೇಲ್ ನ ಲೆಗೆಸಿ ಎಂದರೆ ಅದರ ಕಟ್ಟಡವಲ್ಲ. ಅಲ್ಲಿ ನಡೆದ ಸಾವಿರಾರು ಮದುವೆಗಳು, ಅಲ್ಲಿ ನಡೆದ ಯಶಸ್ವಿ ಬ್ಯುಸಿನೆಸ್ ಮೀಟಿಂಗ್ ಗಳು, ಮೊದಲ ಬಾರಿಗೆ ಬೆಂಗಳೂರಿಗೆ ಬಂದ ಪ್ರವಾಸಿಗನ ನೆನಪುಗಳು, ವಾರಕ್ಕೊಮ್ಮೆ ಕುಟುಂಬದೊಂದಿಗೆ ಊಟಕ್ಕೆ ಬಂದು ಹೋದ ಜನರೇಶನ್ ನ ಮೆಲುಕುಗಳು, ಹೊಟೇಲ್ ಸಿಬ್ಬಂದಿಯೊಂದಿಗೆ ಬೆಳೆದ ಸಂಬಂಧಗಳು, ಎಲ್ಲವೂ ಸೇರಿ ಒಂದು ಪರಂಪರೆಯೇ ನಿರ್ಮಾಣವಾಗುತ್ತದೆ. ಏಟ್ರಿಯಾ ಹೊಟೇಲ್ ಈ ಪರಂಪರೆಯನ್ನು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕಾಪಾಡಿಕೊಂಡು ಬರುತ್ತಿದೆ.

ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲ್ ಗಳಿಗೇನೂ ಕೊರತೆ ಇಲ್ಲ. ಹೊಸ ಹೊಸ ಬ್ರ್ಯಾಂಡ್‌ಗಳು ಪ್ರತಿವರ್ಷ ಬರುತ್ತಲೇ ಇವೆ. ಆದರೆ ಅದ್ಭುತ ಇತಿಹಾಸವಿರುವ ಹೊಟೇಲ್‌ಗಳು ಮಾತ್ರ ಅಪರೂಪ. ರ‍್ಯಾಡಿಸನ್ ಬ್ಲೂ ಏಟ್ರಿಯಾ ಅಂಥ ಅಪರೂಪದ ಹೆಸರು. ಇದು ಬೆಂಗಳೂರಿನ ಹಳೆಯ ಸೌಮ್ಯತೆಯನ್ನು ಮತ್ತು ಹೊಸ ಜಾಗತಿಕ ಜೀವನಶೈಲಿಯನ್ನು ಒಂದೇ ಚಾವಣಿಯಡಿ ಒಗ್ಗೂಡಿಸಿರುವ ಹೊಟೇಲ್. ಇಲ್ಲಿ ತಂಗುವ ಅತಿಥಿಗೆ ಒಂದು ಕೊಠಡಿ ಜತೆ ಹೋಟೆಲ್‌ನ ಕಥೆಯೊಂದಿಗೆ ಮೂರು ದಶಕಗಳ ಬೆಂಗಳೂರಿನ ಇತಿಹಾಸದ ಒಂದು ತುಣುಕೂ ಸಿಗುತ್ತದೆ. ಅದೇ ಆಟ್ರಿಯಾದ ನಿಜವಾದ ಶಕ್ತಿ. ಅದೇ ಕಾರಣಕ್ಕೆ ಇಂದಿಗೂ ಏಟ್ರಿಯಾ ಎಂಬ ಹೆಸರು ಬೆಂಗಳೂರಿನ ಆತಿಥ್ಯ ಕ್ಷೇತ್ರದಲ್ಲಿ ಗೌರವದಿಂದ ಉಚ್ಚರಿಸಲ್ಪಡುತ್ತದೆ.

Radisson Blue Bar

ಸ್ಥಳವೇ ದೊಡ್ಡ ಶಕ್ತಿ

ಒಂದು ಹೊಟೇಲಿನ ಯಶಸ್ಸಿನಲ್ಲಿ ಅದರ ಸ್ಥಳ ಅತ್ಯಂತ ಮುಖ್ಯ. ರ‍್ಯಾಡಿಸನ್ ಬ್ಲೂ ಆಟ್ರಿಯಾ ಈ ವಿಚಾರದಲ್ಲಿ ವಿಶೇಷ ಸ್ಥಾನ ಪಡೆದಿದೆ. ಯುಬಿ ಸಿಟಿ, ವಿಧಾನಸೌಧ, ಕಬ್ಬನ್ ಪಾರ್ಕ್, ಬೆಂಗಳೂರು ಗಾಲ್ಫ್ ಕ್ಲಬ್, ಲಾಲ್‌ಬಾಗ್, ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ ಸೇರಿದಂತೆ ಹಲವು ಪ್ರಮುಖ ಆಕರ್ಷಣೆಗಳು ಸುಲಭವಾಗಿ ತಲುಪಬಹುದಾದ ಅಂತರದಲ್ಲಿವೆ. ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಿಗೂ ಇದು ಅತ್ಯಂತ ಅನುಕೂಲಕರವಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ನಿಮಿಷಗಳ ಪ್ರಯಾಣದಲ್ಲಿ ತಲುಪಬಹುದಾದ ಈ ಹೊಟೇಲ್, ಪ್ರವಾಸಿಗರಿಗೆ ಮತ್ತು ಉದ್ಯಮಿಗಳಿಗೆ ಅತ್ಯಂತ ಆಪ್ತವಾದ ತಾಣ.

167 ರೂಮ್ಸ್- ಗುಣಮಟ್ಟವೇ ಹೈಲೈಟ್

ರ‍್ಯಾಡಿಸನ್ ಬ್ಲೂ ಆಟ್ರಿಯಾದಲ್ಲಿ ಒಟ್ಟು 167 ಅತಿಥಿ ಕೊಠಡಿಗಳು ಮತ್ತು ಸೂಟ್‌ಗಳಿವೆ. ಪ್ರತಿಯೊಂದು ಕೊಠಡಿಯೂ ಆಧುನಿಕ ವಿನ್ಯಾಸ, ವಿಶಾಲ ಸ್ಥಳಾವಕಾಶ ಮತ್ತು ಅತಿಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಉಚಿತ ಹೈ-ಸ್ಪೀಡ್ ವೈ-ಫೈ, ಕೆಲಸಕ್ಕೆ ಅನುಕೂಲವಾಗುವ ಎರ್ಗೋನಾಮಿಕ್ ವರ್ಕ್‌ಡೆಸ್ಕ್, ಇನ್-ರೂಮ್ ಟೀ ಮತ್ತು ಕಾಫಿ ಸೌಲಭ್ಯ, ಸುರಕ್ಷಿತ ಲಾಕರ್, ಫ್ಲಾಟ್ ಸ್ಕ್ರೀನ್ ಟಿವಿ ಮತ್ತು 24 ಗಂಟೆಗಳ ರೂಮ್ ಸರ್ವಿಸ್ ಅತಿಥಿಗಳಿಗೆ ದೊರೆಯುತ್ತದೆ. ಹೆಚ್ಚಿನ ಸ್ಥಳಾವಕಾಶ ಬಯಸುವವರಿಗೆ ಪ್ರತ್ಯೇಕ ಲಿವಿಂಗ್ ರೂಮ್ ಹೊಂದಿರುವ ಸೂಟ್‌ಗಳೂ ಲಭ್ಯ. ವ್ಯಾವಹಾರಿಕ ಪ್ರವಾಸಿಗರಿಗೆ, , ಕುಟುಂಬ ಸಮೇತರಾಗಿ ಬರುವವರಿಗೆ ಆರಾಮದಾಯಕ ವಾತಾವರಣ ಮತ್ತು ವಿಶ್ರಾಂತಿಯ ಅನುಭವವನ್ನು ಈ ಕೊಠಡಿಗಳು ಇಲ್ಲಿವೆ.

ರುಚಿಯ ಜಗತ್ತಿಗೆ ಆಹ್ವಾನ

ಒಂದು ಪಂಚತಾರಾ ಹೊಟೇಲಿನ ಗುಣಮಟ್ಟವನ್ನು ಅದರ ಅಡುಗೆಮನೆ ನಿರ್ಧರಿಸುತ್ತದೆ ಎಂಬ ಮಾತಿದೆ. ರ‍್ಯಾಡಿಸನ್ ಬ್ಲೂ ಏಟ್ರಿಯಾ ತನ್ನ ರುಚಿಕರ ಮತ್ತು ಶುಚಿಕರ ಆಹಾರಕ್ಕೆ ಖ್ಯಾತವಾಗಿದೆ. ಹೊಟೇಲಿನ ಪ್ರಮುಖ ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್ ಆಗಿರುವ ಒನ್ ಏಟ್ರಿಯಾ ಕೆಫೆ, ದಕ್ಷಿಣ ಭಾರತೀಯ, ಉತ್ತರ ಭಾರತೀಯ ಮತ್ತು ಅಂತಾರಾಷ್ಟ್ರೀಯ ಶೈಲಿಯ ಆಹಾರ ನೀಡುತ್ತದೆ. ಬೆಳಗಿನ ಉಪಾಹಾರದಿಂದ ರಾತ್ರಿ ಭೋಜನದವರೆಗೆ ವಿವಿಧ ರುಚಿಗಳ ಅನುಭವ ನಿಮಗಿಲ್ಲಿ ಸಿಗುತ್ತದೆ. ಪೂಲ್ ಪಕ್ಕದ ಆಸನ ವ್ಯವಸ್ಥೆ ಮತ್ತು ವಿಶೇಷ ಫ್ಲೋಟಿಂಗ್ ಬ್ರೇಕ್‌ಫಾಸ್ಟ್ ಅನುಭವ ಇಲ್ಲಿನ ಅತಿಥಿಗಳಿಗೆ ಹೆಚ್ಚುವರಿ ಆಕರ್ಷಣೆ.

Radisson Blue Hall

ತಿಜೌರಿ – ಭಾರತದ ಸಾಂಪ್ರದಾಯಿಕ ರುಚಿಗೆ ಆಧುನಿಕ ಸ್ಪರ್ಶ

ಭಾರತದ ವಿವಿಧ ಪ್ರಾದೇಶಿಕ ಅಡುಗೆ ಪರಂಪರೆಯನ್ನು ಆಧುನಿಕ ಶೈಲಿಯಲ್ಲಿ ಪರಿಚಯಿಸುವ ವಿಶೇಷ ರೆಸ್ಟೋರೆಂಟ್ ಈ ತಿಜೌರಿ. ಇಲ್ಲಿನ ಸ್ಥಳೀಯ ಪದಾರ್ಥಗಳು, ಪ್ರಾದೇಶಿಕ ರುಚಿಕರ ಆಹಾರಗಳು, ಜತೆಗೆ ವಿಶಿಷ್ಟ ರೀತಿಯಲ್ಲಿ ನೀಡುವ ಆತಿಥ್ಯ ಗ್ರಾಹಕರನ್ನು ತೀವ್ರವಾಗಿ ಸೆಳೆಯುತ್ತದೆ. ಭಾರತೀಯ ಆಹಾರದ ಶ್ರೀಮಂತಿಕೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನ ಈ ಪರಿಕಲ್ಪನೆಯಲ್ಲಿ ಎದ್ದುಕಾಣುತ್ತದೆ.

ಟೀ ಮತ್ತು ವೈನ್ ಲೌಂಜ್

ವ್ಯಾವಹಾರಿಕ ಸಭೆಗಳ ನಡುವೆ ಒಂದು ಕಪ್ ಕಾಫಿ, ಸುವಾಸನೆಯ ಚಹಾ ಅಥವಾ ಉತ್ತಮ ವೈನ್ ಜತೆ ವಿಶ್ರಾಂತಿ ಪಡೆಯೋಕೆ ಇಲ್ಲಿ ಅದ್ಭುತವಾದ ಲೌಂಜ್ ಇದೆ. ಸೊಗಸಾದ ಒಳಾಂಗಣ ವಿನ್ಯಾಸ ಮತ್ತು ನೆಮ್ಮದಿಯ ವಾತಾವರಣ ಇದರ ವಿಶೇಷತೆ.

ನಗರದ ನೈಟ್‌ಲೈಫ್ ಅನುಭವಿಸಲು ಬಯಸುವವರಿಗೆ ಈ ದ ವಿಸ್ಕಿ ಬಾರ್ ಎಂಬ ಆಕರ್ಷಕ ತಾಣವಿದೆ. ವಿಶ್ವದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ 65 ಕ್ಕೂ ಹೆಚ್ಚು ಸಿಂಗಲ್ ಮಾಲ್ಟ್‌ಗಳ ಸಂಗ್ರಹ ಇಲ್ಲಿ ಲಭ್ಯವಿದೆ.

ಮೀಟಿಂಗ್ಸ್ ಮತ್ತು ಇವೆಂಟ್ಸ್

ಇಂದಿನ ಕಾರ್ಪೊರೆಟ್ ಜಗತ್ತಿನಲ್ಲಿ ಸುಸಜ್ಜಿತ ಮೀಟಿಂಗ್ ಹಾಲ್ ಗಳು ಹೊಟೇಲ್ ನ ಪ್ರಮುಖ ಶಕ್ತಿ ಅನ್ನಬಹುದು. ಈ ದೃಷ್ಟಿಯಲ್ಲಿ ರ‍್ಯಾಡಿಸನ್ ಬ್ಲೂ ಏಟ್ರಿಯಾ ಖಂಡಿತವಾಗ್ಯೂ ನಂಬರ್ ಒನ್ ಆಯ್ಕೆ. ಹೊಟೇಲಿನಲ್ಲಿ ಏಳು ಸಭಾಂಗಣಗಳು ಹಾಗೂ ಹಲವು ಕಾರ್ಯಕ್ರಮಗಳಿಗೆ ಸೂಟ್ ಆಗುವಂಥ ಇವೆಂಟ್ ವೇದಿಕೆಗಳಿವೆ. ಚಾನ್ಸರಿ, ಕಾನ್‌ಕಾರ್ಡ್, ಕಾನ್‌ಕ್ಲೇವ್ ಸೇರಿದಂತೆ ವಿವಿಧ ಗಾತ್ರದ ಸಭಾಂಗಣಗಳು ಸಣ್ಣ ಮಂಡಳಿ ಸಭೆಯಿಂದ ಹಿಡಿದು ದೊಡ್ಡ ಮಟ್ಟದ ಸಮಾವೇಶಗಳವರೆಗೆ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತವಾಗಿವೆ. ಅತ್ಯಾಧುನಿಕ ಆಡಿಯೋ-ವಿಶುಯಲ್ ವ್ಯವಸ್ಥೆಗಳು, ಪ್ರೊಜೆಕ್ಟರ್‌ಗಳು, ಸ್ಪೀಡ್‌ ವೈ-ಫೈ ಇಲ್ಲಿದ್ದು, ಅನುಭವಿ ಇವೆಂಟ್ ತಂಡಗಳು ಕಾರ್ಯಕ್ರಮಗಳಿಗೆ ನೆರವಾಗುತ್ತವೆ.

Radisson Blue Kitchen

ಮದುವೆಗಳಿಗೆ ವೈಭವದ ವೇದಿಕೆ

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು ಥೀಮ್ ವೆಡ್ಡಿಂಗ್‌ಗಳ ಬೇಡಿಕೆ ಹೆಚ್ಚುತ್ತಿದೆ. ರ‍್ಯಾಡಿಸನ್ ಬ್ಲೂ ಏಟ್ರಿಯಾ ಈ ಬೇಡಿಕೆಗೆ ತಕ್ಕಂತೆ ಒಳಾಂಗಣ ಮತ್ತು ಹೊರಾಂಗಣ ಸ್ಥಳಗಳನ್ನು ಒದಗಿಸುತ್ತಿದೆ. ಹಲ್ದೀ, ಸಂಗೀತ್, ಕಾಕ್‌ಟೇಲ್ ನೈಟ್, ವಿವಾಹ ಸಮಾರಂಭ ಮತ್ತು ಆರತಕ್ಷತೆ – ಪ್ರತಿಯೊಂದು ಕಾರ್ಯಕ್ರಮಕ್ಕೂ ಪ್ರತ್ಯೇಕ ವಿನ್ಯಾಸ ಮತ್ತು ವ್ಯವಸ್ಥೆ ಮಾಡಬಹುದಾದ ಸಾಮರ್ಥ್ಯ ಇಲ್ಲಿ ಇದೆ. ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವ ಪರಿಣಿತ ತಂಡ ಈ ಹೊಟೇಲ್‌ನ ಮತ್ತೊಂದು ಶಕ್ತಿಯಾಗಿದೆ.

ಆರೋಗ್ಯ ಮತ್ತು ವಿಶ್ರಾಂತಿಗೆ ಆದ್ಯತೆ

ಪ್ರಯಾಣದ ಆಯಾಸವನ್ನು ದೂರ ಮಾಡುವಲ್ಲಿ ಹೊಟೇಲಿನ ವೆಲ್‌ನೆಸ್ ಸೌಲಭ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ರ‍್ಯಾಡಿಸನ್ ಬ್ಲೂ ಏಟ್ರಿಯಾದಲ್ಲಿ ಹೊರಾಂಗಣ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಫಿಟ್‌ನೆಸ್ ಸೆಂಟರ್ ಮತ್ತು ಸ್ಪಾ ಸೌಲಭ್ಯಗಳಿವೆ. ದಿನವಿಡೀ ಕೆಲಸದ ಒತ್ತಡದ ನಂತರ ಅತಿಥಿಗಳು ಇಲ್ಲಿ ವಿಶ್ರಾಂತಿ ಪಡೆಯಬಹುದು. ದಿನದ ಆಯಾಸ ಹೋಗಲಾಡಿಸಿ, ತನು-ಮನ ಚೇತರಿಸಿಕೊಳ್ಳಲು ಹೋಟೆಲ್‌ನ ಒಳಗೇ ಇರುವ 'ಓಡ್ ಸ್ಪಾ' ಸಿದ್ಧ. ಇದು ಪ್ರತಿ ದಿನ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ತೆರೆದಿರುತ್ತದೆ. ಪ್ರಶಿಕ್ಷಿತ ಚಿಕಿತ್ಸಕರಿಂದ ಅನೇಕ ಬಗೆಯ ಮಸಾಜ್ ಚಿಕಿತ್ಸೆಗಳು, ಸ್ಕ್ರಬ್ ಮತ್ತು ತ್ವಚೆ ಆರೈಕೆ ಚಿಕಿತ್ಸೆಗಳು ಲಭ್ಯವಿರುತ್ತದೆ. ಸ್ವೀಡಿಷ್ ಮಸಾಜ್, ಡೀಪ್ ಟಿಶ್ಯೂ ಮಸಾಜ್, ಆರೊಮಾಥೆರಪಿ, ಹಾಟ್ ಸ್ಟೋನ್ ಥೆರಪಿ, ಹೆಡ್ ಮಸಾಜ್ – ಹೀಗೆ ವೈವಿಧ್ಯಮಯ ಸ್ಪಾ ಚಿಕಿತ್ಸೆಗಳಿವೆ. ಟ್ರಿಪ್‌ಅಡ್ವೈಸರ್‌ನಲ್ಲಿ ಅತ್ಯಂತ ಉತ್ತಮ ರೇಟಿಂಗ್ ಪಡೆದಿರುವ ಈ ಸ್ಪಾ ಅತಿಥಿಗಳ ನೆಚ್ಚಿನ ಸ್ಥಳ.

Radisson Blue Room

ಸೌಲಭ್ಯಗಳು

  • ಉಚಿತ ಹೈ-ಸ್ಪೀಡ್ ವೈ-ಫೈ
  • ಬೃಹತ್‌ LED ಟಿವಿ
  • ತಲೆದಿಂಬಿನ ಮೆನು: ನಿಮ್ಮ ಇಷ್ಟದ ತಲೆದಿಂಬು ಆಯ್ಕೆ ಮಾಡಿ
  • ರೇನ್‌ಫಾಲ್ ಶವರ್ ಮತ್ತು ಐಷಾರಾಮಿ ಬಾತ್‌ಟಬ್
  • ಉಚಿತ ಬಾಟಲ್ ನೀರು ಮತ್ತು ಕಾಫಿ/ಟೀ ತಯಾರಿಕಾ ಸೌಲಭ್ಯ
  • ಮಿನಿ ಬಾರ್
  • ಅಲರ್ಜಿ-ಮುಕ್ತ ಹಾಸಿಗೆ ಮತ್ತು ಬ್ಲ್ಯಾಕ್‌ಔಟ್ ಪರದೆ
  • ಎರ್ಗೋನಾಮಿಕ್ ಡೆಸ್ಕ್ ಮತ್ತು ಕೆಲಸದ ಕುರ್ಚಿ
  • ಪ್ರತ್ಯೇಕ ಊಟದ ಪ್ರದೇಶ ಮತ್ತು ಕೂರುವ ಜಾಗ
  • ಬಾತ್‌ರೋಬ್, ಚಪ್ಪಲಿ ಮತ್ತು ಪ್ರೀಮಿಯಂ ಟಾಯ್ಲೆಟ್ರಿ
  • ದೈನಂದಿನ ಕ್ಲೀನಿಂಗ್ ಸೇವೆ ಮತ್ತು ರಾತ್ರಿ ಟರ್ನ್‌ಡೌನ್ ಸೇವೆ
  • 24 ಗಂಟೆ ರೂಮ್ ಸರ್ವೀಸ್

Radisson Blue Nagaraj

ಗೆಲುವಿನ ಹಿಂದಿನ ಬಲ- ಕೆ.ನಾಗರಾಜು

ಬೆಂಗಳೂರಿನ ರ‍್ಯಾಡಿಸನ್ ಬ್ಲೂ ಏಟ್ರಿಯಾ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ ಕೆ. ನಾಗರಾಜು. ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಅವರು ಏಟ್ರಿಯಾ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ (Executive Director) ಸೇವೆ ಸಲ್ಲಿಸುತ್ತಿದ್ದು, ರ‍್ಯಾಡಿಸನ್ ಬ್ಲೂ ಆಟ್ರಿಯಾ, ಆಟ್ರಿಯಾ ಪವರ್ ಮತ್ತು ಆಟ್ರಿಯಾ ಎಜುಕೇಶನ್ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆತಿಥ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಕೇವಲ ಒಂದು ಹೊಟೇಲ್‌ನ ನಿರ್ವಹಣೆಗೆ ಸೀಮಿತವಾಗಿಲ್ಲ. ಅವರು ದಕ್ಷಿಣ ಭಾರತದ ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮದ ಪ್ರಮುಖ ಸಂಘಟನೆಯಾದ South India Hotels and Restaurants Association (SIHRA) ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಭಾರತದ ಆತಿಥ್ಯ ಕ್ಷೇತ್ರದ ಶ್ರೇಷ್ಠ ಸಂಘಟನೆಯಾದ Federation of Hotel and Restaurant Associations of India (FHRAI) ನ ಕಾರ್ಯಕಾರಿ ಸಮಿತಿಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಏಟ್ರಿಯಾ ಹೋಟೆಲ್ಅನ್ನು ಬೆಂಗಳೂರಿನ ಹೆಸರಾಂತ ಆತಿಥ್ಯ ಬ್ರ್ಯಾಂಡ್ ಆಗಿ ಬೆಳೆಸುವಲ್ಲಿ ಮತ್ತು ಬಳಿಕ ಅದನ್ನು ಜಾಗತಿಕ ಮಟ್ಟದ ರ‍್ಯಾಡಿಸನ್ ಬ್ಲೂ ಬ್ರ್ಯಾಂಡ್‌ನೊಂದಿಗೆ ಯಶಸ್ವಿಯಾಗಿ ಸಂಯೋಜಿಸುವಲ್ಲಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಿದೆ. ಪರಂಪರೆ ಮತ್ತು ಆಧುನಿಕತೆಯ ಸಮತೋಲನವನ್ನು ಕಾಯ್ದುಕೊಳ್ಳುವುದು ಅವರ ಆಡಳಿತ ಶೈಲಿಯ ವಿಶೇಷತೆ ಎಂದು ಉದ್ಯಮ ವಲಯದಲ್ಲಿ ಗುರುತಿಸಲಾಗುತ್ತದೆ.

ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಭಕ್ತಿಯ ಹೆಜ್ಜೆಯನ್ನಿಟ್ಟು ಬನ್ನಿ

ಸಂಪರ್ಕ

ನಂ. 1 ಪ್ಯಾಲೇಸ್ ರಸ್ತೆ, ಅಂಬೇಡ್ಕರ್ ವೀಧಿ, ಬೆಂಗಳೂರು – 560 001, ಕರ್ನಾಟಕ

www.radissonhotels.com/bengaluru-atria

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಸುಮಾರು 24 ಕಿ.ಮೀ.

ಮೆಟ್ರೋ: ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ – 500 ಮೀ.

image

ಏಟ್ರಿಯಾ ನಮ್ಮ ಪಾಲಿಗೆ ಕೇವಲ ಒಂದು ಹೊಟೇಲ್ ಅಲ್ಲ. ಇದು ಮೂರು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರಿನ ಜನರ ನೆನಪುಗಳು, ಸಂಭ್ರಮಗಳು ಮತ್ತು ಆತಿಥ್ಯದ ಸಂಸ್ಕೃತಿಯನ್ನು ಹೊತ್ತಿರುವ ಒಂದು ಪರಂಪರೆ. ರ‍್ಯಾಡಿಸನ್ ಬ್ಲೂ ಏಟ್ರಿಯಾದ ಮೂಲಕ ನಾವು ವಿಶ್ವಮಟ್ಟದ ಸೌಲಭ್ಯಗಳನ್ನು ನೀಡುತ್ತಿದ್ದರೂ, ನಮ್ಮ ಆತ್ಮ ಇನ್ನೂ ಬೆಂಗಳೂರಿನದೇ ಆಗಿದೆ. ಕೋವಿಡ್ ಸಮಯದಲ್ಲಿ ಹೊಟೇಲ್ ಉದ್ಯಮ ಜಾಗತಿಕವಾಗಿ ಕುಸಿದಿತ್ತು. ನಾವೂ ಅದರ ಪರಿಣಾಮ ಅನುಭವಿಸಿದ್ದೆವು. ಆದರೆ ಇದೀಗ ನಾವು ಮತ್ತೆ ಪುಟಿದೆದ್ದಿದ್ದೇವೆ.ಅತ್ಯುತ್ತಮ ಸೇವೆಯಿಂದಾಗಿಯೇ ಜನಮನವನ್ನು ಗೆದ್ದಿದ್ದೇವೆ. ಕುಪ್ಪಸ್ವಾಮಿ ರಾಜು ಅವರು ಪ್ರಾರಂಭಿಸಿದ ಈ ಸಂಸ್ಥೆಯನ್ನು ನಾನು, ಸುಂದರ್ ರಾಜು ಮತ್ತು ಕೌಶಿಕ್ ರಾಜು ಎಲ್ಲ ಸೇರಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.

- ಕೆ. ನಾಗರಾಜು, ಎಕ್ಸಿಕ್ಯೂಟಿವ್ ಡೈರೆಕ್ಟರ್, ಏಟ್ರಿಯಾ ಗ್ರೂಪ್

Ramesh Ballamoole

View all posts by this author