ಬೆಂಗಳೂರು: ಒಂದು ಉದ್ಯಮವನ್ನು ಆರಂಭಿಸುವುದು ಒಂದು ಸಾಧನೆಯಾದರೆ, ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಗುರುತಿಸಿ, ಅವುಗಳನ್ನು ಬೆಳೆಸುವುದು ಮತ್ತೊಂದು ಹಂತದ ಸವಾಲು. ರಿಯಲ್ ಎಸ್ಟೇಟ್, ಹಣಕಾಸು, ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯಮ ಸಂಬಂಧಗಳಂಥ ವಿಭಿನ್ನ ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ರೂಪಿಸಿಕೊಳ್ಳುತ್ತಿರುವ ಪರ್ವ ಗ್ರೂಪ್ (Parva Group), ಇಂಥ ಬಹುಮುಖ ಉದ್ಯಮ ಮಾದರಿಯ ಮೂಲಕ ತನ್ನದೇ ಆದ ಗುರುತನ್ನು ನಿರ್ಮಿಸಿದೆ.
ಪರ್ವ ಗ್ರೂಪ್ ಸಂಸ್ಥೆಯ ವತಿಯಿಂದ ವಿಶೇಷ ಹೂಡಿಕೆದಾರರ ಸಮಾಗಮವನ್ನು ಏರ್ಪಡಿಸಲಾಗಿದೆ. ಖ್ಯಾತ ಟೆನಿಸ್ ತಾರೆ ಮಹೇಶ್ ಭೂಪತಿ ಪರ್ವ ಗ್ರೂಪ್ ಸಂಸ್ಥೆಯ ಹೂಡಿಕೆದಾರರಾಗಿ ಕೈಜೋಡಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಹೇಶ್ ಭೂಪತಿ (12-Time Grand Slam Champion) ಮತ್ತು ಪರ್ವ ಗ್ರೂಪ್ನ ಸಂಸ್ಥಾಪಕ ಹಾಗೂ ಅಧ್ಯಕ್ಷ ನೀಲೇಶ್ ಎಚ್.ಪಿ. ಭಾಗವಹಿಸಲಿದ್ದಾರೆ. ನವೆಂಬರ್ 14ರಂದು ಶನಿವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಈ ಸಮಾಗಮವನ್ನು ಆಯೋಜಿಸಲಾಗಿದೆ. 'Exclusive Investor Meet – A Conversation at the Intersection of Sport, Business & Impact' ಎಂಬ ಈ ಕಾರ್ಯಕ್ರಮವು ಕ್ರೀಡೆ, ಉದ್ಯಮ ಮತ್ತು ಸಾಮಾಜಿಕ ಪ್ರಭಾವದ ನಡುವಿನ ಸಂಬಂಧಗಳನ್ನು ಚರ್ಚಿಸುವ ವೇದಿಕೆಯಾಗಿ ರೂಪುಗೊಂಡಿದೆ.
ಮಹೇಶ್ ಭೂಪತಿ ಸಾಥ್
ಇತ್ತೀಚೆಗೆ ಡೆಹ್ರಾಡೂನ್ನಲ್ಲಿ ಪರ್ವ ಸಂಸ್ಥೆಯಿಂದ wpl- ಅಂದರೆ ವುಮೆನ್ಸ್ ಪೆಡಲ್ ಲೀಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿಂದ ಜತೆಯಾದ ಮಹೇಶ್ ಭೂಪತಿ ಪರ್ವ ಗ್ರೂಪ್ ಸಂಸ್ಥೆಯ ಆಶಯ, ಉದ್ದೇಶ ಹಾಗೂ ಕಾರ್ಯಗಳನ್ನು ಮೆಚ್ಚಿ ಸಂಸ್ಥೆಯ ಜತೆಗೆ ಕೈಜೋಡಿಸಲು ಮುಂದಾಗಿದ್ದಾರೆ. ಸ್ವತಃ ಉದ್ಯಮಿ ಆಗಿರುವ ಮಹೇಶ್ ಟೆನಿಸ್ ಕೋಚಿಂಗ್ ಕ್ಲಬ್ ಕೂಡ ಹೊಂದಿದ್ದಾರೆ. ಹಾಗೆಯೇ ಶೀಘ್ರದಲ್ಲೇ ಪರ್ವ ಸಂಸ್ಥೆಯ ನೇತೃತ್ವದಲ್ಲಿ WTL- ವುಮೆನ್ಸ್ ಟೆನಿಸ್ ಲೀಗ್ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಅನುಭವಗಳು ಉದ್ಯಮ ಜಗತ್ತಿಗೆ ಹಲವು ರೀತಿಯಲ್ಲಿ ಪ್ರೇರಣೆಯಾಗಬಲ್ಲವು. ಗುರಿಯ ಸ್ಪಷ್ಟತೆ, ನಿರಂತರ ಪರಿಶ್ರಮ, ಒತ್ತಡದ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ದೀರ್ಘಕಾಲದ ಬದ್ಧತೆ ಇವೆಲ್ಲವೂ ಕ್ರೀಡೆಗೂ ಉದ್ಯಮಕ್ಕೂ ಸಾಮಾನ್ಯವಾಗಿರುವ ಗುಣಗಳು. ಇಂಥ ಅನುಭವಗಳನ್ನು ಉದ್ಯಮ ಮತ್ತು ಹೂಡಿಕೆಯ ಚರ್ಚೆಗಳೊಂದಿಗೆ ಬೆಸೆಯುವ ಪ್ರಯತ್ನ ಪರ್ವ ಗ್ರೂಪ್ನ ಸಂಸ್ಥೆಯದ್ದಾಗಿದೆ.
ನೀಲೇಶ್ ಎಚ್.ಪಿ. ನಾಯಕತ್ವ
ಪರ್ವ ಗ್ರೂಪ್ನ ಯಶಸ್ಸಿನ ಹಿಂದೆ ಸಂಸ್ಥಾಪಕ ಹಾಗೂ ಅಧ್ಯಕ್ಷ ನೀಲೇಶ್ ಎಚ್.ಪಿ. ಅವರ ಕನಸು ಹಾಗೂ ವಿಶನ್ ಇದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವ್ಯವಹಾರಗಳನ್ನು ಒಂದೇ ಸಮೂಹದಡಿ ತರುವ ಪ್ರಯತ್ನದ ಹಿಂದೆ ಅವರ ಶ್ರಮ ದೊಡ್ಡದು. ಪ್ರತಿಯೊಂದು ವ್ಯವಹಾರಕ್ಕೂ ತನ್ನದೇ ಆದ ಕಾರ್ಯಕ್ಷೇತ್ರ ಮತ್ತು ಪರಿಣತಿ ಇರಬೇಕು. ಆದರೆ ಅವುಗಳ ನಡುವೆ ಸಹಕಾರ ಮತ್ತು ಸಂಪರ್ಕವೂ ಇರಬೇಕು. ರಿಯಲ್ ಎಸ್ಟೇಟ್ ಕ್ಷೇತ್ರದ ಗ್ರಾಹಕರಿಗೆ ಹಣಕಾಸಿನ ಅರಿವು ಅಗತ್ಯವಾಗಬಹುದು, ಉದ್ಯಮಗಳಿಗೆ ತಂತ್ರಜ್ಞಾನ ಪರಿಹಾರಗಳು ಬೇಕಾಗಬಹುದು, ದೊಡ್ಡ ಕಾರ್ಯಕ್ರಮಗಳಿಗೆ ಭದ್ರತಾ ವ್ಯವಸ್ಥೆಗಳ ಅಗತ್ಯವಿರಬಹುದು. ಹೀಗೆ ವಿಭಿನ್ನ ಅಗತ್ಯಗಳಿಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಉದ್ಯಮ ಸಮೂಹದ ಮೂಲಕ ಪರಿಚಯಿಸುವುದು ಈ ಮಾದರಿಯ ವಿಶೇಷತೆ.
ಪರ್ವ ಕಾರ್ಯಗಳು
2023ರಲ್ಲಿ ಸ್ಥಾಪನೆಯಾಗಿ ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಸಮೂಹದ ಮೂಲ ಆಶಯ ಕೇವಲ ವಿವಿಧ ಕಂಪನಿಗಳನ್ನು ಕಟ್ಟುವುದಲ್ಲ, ವಿಭಿನ್ನ ಕ್ಷೇತ್ರಗಳ ಪರಿಣತಿಯನ್ನು ಪರಸ್ಪರ ಬೆಸೆಯುವ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸುವುದು. ಸಂಸ್ಥೆಯು ತನ್ನ ಧ್ಯೇಯವನ್ನು 'Creating Value. Building Trust. Securing Futures' ಎಂಬ ಘೋಷವಾಕ್ಯದ ಮೂಲಕ ವ್ಯಕ್ತಪಡಿಸುತ್ತಿದೆ. ಭಾರತ ಮತ್ತು UAE ನಡುವಿನ ವ್ಯವಹಾರಿಕ ಸಂಪರ್ಕಗಳನ್ನು ಬಲಪಡಿಸುವುದು ಸಂಸ್ಥೆಯ ವಿಶನ್ನ ಭಾಗ. ಎರಡೂ ದೇಶಗಳಲ್ಲಿ ಉದ್ಯಮ ನಡೆಸಲು ಬಯಸುವವರು, ಹೂಡಿಕೆ ಅವಕಾಶಗಳನ್ನು ಹುಡುಕುತ್ತಿರುವವರು ಹಾಗೂ ವೃತ್ತಿಪರ ಸಹಕಾರಕ್ಕೆ ಆಸಕ್ತಿ ಹೊಂದಿರುವವರಿಗೆ ಸಂಪರ್ಕದ ವೇದಿಕೆಯನ್ನು ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಈ ಆಶಯವನ್ನು ಕಾರ್ಯರೂಪಕ್ಕೆ ತರಲು ಪರ್ವ ಗ್ರೂಪ್ ತನ್ನ ವ್ಯವಹಾರಗಳನ್ನು ಪ್ರತ್ಯೇಕ ವಿಭಾಗಗಳಾಗಿ ರೂಪಿಸಿಕೊಂಡಿದೆ.
ರಿಯಲ್ ಎಸ್ಟೇಟ್ ಹೂಡಿಕೆ
ಜಾಗತಿಕ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ದುಬೈ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಆಧುನಿಕ ಮೂಲಸೌಕರ್ಯ, ವಸತಿ ಮತ್ತು ವಾಣಿಜ್ಯ ಯೋಜನೆಗಳು, ಅಂತಾರಾಷ್ಟ್ರೀಯ ಉದ್ಯಮ ವಾತಾವರಣ ಹಾಗೂ ಜಾಗತಿಕ ಹೂಡಿಕೆದಾರರ ಆಸಕ್ತಿಯಿಂದಾಗಿ ಈ ನಗರವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದೆ. ಇಂಥ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಮಾರ್ಗದರ್ಶನ ಮತ್ತು ಆಸ್ತಿ ಆಯ್ಕೆಯ ನೆರವು ನೀಡುವ ಉದ್ದೇಶದಿಂದ 'Parva Realty' ಕಾರ್ಯನಿರ್ವಹಿಸುತ್ತಿದೆ. ಇದು ದುಬೈ ಮೂಲದ ರಿಯಲ್ ಎಸ್ಟೇಟ್ ಬ್ರೋಕರೇಜ್ ಮತ್ತು ಸಲಹಾ ವಿಭಾಗವಾಗಿದ್ದು, ವಸತಿ ಹಾಗೂ ವಾಣಿಜ್ಯ ಆಸ್ತಿ ಮಾರಾಟ, ಆಸ್ತಿ ಹೂಡಿಕೆ ಸಲಹೆ, ಆಫ್-ಪ್ಲ್ಯಾನ್ ಪ್ರಾಪರ್ಟಿ ಅವಕಾಶಗಳು, ಮಾರುಕಟ್ಟೆ ವಿಶ್ಲೇಷಣೆ, ಸೂಕ್ತ ಆಸ್ತಿ ಆಯ್ಕೆ ಮತ್ತು ವ್ಯವಹಾರ ಪ್ರಕ್ರಿಯೆಗಳ ಸಮನ್ವಯದಂಥ ಸೇವೆಗಳನ್ನು ನೀಡುತ್ತಿದೆ. ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೇಲೆ ಶೇಕಡಾ 10ರಷ್ಟು ಬಾಡಿಗೆ ಆದಾಯ, ಶೇಕಡಾ 10ರಷ್ಟು ಮೌಲ್ಯವೃದ್ಧಿ ಹಾಗೂ ಬೈಬ್ಯಾಕ್ (Buyback) ಆಯ್ಕೆಯೂ ಇರುತ್ತದೆ.
ಹಣಕಾಸಿನ ಹೂಡಿಕೆಯ ಅರಿವು
ಹೂಡಿಕೆ ಎನ್ನುವುದು ಕೇವಲ ಹಣವನ್ನು ಒಂದು ಕ್ಷೇತ್ರದಲ್ಲಿ ತೊಡಗಿಸುವುದಲ್ಲ. ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು, ಅದರಲ್ಲಿರುವ ಅಪಾಯಗಳೇನು, ಮಾರುಕಟ್ಟೆಯ ಏರಿಳಿತಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ನಿರ್ಧಾರಗಳನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳಬೇಕು ಎಂಬ ಅರಿವು ಕೂಡ ಅಷ್ಟೇ ಮುಖ್ಯ. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಪರ್ವ ಗ್ರೂಪ್ ಅಡಿಯಲ್ಲಿ Diago Finance ಎಂಬ ವಿಭಾಗವನ್ನು ರೂಪಿಸಲಾಗಿದೆ. ಹಣಕಾಸು ಮಾರುಕಟ್ಟೆಯ ಶಿಕ್ಷಣ ಮತ್ತು ಹೂಡಿಕೆ ಸಂಬಂಧಿತ ಜ್ಞಾನವನ್ನು ಹೆಚ್ಚು ಜನರಿಗೆ ತಲುಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಭದ್ರತೆಯ ಸೇವೆ
ಯಾವುದೇ ಉದ್ಯಮವಾಗಲಿ, ವಾಣಿಜ್ಯ ಕಟ್ಟಡವಾಗಲಿ ಅಥವಾ ಸಾರ್ವಜನಿಕ ಕಾರ್ಯಕ್ರಮವಾಗಲಿ, ಅದರ ಸುಗಮ ಕಾರ್ಯನಿರ್ವಹಣೆಗೆ ಭದ್ರತೆ ಅತ್ಯಂತ ಮುಖ್ಯ. ಪರ್ವ ಗ್ರೂಪ್ನ ಮತ್ತೊಂದು ವಿಭಾಗವಾದ Gray Tigers Security, ವೃತ್ತಿಪರ ಭದ್ರತಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ. ವೈಯಕ್ತಿಕ ಭದ್ರತೆ, ನಿಕಟ ರಕ್ಷಣಾ ಸೇವೆಗಳು, ಕಾರ್ಪೊರೆಟ್ ಮತ್ತು ವಾಣಿಜ್ಯ ಕಟ್ಟಡಗಳ ಭದ್ರತೆ, ಕಾರ್ಯಕ್ರಮಗಳ ಭದ್ರತೆ, ಜನಸಂದಣಿ ನಿರ್ವಹಣೆ, ಆಸ್ತಿ ರಕ್ಷಣೆ, ಭದ್ರತಾ ಯೋಜನೆ ಮತ್ತು ಅಪಾಯಗಳ ಮೌಲ್ಯಮಾಪನ ಮುಂತಾದ ಸೇವೆಗಳನ್ನು ಈ ವಿಭಾಗ ನಿರ್ವಹಿಸುತ್ತದೆ. ವಿಶೇಷವಾಗಿ ಗಣ್ಯ ವ್ಯಕ್ತಿಗಳು, ವಿಐಪಿಗಳು, ಸೆಲೆಬ್ರಿಟಿಗಳು ಮತ್ತು ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಅಗತ್ಯವಿರುವ ಭದ್ರತಾ ವ್ಯವಸ್ಥೆಗಳತ್ತ ಇದರ ಗಮನವಿದೆ.
ಡಿಜಿಟಲ್ ತಂತ್ರಜ್ಞಾನ
ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವುದರಿಂದ ಹಿಡಿದು ಹಣಕಾಸಿನ ದಾಖಲೆಗಳನ್ನು ನಿರ್ವಹಿಸುವವರೆಗೆ, ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದರಿಂದ ಹಿಡಿದು ಕಾರ್ಯವಿಧಾನಗಳನ್ನು ಸರಳಗೊಳಿಸುವವರೆಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಡಿಜಿಟಲ್ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಪರ್ವ ಗ್ರೂಪ್ ತನ್ನದೇ ಆದ ಐಟಿ ವಿಭಾಗದ ಮೂಲಕ ವ್ಯವಹಾರಗಳ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಒತ್ತು ನೀಡುತ್ತಿದೆ. ಇದಕ್ಕಾಗಿಯೇ Parva PMS Portal ಎಂಬ ಡಿಜಿಟಲ್ ವೇದಿಕೆಯನ್ನೂ ಪರಿಚಯಿಸಲಾಗಿದೆ.
ಇವೆಂಟ್ ಮ್ಯಾನೇಜ್ಮೆಂಟ್
ಒಂದು ಉದ್ಯಮದ ಬೆಳವಣಿಗೆಯಲ್ಲಿ ಬಂಡವಾಳ, ತಂತ್ರಜ್ಞಾನ ಮತ್ತು ಪರಿಣತಿಯಷ್ಟೇ ಮುಖ್ಯವಾದ ಮತ್ತೊಂದು ಅಂಶವೆಂದರೆ ಸಂಬಂಧಗಳು. ಉದ್ಯಮಿಗಳು, ಹೂಡಿಕೆದಾರರು, ವೃತ್ತಿಪರರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಪರಸ್ಪರ ಸಂಪರ್ಕ ಸಾಧಿಸುವ ವೇದಿಕೆಗಳು ಹೊಸ ಸಹಕಾರಗಳಿಗೆ ದಾರಿ ಮಾಡಿಕೊಡುತ್ತವೆ. ಪರ್ವ ಗ್ರೂಪ್ನ Parva Events ವಿಭಾಗವು ಇಂಥ ಸಂಪರ್ಕ ಮತ್ತು ಅನುಭವಗಳ ಸೃಷ್ಟಿಗೆ ಒತ್ತು ನೀಡುತ್ತಿದೆ. ದೊಡ್ಡ ಮಟ್ಟದ ಕಾರ್ಯಕ್ರಮಗಳು, ಸಮ್ಮೇಳನಗಳು, ಉದ್ಯಮಿಗಳ ಸಭೆಗಳು ಮತ್ತು ವಿಶೇಷ ಆಚರಣೆಗಳ ಮೂಲಕ ವಿಭಿನ್ನ ಕ್ಷೇತ್ರಗಳ ಜನರನ್ನು ಒಂದೇ ವೇದಿಕೆಗೆ ತರುವ ಉದ್ದೇಶವನ್ನು ಇದು ಹೊಂದಿದೆ. ಇದರ ಜತೆಗೆ, ಚಲನಚಿತ್ರ ಮತ್ತು ಸೃಜನಶೀಲ ಶಿಕ್ಷಣ ಕ್ಷೇತ್ರದೊಂದಿಗಿನ ಸಂಪರ್ಕವೂ ಸಂಸ್ಥೆಯ ಚಟುವಟಿಕೆಗಳಲ್ಲಿ ಪ್ರಮುಖವಾದದ್ದು. Film Academy ಉಪಕ್ರಮದ ಮೂಲಕ ಚಲನಚಿತ್ರ ಮತ್ತು ಸೃಜನಶೀಲ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಭವಿಷ್ಯದತ್ತ ಸಾಗುವ ಉದ್ಯಮ ಪಯಣ
ಪರ್ವ ಗ್ರೂಪ್ ತನ್ನ ಮುಂದಿನ ಹಂತದ ಬೆಳವಣಿಗೆಗೆ ನಾಲ್ಕು ಪ್ರಮುಖ ಆದ್ಯತೆಗಳನ್ನು ಗುರುತಿಸಿದೆ. ಈಗಿರುವ ವ್ಯವಹಾರಗಳನ್ನು ಬಲಪಡಿಸುವುದು, ಭಾರತ ಮತ್ತು UAE ನಡುವಿನ ಉದ್ಯಮ ಸಂಪರ್ಕಗಳನ್ನು ವಿಸ್ತರಿಸುವುದು, ಡಿಜಿಟಲ್ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ದೀರ್ಘಕಾಲೀನ ಮೌಲ್ಯವನ್ನು ಸೃಷ್ಟಿಸುವುದು. ಈ ಆದ್ಯತೆಗಳು ಸಂಸ್ಥೆಯ ಮುಂದಿನ ಪಯಣಕ್ಕೆ ಒಂದು ದಿಕ್ಕನ್ನು ಸೂಚಿಸುತ್ತವೆ. ವಿಭಿನ್ನ ಉದ್ಯಮಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.
ದುಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯಿಂದ ಭಾರತದ ಉದ್ಯಮ ವಲಯದವರೆಗೆ, ಹಣಕಾಸಿನ ಅರಿವಿನಿಂದ ತಂತ್ರಜ್ಞಾನ ಆಧಾರಿತ ಪರಿಹಾರಗಳವರೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪರ್ವ ಗ್ರೂಪ್ ಸಂಸ್ಥೆ ಮುಂದಾಗಿದೆ.
'Creating Value. Building Trust. Securing Futures' ಎಂಬ ತನ್ನ ಘೋಷವಾಕ್ಯವನ್ನು ಸಂಸ್ಥೆಯು ತನ್ನ ಮುಂದಿನ ಬೆಳವಣಿಗೆಯ ಕೇಂದ್ರಬಿಂದುವಾಗಿ ಇರಿಸಿಕೊಂಡಿದೆ.
ಸಂಸ್ಥೆಯ ಐದು ಪ್ರಮುಖ ಮೌಲ್ಯಗಳು
- ವಿಶೇಷ ಪರಿಣತಿ
- ಗಡಿಯಾಚೆಗಿನ ಉದ್ಯಮ ವಿಶನ್
- ಗ್ರಾಹಕ ಕೇಂದ್ರಿತ ಚಿಂತನೆ
- ದೀರ್ಘಕಾಲದ ಸಂಬಂಧಗಳು
- ಭವಿಷ್ಯದ ಬೆಳವಣಿಗೆಯತ್ತ ಗಮನ
ಟೆನಿಸ್ ಇತಿಹಾಸದಲ್ಲಿ ಮಹೇಶ್ ಭೂಪತಿ ಚಿನ್ಮಯ
1974ರ ಜೂನ್ 7ರಂದು ಚೆನ್ನೈನಲ್ಲಿ ಜನಿಸಿದ ಮಹೇಶ್ ಭೂಪತಿ ಹೆಸರಿಗೆ ತಕ್ಕಂತೆ ಟೆನಿಸ್ ಕ್ಷೇತ್ರದ ನಿಜವಾದ ಭೂಪತಿ. ತಂದೆ ಸಿ.ಜಿ. ಕೃಷ್ಣ ಭೂಪತಿ ಅವರ ಪ್ರೇರಣೆಯಿಂದ ಬಾಲ್ಯದಲ್ಲೇ ಟೆನಿಸ್ಗೆ ಕಾಲಿಟ್ಟ ಮಹೇಶ್ ಭೂಪತಿಯವರು ದೇಶದ ಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದವರು. 1997ರ ಫ್ರೆಂಚ್ ಓಪನ್ ಮಿಕ್ಸ್ಡ್ ಡಬಲ್ಸ್ ಪ್ರಶಸ್ತಿ ಗೆದ್ದು, ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಮೊದಲ ಭಾರತೀಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಿಯಾಂಡರ್ ಪೇಸ್ ಜತೆಗಿನ ಅವರ ಜೋಡಿ 'ಇಂಡಿಯನ್ ಎಕ್ಸ್ಪ್ರೆಸ್' ಎಂದು ವಿಶ್ವಪ್ರಸಿದ್ಧವಾಯಿತು. 1999ರಲ್ಲಿ ವಿಶ್ವದ ನಂಬರ್ ಒನ್ ಡಬಲ್ಸ್ ಆಟಗಾರರಾಗಲು ಇವರು ಹಾಕಿದ ಶ್ರಮ ಅತೀತ ಹಾಗೂ ಅನನ್ಯ. ತಮ್ಮ ವೃತ್ತಿಜೀವನದಲ್ಲಿ 12 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು ಮತ್ತು 52 ಡಬಲ್ಸ್ ಪ್ರಶಸ್ತಿ ಗಳನ್ನು ಗೆದ್ದ ಮಹೇಶ್ ಭೂಪತಿ ಒಲಿಂಪಿಕ್ಸ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕವನ್ನೂ ಗೆದ್ದು ಭಾರತದ ವಿಜಯ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದರು. ಇವರ ಅಪ್ರತಿಮ ಸಾಧನೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ನೀಲೇಶ್ ಸಾಧನೆಯ ಪರ್ವ
ಉದ್ಯಮಿ ನೀಲೇಶ್ ಎಚ್.ಪಿ ಅವರು ಪರ್ವ ಗ್ರೂಪ್ನ ಸ್ಥಾಪಕರಾಗಿ ವಿಶೇಷ ಸಾಧನೆ ಮಾಡಿದ್ದಾರೆ. ಜಗತ್ತಿನ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದುಬೈನಲ್ಲಿ ಪ್ರವಾಸೋದ್ಯಮ ಮತ್ತು ರಿಯಾಲ್ಟಿ ಕ್ಷೇತ್ರ ಅಭೂತಪೂರ್ವವಾಗಿ ಬೆಳೆಯುತ್ತಿದೆ. ಅಲ್ಲಿ ನೀಲೇಶ್ ಅವರು ಸ್ಥಾಪಿಸಿರುವ ಪರ್ವ ಗ್ರೂಪ್ ಜನಪ್ರಿಯವಾಗಿದೆ. ಕೃಷಿಕ ಕುಟುಂಬದಲ್ಲಿ ಜನಿಸಿದ ನೀಲೇಶ್ ಎಚ್.ಪಿ ಕಾಲೇಜು ಶಿಕ್ಷಣದ ಬಳಿಕ ಬೆಂಗಳೂರಿನಲ್ಲಿ ಕೆಲವು ವರ್ಷ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿದ್ದರು. ಬಳಿಕ ದುಬೈನಲ್ಲಿ ಪರ್ವ ಸಮೂಹವನ್ನು ಸ್ಥಾಪಿಸಿ, ರಿಯಾಲ್ಟಿ ಸೇರಿದಂತೆ ಹಲವು ಉದ್ದಿಮೆಗಳನ್ನು ಆರಂಭಿಸಿದರು. ದುಬೈನಲ್ಲಿ ರೂಪುಗೊಂಡಿರುವ ಪರ್ವ ಗ್ರೂಪ್ ಸಮೂಹ ಸಂಸ್ಥೆಯು ಜನರಿಗೆ ರಿಯಲ್ ಎಸ್ಟೇಟ್, ಆನ್ಲೈನ್ ಫಾರೆಕ್ಸ್, ಕಮಾಡಿಟಿ ಮಾರ್ಕೆಟಿಂಗ್, ಇವೆಂಟ್ ಮ್ಯಾನೇಜ್ಮೆಂಟ್, ಸೆಕ್ಯೂರಿಟಿ ಸೇವೆ ಮತ್ತು ಫಿಲ್ಮ್ ಆರ್ಟ್ ಮತ್ತು ತಂತ್ರಜ್ಞಾನ ತರಬೇತಿಯನ್ನು ನೀಡುತ್ತದೆ.