ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿ. 4ರಂದು ರಸಾರಾಧನಮ್ ಸಮಾರೋಪ; ಶತಾವಧಾನಿ ಡಾ. ಆರ್. ಗಣೇಶ್‌ರಿಂದ ʼಶತಧಾರಾʼ ಪ್ರಸ್ತುತಿ

ಬೆಂಗಳೂರಿನ ಜಯನಗರ 3ನೇ ಹಂತದ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ಡಿಸೆಂಬರ್ 4ರಂದು ಶುಕ್ರವಾರ ಸಂಜೆ 4 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯ ಸಮಾರೋಪ ಸಮಾರಂಭ ಹಾಗೂ ಶತಧಾರಾ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿನವ ನೃತ್ಯಸಂಸ್ಥೆ, ಪದ್ಯಪಾನ, ಪ್ರಹರ್ಷ ಪ್ರಕಾಶನ, ಪ್ರೇಕ್ಷಾ ಪ್ರತಿಷ್ಠಾನ ಮತ್ತು ರಾಗವಲ್ಲಿ ಲಲಿತಕಲಾ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಡಾ. ಗಣೇಶ್‌ ಅವರು ʼಶತಧಾರಾʼ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಬೆಂಗಳೂರು: ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ.ಆರ್. ಗಣೇಶ್ ಅವರಿಗೆ ಕಳೆದ ಜೂನ್ ತಿಂಗಳ ಆರಂಭದಿಂದ ಕಲಾವಿದರು ಸೇರಿ ನಡೆಸುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯ ಸಮಾರೋಪ ಸಮಾರಂಭ (Rasaaradhanam closing ceremony) ಹಾಗೂ ಶತಧಾರಾ (Shatadhara) ವಿನೂತನ ಕಾರ್ಯಕ್ರಮ ಡಿಸೆಂಬರ್ 4ರಂದು ಶುಕ್ರವಾರ ಸಂಜೆ 4 ಗಂಟೆಗೆ ಜಯನಗರ 3ನೇ ಹಂತದ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ನಡೆಯಲಿದೆ.

ಅಭಿನವ ನೃತ್ಯಸಂಸ್ಥೆ, ಪದ್ಯಪಾನ, ಪ್ರಹರ್ಷ ಪ್ರಕಾಶನ, ಪ್ರೇಕ್ಷಾ ಪ್ರತಿಷ್ಠಾನ ಮತ್ತು ರಾಗವಲ್ಲಿ ಲಲಿತಕಲಾ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ನಡೆಯುವ ʼರಸಾರಾಧನಮ್ʼ ಕಾರ್ಯಕ್ರಮದಲ್ಲಿ ಡಾ. ಗಣೇಶ್‌ ಅವರು ʼಶತಧಾರಾʼ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಯಾವುದೇ ಪೂರ್ವಸಿದ್ಧತೆ ಇಲ್ಲದೆ ಪ್ರೇಕ್ಷಕರು ಕೋರುವ ವಿಷಯಗಳ ಮೇಲೆ ತಕ್ಷಣ ಮೂಡುವ ʼಆಶುಕವಿತೆʼ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ. ಇದಕ್ಕೆ ಪೂರಕವಾಗಿ ʼಕಾವ್ಯವಾಚನʼ ಹಾಗೂ ʼಅಪ್ರಸ್ತುತ ಪ್ರಸಂಗʼಗಳನ್ನು ಕೂಡ ಅವರು ಪ್ರಸ್ತುತ ಪಡಿಸಲಿದ್ದಾರೆ.

saaradhanam closing ceremony (1)

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶ್ರೀನಿವಾಸ ವರಖೇಡಿ ಅವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಜಾತ ಶಿಲ್ಪ ಮತ್ತು ಪದ್ಯಗಳನ್ನು ಒಳಗೊಂಡ 2027ರ ದಿನದರ್ಶಿಕೆ ಹಾಗೂ ಕಲೆ-ಇತಿಹಾಸಗಳಿಗೆ ಸಂಬಂಧಿಸಿದ ಕೆಲವು ಅಧ್ಯಯನಪೂರ್ಣ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಗುವುದು.

ಅಭಿಜಾತ ನೃತ್ಯ, ಸಂಗೀತ, ಅವಧಾನ, ತಾಳಮದ್ದಳೆ, ಏಕವ್ಯಕ್ತಿ ಯಕ್ಷಗಾನ, ಕಾವ್ಯಸಂಗೀತ, ವಾಚನ-ವ್ಯಾಖ್ಯಾನ ಸೇರಿದಂತೆ ರಸರಾಧಾನಮ್ ಸರಣಿಯಲ್ಲಿ ಶತಾವಧಾನಿ ಡಾ. ಗಣೇಶ್‌ ಅವರ ಕೃತಿಗಳನ್ನಾಧರಿಸಿ ಡಾ. ಪದ್ಮಾ ಸುಬ್ರಹ್ಮಣ್ಯಂ, ಡಾ. ನಾಗವಲ್ಲಿ ನಾಗರಾಜ್, ನಿರುಪಮಾ ರಾಜೇಂದ್ರ, ಶಂಕರ ಶಾನಭಾಗ್, ಮಂಟಪ ಪ್ರಭಾಕರ ಉಪಾಧ್ಯ ಮೊದಲಾದ ಖ್ಯಾತ ಕಲಾವಿದರು ವಿವಿಧ ಪ್ರದರ್ಶನಗಳನ್ನು ನೀಡಿದರು.

ರಸಾರಾಧನಮ್ ಸಮಾರೋಪ ಸಮಾರಂಭ ಹಾಗೂ ಡಾ. ಆರ್. ಗಣೇಶ್ ಅವರಿಂದ ʼಶತಧಾರಾʼ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.