| ಬೆಂಕಿ ಬಸಣ್ಣ, ನ್ಯೂಯಾರ್ಕ್
ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಗೆದ್ದ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್ ರಾಜ್ಯದ ಆಲ್ಬನಿಯ ಹಿಂದೂ ಕಲ್ಚರಲ್ ಸೆಂಟರ್‌ನಲ್ಲಿ ಭಾನುವಾರ ಅದ್ಧೂರಿಯಾಗಿ ವಿಜಯೋತ್ಸವ ನಡೆಯಿತು.
ಬೆಳಗ್ಗೆಯೇ 5 ವರ್ಷದ ಮಕ್ಕಳಿಂದ 85 ವರ್ಷದ ಹಿರಿಯರವರೆಗೆ ನೂರಾರು ಕ್ರಿಕೆಟ್ ಅಭಿಮಾನಿಗಳು ಹಿಂದೂ ಕಲ್ಚರಲ್ ಸೆಂಟರ್‌ಗೆ ಆಗಮಿಸಿ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದರು. ಆರ್‌ಸಿಬಿ ಅಭಿಮಾನಿಗಳ ಜತೆಗೆ ಗುಜರಾತ್ ಟೈಟನ್ಸ್ (GT) ಬೆಂಬಲಿಗರೂ ಕ್ರೀಡಾಸ್ಫೂರ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆರ್‌ಸಿಬಿ ಜಯ ಖಚಿತವಾದ ಕ್ಷಣದಿಂದಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಡೋಲು, ನೃತ್ಯ, ಜಯಘೋಷಗಳ ಮೂಲಕ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. "ಈ ಸಲವೂ ಕಪ್ ನಮ್ದೇ" ಎಂಬ ಘೋಷಣೆಗಳು ಹಿಂದೂ ಕಲ್ಚರಲ್ ಸೆಂಟರ್ ಆವರಣದಲ್ಲಿ ಮೊಳಗಿದವು.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ದೇವಾಲಯದ ಸ್ವಯಂಸೇವಕರು ರುಚಿಕರವಾದ ಉಪಾಹಾರ ಮತ್ತು ಭೋಜನವನ್ನು ಸಿದ್ಧಪಡಿಸಿದ್ದರು. ಕುಟುಂಬ ಸಮೇತರಾಗಿ ಆಗಮಿಸಿದ್ದ ಕನ್ನಡಿಗರು ಹಾಗೂ ಭಾರತೀಯ ಸಮುದಾಯದ ಸದಸ್ಯರು ಕ್ರಿಕೆಟ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಸತತ ಎರಡನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದರು. ವಿದೇಶದಲ್ಲಿದ್ದರೂ ತಮ್ಮ ನೆಚ್ಚಿನ ತಂಡದ ಗೆಲುವನ್ನು ತವರಿನ ಹಬ್ಬದಂತೆ ಆಚರಿಸಿಕೊಂಡರು.
ಹಿಂದೂ ಕಲ್ಚರಲ್ ಸೆಂಟರ್ ಸಭಾಂಗಣದಲ್ಲಿ ನಡೆದ ಈ ನೇರಪ್ರಸಾರ ಹಾಗೂ ಆರ್‌ಸಿಬಿ ವಿಜಯೋತ್ಸವ ವೀಕ್ಷಣಾ ಕಾರ್ಯಕ್ರಮವನ್ನು ಸಮುದಾಯದ ಮುಖಂಡರಾದ ಬೆಂಕಿ ಬಸಣ್ಣ, ರಾಮೀ ರೆಡ್ಡಿ, ಕಲ್ಯಾಣ್ ಘುಲೆ, ಅಭಿಷೇಕ್, ರಾಜೀವ್ ಹಾಗೂ ಇತರ ಸ್ವಯಂಸೇವಕರು ಸಂಘಟಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಹಲವಾರು ಸ್ವಯಂಸೇವಕರು ಶ್ರಮವಹಿಸಿದ್ದರು.
RCB vs GT: ʻಈ ಸಲಾನು ಕಪ್ ನಮ್ದೇʼ-ಗುಜರಾತ್ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್ ಗರಿ!
ಆರ್‌ಸಿಬಿಯ ಸತತ ಎರಡನೇ ಐಪಿಎಲ್ ಪ್ರಶಸ್ತಿ ಗೆಲುವು ಆಲ್ಬನಿ ಪ್ರದೇಶದ ಭಾರತೀಯ ಸಮುದಾಯದಲ್ಲಿ ವಿಶೇಷ ಉತ್ಸಾಹ ಮತ್ತು ಸಂಭ್ರಮಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಬಹಳ ಸಂತೋಷದಿಂದ ಆಚರಿಸಿಕೊಂಡರು.