ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿ ಹೊರಬಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಗದ್ಗದಿತರಾಗಿ ಕಣ್ಣೀರು ಹಾಕಿದ ದೃಶ್ಯ ಶುಕ್ರವಾರ ಕಂಡುಬಂದಿತು.
ಆಸ್ಪತ್ರೆಯಿಂದ ಹೊರಬರುವಾಗ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಲೇ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಮೊನ್ನೆ ದಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಾಯಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಅವರಿಗೆ ಅತ್ಯಂತ ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ವೈದ್ಯರು ತಮ್ಮ ಕೈಮೀರಿ ಪ್ರಯತ್ನ ಮಾಡಿದ್ದಾರೆ. ಈಗ ಆ ದೇವರೇ ಅವರನ್ನು ಕಾಪಾಡಬೇಕು ಎಂದು ಭಾವುಕರಾಗಿ ಹೇಳಿದ್ದಾರೆ.
25 ವರ್ಷಗಳ ಹಿಂದೆ ತಾಯಿಯವರ ಮೇಲೆ ಆ್ಯಸಿಡ್ ದಾಳಿ ಆದಾಗಲೂ ಅವರು ಬದುಕುವುದಿಲ್ಲ ಎಂದಿದ್ದರು. ಆದರೆ ಆಗ ದೇವರ ದಯೆಯಿಂದ ಅವರು ಪಾರಾಗಿದ್ದರು. ಅವರು ಮೊದಲಿನಿಂದಲೂ ಆ ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಈಗ ವೈದ್ಯಕೀಯ ಚಿಕಿತ್ಸೆಗಿಂತಲೂ ಆ ರಾಜರಾಜೇಶ್ವರಿ ತಾಯಿಯೇ ಅವರನ್ನು ಕಾಪಾಡಬೇಕು. ಹಿಂದೆಯೂ ಕಾಪಾಡಿದ್ದರು, ಈಗಲೂ ಯಾವುದೇ ಸಮಸ್ಯೆ ಇಲ್ಲದೆ ಗುಣಮುಖರಾಗಿ ಮನೆಗೆ ಬರುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಗದ್ಗದಿತರಾದರು.
ಇದೇ ವೇಳೆ ಮಣಿಪಾಲ್ ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಚೆನ್ನಮ್ಮ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಚೆನ್ನಮ್ಮನಿಗೆ ಬುಧವಾರದಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ತಕ್ಷಣವೇ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಉಸಿರಾಟದ ಸಮಸ್ಯೆ ಹೊರತುಪಡಿಸಿ ಸದ್ಯಕ್ಕೆ ಬೇರೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ, ನೋಡೋಣ ಎಂದು ತಿಳಿಸಿ ಭಾವುಕರಾದರು.