ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ, ಪ್ರಗತಿಪರ ಚಿಂತಕ ಕೆ.ಟಿ. ಶಿವಪ್ರಸಾದ್ (79) (K.T. Shivaprasad) ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ರೈತ ಹಾಗೂ ದಲಿತ ಚಳವಳಿಗಳೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದ್ ಅವರು ತಮ್ಮ ಕಲೆಯ ಮೂಲಕ ಸಾಮಾಜಿಕ ಬದ್ಧತೆಯನ್ನು ಅಭಿವ್ಯಕ್ತಿಸಿದ ಅಪರೂಪದ ಕಲಾವಿದರಾಗಿದ್ದರು. ಖ್ಯಾತ ಉದ್ಯಮಿ ಕಾರ್ಲೆ ಅವರ ಪುತ್ರರಾಗಿದ್ದ ಇವರು ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಸ್ನೇಹಿತರಾಗಿಯೂ ಪರಿಚಿತರಾಗಿದ್ದರು.
1947ರಲ್ಲಿ ಕೊಡಗಿನ ಮಡಿಕೇರಿ (ಮರ್ಕಾರ) ತಾಲೂಕಿನ ಬಡ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಶಿವಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ ಆಸಕ್ತಿ ಇತ್ತು. ಆದರೆ ಆ ಕಾಲದಲ್ಲಿ ಚಿತ್ರಕಲೆಗೆ ಅಷ್ಟಾಗಿ ಮನ್ನಣೆ ಇರದ ಕಾರಣ, ಕುಟುಂಬದ ಇಚ್ಛೆಯಂತೆ ಅವರು ಎಂಜಿನಿಯರಿಂಗ್ ಕಾಲೇಜು ಸೇರಬೇಕಾಯಿತು. ಆದರೆ ಕಲೆಯ ಮೇಲಿದ್ದ ಅದಮ್ಯ ಒಲವಿನಿಂದಾಗಿ ಎಂಜಿನಿಯರಿಂಗ್ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು, ಮುಂಬೈನ ಪ್ರತಿಷ್ಠಿತ 'ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್' ಸೇರಿದರು. ಅಲ್ಲಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದರು.
ಪದವಿ ಮುಗಿದ ನಂತರ ಅವರು ಕಲೆಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಕೇವಲ ಕಾನ್ವಾಸ್ ಮುಂದೆ ಕೂತು ಬಣ್ಣ ಹಚ್ಚುವ ಕಲಾವಿದರಾಗದೇ, ಕರ್ನಾಟಕದ ಶೋಷಿತ, ಬಡ ಕೃಷಿ ಕಾರ್ಮಿಕರ ಸಬಲೀಕರಣಕ್ಕಾಗಿ ಸೋಷಿಯಲಿಸ್ಟ್, ದಲಿತ ಮತ್ತು ರೈತ ಸಂಘಟನೆಗಳ ಮೂಲಕ ದೀರ್ಘಕಾಲ ಸಕ್ರಿಯ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಅವರ ಈ ಸಾಮಾಜಿಕ ಕಳಕಳಿ ಅವರ ಕಲಾಕೃತಿಗಳಲ್ಲೂ ಪ್ರತಿಫಲಿಸುತ್ತಿತ್ತು.
ಬ್ರಿಟನ್‌ನ ಶ್ರೇಷ್ಠ ಮಾಡರ್ನಿಸ್ಟ್ ಲುಸಿಯನ್ ಫ್ರಾಯ್ಡ್ ಅವರಿಗೆ ಹೋಲಿಸಲ್ಪಡುತ್ತಿದ್ದ ಕೆ.ಟಿ. ಶಿವಪ್ರಸಾದ್ ಅವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಅಪಾರ ಪ್ರಶಂಸೆ ಗಳಿಸಿವೆ. ಎಂಜಿಜಿನಿಯರಿಂಗ್‌ನ ಅಲ್ಪಾವಧಿಯ ಅನುಭವದಿಂದಾಗಿ ಅವರು ಅತ್ಯುತ್ತಮ ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದರು.
1976 ರಿಂದ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿಗಳಲ್ಲಿ ಇವರ ಹಲವು ಕಲಾ ಪ್ರದರ್ಶನಗಳು ನಡೆದಿವೆ.
ಕಲಾ ಜಗತ್ತಿಗೆ ಇವರು ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಇವರಿಗೆ ಪ್ರತಿಷ್ಠಿತ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿತ್ತು.