ಬೆಂಗಳೂರು, ಮಾ.13: ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹರಿಹಾಯ್ದರು. ವಿಧಾನಸೌಧದ ಆವರಣದಲ್ಲಿ ಹಾಗೂ ಬಿಡದಿಯ ರೆಸಾರ್ಟ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.
ಒಡಿಶಾ ಶಾಸಕರು ರಾಮನಗರ ರೆಸಾರ್ಟ್‌ನಲ್ಲಿರುವ ಬಗ್ಗೆ ಕೇಳಿದಾಗ, ʼರಾಜಕೀಯ ಪಕ್ಷಗಳಿಗೆ ಕುದುರೆ ವ್ಯಾಪಾರದ ಭೀತಿ ಇರುತ್ತದೆ. ರಾಜಕೀಯ ರಂಗದಲ್ಲಿ ಎಲ್ಲಾ ಪಕ್ಷಗಳು ಎದುರಿಸುವ ವಿಚಾರ ಇದು. ಅವರು ಇಲ್ಲಿಗೆ ಬಂದಿರುವಾಗ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ನಾನು ಹಾಗೂ ನಮ್ಮ ಶಾಸಕರು ಅವರನ್ನು ಭೇಟಿ ಮಾಡಿದ್ದೇವೆʼ ಎಂದು ತಿಳಿಸಿದರು.
ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್‌ಗಳ ಬದಲಾವಣೆ: ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಪಕ್ಷಕ್ಕೆ ಅವರದೇ ಶಾಸಕರ ಮೇಲೆ ನಂಬಿಕೆ ಇಲ್ಲ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಹಾಗಿದ್ದರೆ ಅವರು ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿದ್ದು ಯಾಕೆ?ʼ ಎಂದು ಅವರು ಪ್ರಶ್ನಿಸಿದರು.
ನಮ್ಮ ಶಾಸಕರಿಗೆ ದೊಡ್ಡ ಆಫರ್‌ಗಳು ಬಂದಿವೆ
ಇದು ಹೈಕಮಾಂಡ್ ನಾಯಕರು ಕೊಟ್ಟಿರುವ ಟಾಸ್ಕ್ ಆಗಿದೆಯೇ ಎಂದು ಕೇಳಿದಾಗ, ʼಯಾವ ಟಾಸ್ಕ್ ಕೂಡ ಇಲ್ಲ. ರಾಜ್ಯಸಭಾ ಚುನಾವಣೆ ಇರುವ ಕಾರಣಕ್ಕೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ನಮ್ಮವರ ಮೇಲೆ ಒತ್ತಡವಿದೆ. ದೊಡ್ಡ, ದೊಡ್ಡ ಆಫರ್‌ಗಳನ್ನು ಕೊಡುತ್ತಿದ್ದಾರೆ. 14-15 ಜನ ಎಂಎಲ್‌ಎಗಳು ಇಲ್ಲಿಗೆ ಬಂದಿದ್ದಾರೆ. ಒಡಿಸ್ಸಾ ಕೆಪಿಸಿಸಿ ಅಧ್ಯಕ್ಷರು ಕರೆ ಮಾಡಿ ಜಾತ್ಯಾತೀತ ಪಕ್ಷಗಳೆಲ್ಲಾ ಒಂದಾಗಿದ್ದೇವೆ. ಆಪರೇಷನ್ ಕಮಲ ನಡೆಯುವ ಸಂಭವಿದೆ ಎಂದರು. ಪಕ್ಷದ ಅಧ್ಯಕ್ಷರು ಕರೆ ಮಾಡಿದಾಗ ಗೌರವ ನೀಡುವುದು ನಮ್ಮ ಕರ್ತವ್ಯ. ಬನ್ನಿ ಇಲ್ಲೇ ವಾತಾವರಣ ಚೆನ್ನಾಗಿದೆ ಎಂದು ಹೇಳಿದೆ. ಎಲ್ಲಾ ಶಾಸಕರು ಖುಷಿಯಾಗಿದ್ದಾರೆ. ಹೊಸಬರು ಸಹ ಇದ್ದಾರೆ. ಅವರೇ ಬಂದು ಇಲ್ಲಿ ಉಳಿದುಕೊಂಡಿದ್ದಾರೆ. ನಾವು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದೇವೆ. ಬಿಜೆಡಿ, ಕಮ್ಯುನಿಸ್ಟ್ ಪಕ್ಷ ಹಾಗೂ ನಾವು ಜಂಟಿಯಾಗಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ದೇವೆ. ಬಿಜೆಪಿ ಮಾಡುವುದು ಮಾಡುತ್ತದೆ, ನಾವು ಮಾಡೋದು ಮಾಡುತ್ತೇವೆʼ ಎಂದರು.
ಟ್ರಬಲ್ ಶೂಟರ್ ಕೆಲಸ ಸಮಾಪ್ತಿಯಾಗಿದೆ ಎಂದಾಗ, ʼಮಾಗಡಿ ಬಾಲಕೃಷ್ಣ, ಯೋಗೇಶ್ವರ್ ಇದ್ದಾರೆ. ಅವರ ಅನುಭವ, ಅವರ ಕಸ್ಟಡಿಯಲ್ಲಿ ನಾವಿದ್ದೇವೆ. ಅವರಿಗೂ ಜವಾಬ್ದಾರಿ ಇದೆಯಲ್ಲ. ನಮ್ಮ ಜಿಲ್ಲೆಯ ಎಲ್ಲಾ ಶಾಸಕರಿಗೂ ಜವಾಬ್ದಾರಿಯಿದೆ. ಎಲ್ಲರನ್ನೂ ಕಾಪಾಡಬೇಕಿರುವುದು ನಮ್ಮ ಕರ್ತವ್ಯವಲ್ಲವೇ? ಯಾರೂ ಬರಲ್ಲ ಅದು ಬೇರೆ ವಿಚಾರ. ಯಾರೂ ಬರಲು ಆಗುವುದಿಲ್ಲ, ಮುಟ್ಟಲೂ ಆಗುವುದಿಲ್ಲ, ಮಾತನಾಡುವುದಕ್ಕೂ ಆಗುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲʼ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸುವ ಬಗ್ಗೆ ಬಿಜೆಪಿಯವರು ಧ್ವನಿ ಎತ್ತುತ್ತಿಲ್ಲ: ಡಿ.ಕೆ. ಶಿವಕುಮಾರ್
ಈ ಹಿಂದೆಯೂ ಗುಜರಾತ್ ಚುನಾವಣೆ ಹೊತ್ತಿನಲ್ಲೂ ನೀವು ಇದೇ ರೀತಿ ಪಕ್ಷಕ್ಕೆ ನೆರವಾಗಿದ್ದೀರಿ. ನಿಮ್ಮ ಆಸೆ ಈಡೇರಲಿದೆಯೇ ಎಂದಾಗ, ʼನಾನು ಇದರ ಬಗ್ಗೆ ಮಾತನಾಡುವುದಿಲ್ಲ. ಕಾದು ನೋಡೋಣʼ ಎಂದರು. ಇದರಿಂದ ನಿಮ್ಮ ಮುಂದಿನ ಹೆಜ್ಜೆ ನಿಮ್ಮ ಕನಸಿನ ಹತ್ತಿರ ಇರುತ್ತದೆಯೇ ಎಂದಾಗ, ʼನಾನೇಕೆ ಕನಸು ಕಾಣಲಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆʼ ಎಂದರು. ಯಾವಾಗ ವಾಪಸ್ ಕರೆದುಕೊಂಡು ಹೋಗುವುದು ಎಂದಾಗ, ʼಅದನ್ನ ನಾವು ತೀರ್ಮಾನ ಮಾಡುತ್ತೇವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.