ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್ ಗಾಂಧಿ ಹಾಗೂ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

CM DK Shivakumar: ರಾಹುಲ್ ಗಾಂಧಿ ಅವರು ಜನರ ಉದ್ದೇಶಕ್ಕಾಗಿ ಹೋರಾಟ ಮಾಡುತ್ತಿದ್ದು, ದೇಶದ ಚುನಾವಣಾ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದಾರೆ. ಎಸ್ಐಆರ್ ವಿಚಾರ ನಮ್ಮ ವಿಚಾರವಲ್ಲ, ದೇಶದ ಜನರ ವಿಚಾರ. ವಿರೋಧ ಪಕ್ಷದ ನಾಯಕರಾಗಿ, ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟ ಪಕ್ಷದ ನಾಯಕರಾಗಿ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆ. ಬಿಜೆಪಿಯವರು ರಾಹುಲ್ ಗಾಂಧಿ ಹಾಗೂ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಅ.06: ಕರ್ನಾಟಕ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಗೆಲ್ಲಬೇಕು. ಈ ರೀತಿ ಚುನಾವಣಾ ಆಯೋಗ ಬಳಸಿಕೊಂಡು ಮತಪಟ್ಟಿ ತಿರುಚಬಾರದು ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು.

ಫಾರಂ 7 ದುರುಪಯೋಗದ ಬಗ್ಗೆ ತಪ್ಪೊಪ್ಪಿಗೆ

ಮತದಾರರ ಹೆಸರನ್ನು ಒಂದು ಬೂತ್‌ನಿಂದ ಮತ್ತೊಂದು ಬೂತ್‌ಗಳಿಗೆ ಸ್ಥಳಾಂತರಿಸುವುದು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ವರ್ಗಗಳು ಹಾಗೂ ಬಡವರ ಮತಗಳನ್ನು ಕಿತ್ತುಹಾಕಲಾಗುತ್ತಿದ್ದು, ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಈಗ ಬಿಜೆಪಿಯವರು ಮತಕಳ್ಳರ ರಕ್ಷಣೆಗೆ ಹೊರಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಮಾಯಕರು, ಏಕೆಂದರೆ ಒಂದೇ ಕುಟುಂಬದಿಂದ ಗಂಡ, ಹೆಂಡತಿ, ಮಗಳು, ಮೂರು ಜನರು ಹೋಗಿ ಫಾರಂ 7 ಅರ್ಜಿಯನ್ನು ನೀಡಿದ್ದು, ಇದನ್ನು ಮಾಧ್ಯಮದವರೇ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ಒಂದೇ ಕುಟುಂಬದ ಮೂವರು ಈ ಅರ್ಜಿಗೆ ಸಹಿ ಹಾಕಿ ಕೊಟ್ಟಿದ್ದು, ತಮ್ಮ ದೂರವಾಣಿ ಸಂಖ್ಯೆಯನ್ನು ಕೊಟ್ಟಿರುವುದರಿಂದ, ಇವರು ಪೊಲೀಸ್ ಠಾಣೆಗೆ ಅಲೆಯುವಂತಾಗಿದೆ. ಬೆಳಗಾವಿಯ ಬಿಜೆಪಿಯ ರಾಜಕಾರಣಿ ರವಿ ಪಾಟೀಲ್ ಹಾಗೂ ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿಯೂ ಫಾರಂ 7 ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿಯೂ 1500 ಫಾರಂ 7 ಅರ್ಜಿಗಳನ್ನು ಮಧ್ಯರಾತ್ರಿ ಸುಟ್ಟಿದ್ದಾರೆ. ಬೆಂಗಳೂರಿನ ಜಯನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕ್ಷೇತ್ರದಲ್ಲಿ ಫಾರಂ 7 ಅರ್ಜಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದರು.

ರಾಜ್ಯದ ಜನರ ಮತಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದು

ಈಗ ಬಿಜೆಪಿಯ ಆರ್. ಅಶೋಕ್ ಹಾಗೂ ವಿಜಯೇಂದ್ರ ಅವರೇ ಸುಮಾರು 25000 ಫಾರಂ 7 ಅರ್ಜಿಗಳನ್ನು ನೀಡಿರಬಹುದು ಎಂದು ತಿಳಿಸಿದ್ದಾರೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಇದೆ. ಬಿಜೆಪಿಯವರು ಮತಗಳ್ಳತನಕ್ಕೆ ಮುಂದಾಗಿರುವುದು ಸರಿಯಲ್ಲ. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ, ಜನಪ್ರತಿನಿಧಿಯಾಗಿ ಹಾಗೂ ಪಕ್ಷದ ಮುಖ್ಯಸ್ಥನಾಗಿ ಈ ಬಗ್ಗೆ ನಮ್ಮ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇನೆ. ರಾಜ್ಯದ ಜನರ ಮತಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದು ಎಂದು ಸ್ಪಷ್ಟಪಡಿಸಿದರು.

ಸಿಎಂ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ʼಅವರು ಏನಾದರೂ ಹೇಳಿಕೊಳ್ಳಲಿʼ ಎಂದರು.‌

ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಕೀರ್ತಿ ಬೆಳಗಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿ‌‌ ಕೆ‌ ಶಿವಕುಮಾರ್ ಸನ್ಮಾನ!

ದೇಶದ ವಿರೋಧ ಪಕ್ಷಗಳ ನಾಯಕರಿಗೆ ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿಗಳ ಬಳಿ ಕೇಳುವ ಹಕ್ಕಿದೆ. ಆದರೆ ರಾಜ್ಯದ ಬಿಜೆಪಿ ನಾಯಕರು ಯಾಕೆ ರಾಜಭವನಕ್ಕೆ ತೆರಳಿದ್ದಾರೆ? ಅವರು ಷಡ್ಯಂತ್ರ ನಡೆಸಿ, ಫಾರಂ 7 ದುರುಪಯೋಗಪಡಿಸಿಕೊಂಡಿದ್ದು ಈಗ ಹೆದರಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ, ಶೋಭಕ್ಕ, ವಿಜಯೇಂದ್ರ, ಅಶೋಕ್ ಅವರು ಫಾರಂ 7 ಅನ್ನು ನಾವೇ ಕೊಟ್ಟಿದ್ದೇವೆ ಎಂದು ಒಪ್ಪಿಕೊಳ್ಳಲಿ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಣ್ಣ ಕಾರ್ಯಕರ್ತರಿಗೆ ಇವರು ಫಾರಂ 7 ಅರ್ಜಿ ನೀಡಿದ್ದಾರೆ. ಅವರು ಯಾವ ರೀತಿ ಈ ಕಾರ್ಯಚರಣೆ ಮಾಡಿದ್ದಾರೆ ಎಂದು ನನ್ನ ಸ್ನೇಹಿತರು ನನಗೆ ಮಾಹಿತಿ ನೀಡಿದ್ದಾರೆ. ಒಬ್ಬೊಬ್ಬರಿಗೆ 1000, 5000, 10,000 ಅರ್ಜಿಗಳನ್ನು ನೀಡಿದ್ದು, ನಾನು ಮುಖ್ಯಚುನಾವಣಾಧಿಕಾರಿ ಕಚೇರಿಗೆ ಹೋದ ಬಳಿಕ, ಬಿಎಲ್ಓಗಳಿಂದ ತಾವು ಸಲ್ಲಿಸಿದ್ದ ಫಾರಂ 7 ಅನ್ನು ಕೆಲವರು ಮನವಿ ಮಾಡಿ ವಾಪಸ್ ಪಡೆದರೆ ಮತ್ತೆ ಕೆಲವರು ಕಿತ್ತುಕೊಂಡಿದ್ದಾರೆ. ಅವುಗಳನ್ನು ಸುಟ್ಟು ಹಾಕಿದ್ದಾರೆ. ಬಿಎಲ್ಓಗಳಿಗೆ ಬೆದರಿಕೆ ಹಾಕಿ ಲಕ್ಷಾಂತರ ಅರ್ಜಿ ಪಡೆದಿದ್ದಾರೆ. ಬಿಎಲ್ಓಗಳು ಇದರ ಬಗ್ಗೆ ವರದಿ ನೀಡಿದ್ದಾರೆ. ಮತದಾನದ ಹಕ್ಕು ಕಳೆದುಕೊಂಡವರು ದೂರು ನೀಡುವುದು ಸಹಜ. ಬದುಕಿರುವವರನ್ನು ಸತ್ತಿದ್ದಾರೆ ಎಂದು ತೋರಿಸಲಾಗಿದೆ. ಈ ಫಾರಂ 7 ಅನ್ನು ದೆಹಲಿ ಅಥವಾ ಬೇರೆಡೆ ಮುದ್ರಿಸಿ ಕೊಟ್ಟಿದ್ದಾರೆ. ಹೀಗಾಗಿ ನಾವು ಮುಖ್ಯಚುನಾವಣಾಧಿಕಾರಿ ಕಚೇರಿಗೆ ಹೋಗಿ ದೂರು ನೀಡಿದ್ದೇವೆ. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆʼ ಎಂದರು.

ಬಿಜೆಪಿ, ಜೆಡಿಎಸ್ ತಂತ್ರಗಳು ನನಗೆ ಗೊತ್ತಿವೆ

ನಮ್ಮ ಜಾಗದಲ್ಲಿ ಅವರು ಇದ್ದಿದ್ದರೆ ಏನು ಮಾಡುತ್ತಿದ್ದರು? ಈ ಹಿಂದೆ ಚಿಲುಮೆ ಸಂಸ್ಥೆ ಹೆಸರಿನಲ್ಲಿ ಅಕ್ರಮ ಎಸಗಿದ್ದರು. ಅವರೇ ಬಿಎಲ್ಓ ನೇಮಕ ಮಾಡಿದ್ದರು. ಅವರು ಏನೆಲ್ಲಾ ಅಕ್ರಮ ಮಾಡಲು ಹೊರಟಿದ್ದಾರೆ ಎಂದು ನನಗೆ ಗೊತ್ತಿದೆ. ಜೆಡಿಎಸ್ ನಾಯಕರ ತಂತ್ರಗಳೇನು? ಬಿಜೆಪಿ ನಾಯಕರ ತಂತ್ರಗಳೇನು ಎಂದು ನನಗೆ ಗೊತ್ತಿದೆ. ನನಗೆ ಗೊತ್ತಿಲ್ಲ ಎಂದು ಅವರು ಭಾವಿಸಿದ್ದಾರೆ. ಅವರ ಮತದಾರರ ಮತದಾನದ ಹಕ್ಕು ರಕ್ಷಣೆ ಮಾಡುವುದೂ ನಮ್ಮ ಜವಾಬ್ದಾರಿ. ಚುನಾವಣಾ ಆಯುಕ್ತರ ಕಚೇರಿಗೆ ದೂರು ಕೊಟ್ಟ ಬಳಿಕ ಚುನಾವಣಾ ಆಯೋಗ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಪರಿಶೀಲನೆ ನಡೆಸದೇ ಯಾವುದೇ ಫಾರಂ 7 ಅರ್ಜಿಗಳನ್ನು ಅನುಮೋದಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಕೆಲವು ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಯಾರು ಆ ಅರ್ಜಿಗಳನ್ನು ನೀಡಿದರು ಎಂದು ಅವರೇ ಹೇಳಬೇಕು. ಇದರ ಬಗ್ಗೆಯೂ ತನಿಖೆ ಆಗಬೇಕು ಎಂದು ತಿಳಿಸಿದರು.

ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಪಿತೂರಿ. ಈ ಮತಗಳ್ಳತನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಮಹದೇವಪುರ ಹಾಗೂ ಆಲಂದ ಸೇರಿದಂತೆ ಮತಗಳ್ಳತನದ ಬಗ್ಗೆ ಧ್ವನಿ ಎತ್ತಿದ್ದು ಬೆಂಗಳೂರಿನಿಂದಲೇ. ನಮ್ಮ ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್ ಅವರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ತಪ್ಪೊಪ್ಪಿಗೆ ನೀಡಿದ್ದು, ಕ್ರಮ ಜರುಗಿಸದಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ? ಬೆಳಗಾವಿ, ಬಳ್ಳಾರಿ, ಮೈಸೂರಿನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದರು.

ರಾಹುಲ್ ಗಾಂಧಿ ಹಾಗೂ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ

ರಾಹುಲ್ ಗಾಂಧಿ ಅವರ ಪ್ರತಿಭಟನೆ ತಡೆಯಲಾಗಿದೆ ಎಂದು ಕೇಳಿದಾಗ, ʼಅವರು ತಡೆಯಲಿ, ಬಂಧಿಸಲಿ, ರಾಹುಲ್ ಗಾಂಧಿ ಅವರು ಇದಕ್ಕೆಲ್ಲಾ ಜಗ್ಗುವುದಿಲ್ಲ. ರಾಹುಲ್ ಗಾಂಧಿ ಅವರು ಜನರ ಉದ್ದೇಶಕ್ಕಾಗಿ ಹೋರಾಟ ಮಾಡುತ್ತಿದ್ದು, ದೇಶದ ಚುನಾವಣಾ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದಾರೆ. ಎಸ್ಐಆರ್ ವಿಚಾರ ನಮ್ಮ ವಿಚಾರವಲ್ಲ, ದೇಶದ ಜನರ ವಿಚಾರ. ವಿರೋಧ ಪಕ್ಷದ ನಾಯಕರಾಗಿ, ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟ ಪಕ್ಷದ ನಾಯಕರಾಗಿ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆ. ರಾಹುಲ್ ಗಾಂಧಿ ಅವರು ತಮ್ಮ ಕರ್ತವ್ಯ ಮಾಡುತ್ತಿದ್ದು, ಬಿಜೆಪಿಯವರು ರಾಹುಲ್ ಗಾಂಧಿ ಹಾಗೂ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲʼ ಎಂದು ಪುನರುಚ್ಚರಿಸಿದರು.

ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂಬ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ಸಭೆ ಮಾಡಿದ್ದು, ಶಾಸಕರಿಗೆ ಮಾಹಿತಿ ನೀಡಿದ್ದೇನೆ. ನಮ್ಮ ದೂರಿನ ಬಳಿಕ ಚುನಾವಣಾ ಆಯೋಗ, ಮತಪಟ್ಟಿಯಿಂದ ಹೊರಗುಳಿದವರು ತಮ್ಮ ಹಕ್ಕು ಪಡೆಯಲು ಫಾರಂ 6 ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದಾರೆ. ಇದಕ್ಕಾಗಿ ವಿಶೇಷ ಅಭಿಯಾನ ನಡೆಸಲು ಸೂಚಿಸಿದ್ದಾರೆ. ಶೋಷಿತ ವರ್ಗ ಸೇರಿದಂತೆ ಎಲ್ಲರನ್ನು ಪರಿಗಣಿಸಿ ಅಭಿಯಾನ ನಡೆಸಬೇಕು ಎಂದು ಸೂಚಿಸಿದ್ದು, ಇದು ಕರ್ನಾಟಕದ ಜಯ’ ಎಂದು ತಿಳಿಸಿದರು.

ರಾಜ್ಯಕ್ಕೆ, ರೈತರಿಗೆ, ಬಿಜೆಪಿಯವರಿಗೆ ಒಳ್ಳೆಯದು ಮಾಡೋಣ

ಬಸ್ ಟಿಕೆಟ್ ದರ ಹಾಗೂ ಹಾಲಿನ ದರ ಏರಿಕೆ ಬಗ್ಗೆ ಕೇಳಿದಾಗ, ʼನೀವು ಏನು ಮಾಡಬೇಕು ಎಂದು ಹೇಳುತ್ತೀರಿ? ಬಿಜೆಪಿಯವರು ಏನು ಹೇಳುತ್ತಾರೆ? ರೈತರಿಗೆ ಕೊಡಬೇಡಿ ಎಂದು ಅವರು ಹೇಳುತ್ತಾರೆಯೇ? ಈ ಬಗ್ಗೆ ಚರ್ಚೆ ಮಾಡೋಣʼ ಎಂದರು.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿಲ್ಲ ಈ ಸಮಯದಲ್ಲಿ ಬಸ್ ಟಿಕೆಟ್ ದರ ಏರಿಸಿದರೆ ಪ್ರತಿಭಟಿಸುವುದಾಗಿ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ ʼಅವರು ಏನು ಬೇಕಾದರೂ ಮಾಡಲಿ. ನಮ್ಮ ರಾಜ್ಯಕ್ಕೆ, ರೈತರಿಗೆ, ಬಿಜೆಪಿಯವರಿಗೆ ಒಳ್ಳೆಯದೋ ಅದನ್ನು ಮಾಡೋಣʼ ಎಂದರು.

AI Education: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಐ ತರಬೇತಿ ನೀಡಲು ಗೂಗಲ್ ಕಂಪನಿ ಆಸಕ್ತಿ: ಸಿಎಂ

ಜಿಎಸ್‌ಟಿ ಮಂಡಳಿ ಸಭೆಗೆ ಹಾಜರಾಗಲು ಇಂದು ದೆಹಲಿಗೆ ಪ್ರಯಾಣ

ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಕೇಳಿದಾಗ, ʼಜಿಎಸ್‌ಟಿ ಮಂಡಳಿ ಸಭೆ ನಡೆಯುತ್ತಿದ್ದು, ಸಭೆಗೆ ತೆರಳುತ್ತಿದ್ದೇನೆ. ನಮ್ಮ ಪ್ರಾತ್ಯಕ್ಷಿಕೆಯನ್ನು ಒಂದು ದಿನ ಮುಂದೂಡಲಾಗಿದ್ದರೂ ನಾನು ಈಗಲೇ ಹೊರಟಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ. ಸಚಿವ ಕೃಷ್ಣಬೈರೇಗೌಡರು ಮುಂಚಿತವಾಗಿ ತೆರಳಿದ್ದು, ಈಗಾಗಲೇ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಪರವಾಗಿ ತಂಡವನ್ನು ಕಳುಹಿಸುತ್ತಿದ್ದರು. ಈಗ ಸಚಿವರನ್ನು ಕಳುಹಿಸಿ, ನಾನೂ ಕೂಡ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ. ನಾಡಿದ್ದು ಗೋವಾಕ್ಕೆ ತೆರಳುತ್ತಿದ್ದು, ಪಕ್ಷದ ಕೆಲಸ ಮುಗಿಸಿ ಹಿಂತಿರುಗುತ್ತೇನೆʼ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.