ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಲಯಾಳಂ ಭಾಷೆ ಮಸೂದೆ; ರಾಷ್ಟ್ರಪತಿ ಭೇಟಿಗೆ ಕಾಸರಗೋಡು ಕನ್ನಡಿಗರ ನಿಯೋಗ ಕೊಂಡೊಯ್ಯಲು ಸಿಎಂಗೆ ಮನವಿ

Malayalam Language Bill: ಕೇರಳದ ಮಲಯಾಳಂ ಭಾಷೆ ಮಸೂದೆಯಿಂದ ಕಾಸರಗೋಡನ್ನು ಹೊರಗಿಡುವಂತೆ ಆ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಒತ್ತಾಯಿಸಬೇಕು ಹಾಗೂ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ಕಾಸರಗೋಡಿನ ನಿಯೋಗ ಕೊಂಡೊಯ್ಯುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.

ಸಿಎಂ ಸಿದ್ದರಾಮಯ್ಯಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮನವಿ ಸಲ್ಲಿಸಿದರು.

ಬೆಂಗಳೂರು: ಕೇರಳದ ಮಲಯಾಳಂ ಭಾಷೆ ಮಸೂದೆಯಿಂದ (Malayalam Language Bill) ಕಾಸರಗೋಡನ್ನು ಹೊರಗಿಡುವಂತೆ ಆ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದರ ಜತೆಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿಯೋಗ ಕೊಂಡೊಯ್ಯುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ಕಾಸರಗೋಡು ಕನ್ನಡಿಗರು ಮನವಿ ಸಲ್ಲಿಸಿದರು. ಈ ವೇಳೆ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಸದಸ್ಯ ಸುಬ್ಬಯ್ಯ ಕಟ್ಟೆ ಹಾಜರಿದ್ದರು.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಶನಿವಾರ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ ಮಾಡಲು ಮುಂದಾಗಿರುವ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮಲಯಾಳಂನ್ನು ಮೊದಲ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇರಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಹೋರಾಟವನ್ನೇ ಮಾಡುತ್ತೇವೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪದಾಧಿಕಾರಿಗಳು ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಕೇರಳ ಸಿಎಂ ಸ್ಪಷ್ಟನೆ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು, ಮಲಯಾಳಂ ಭಾಷೆ ಮಸೂದೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದ್ದಾರೆ.

ʼʼಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಒತ್ತು ನೀಡಲಾಗಿದೆ. ಕನ್ನಡ, ತಮಿಳು ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗಾಗಿ ಈ ಮಸೂದೆಯನ್ನು ತರಲಾಗಿದೆ. ಹಕ್ಕು ರಕ್ಷಣೆಗೆ ಮಸೂದೆಯ ಸೆಕ್ಷನ್ 7ರಲ್ಲಿ ರಕ್ಷಣಾತ್ಮಕ ನಿಯಮ ಅಳವಡಿಸಲಾಗಿದೆ. ಸಚಿವಾಲಯ, ಇಲಾಖೆ ಮುಖ್ಯಸ್ಥರ ಜತೆ ಪತ್ರ ವ್ಯವಹಾರವನ್ನು ಕೂಡ ತಮ್ಮ ಭಾಷೆಯಲ್ಲೇ ನಡೆಸಬಹುದುʼʼ ಎಂದು ತಿಳಿಸಿದ್ದಾರೆ.

ಮಲಯಾಳಂ ಭಾಷಾ ಮಸೂದೆ; ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ಪತ್ರ

ʼʼಮಸೂದೆಯ 7ನೇ ಸೆಕ್ಷನ್‌ ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕಾಸರಗೋಡಿನಲ್ಲಿರುವ ಕನ್ನಡ ಮಾತನಾಡುವವರ ಮತ್ತು ಇಡುಕ್ಕಿಯಲ್ಲಿರುವ ತಮಿಳು ಮಾತನಾಡುವ ಸಮುದಾಯದ ಹಕ್ಕುಗಳನ್ನು ನಿರ್ದಿಷ್ಟವಾಗಿ ರಕ್ಷಿಸುತ್ತದೆʼʼ ಎಂದು ವಿವರಿಸಿದ್ದಾರೆ. ʼʼಮಲಯಾಳಂ ಹೊರತುಪಡಿಸಿ ಬೇರೆ ಮಾತೃ ಭಾಷೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮಲಯಾಳಂ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಒತ್ತಡ ಹೇರುವುದಿಲ್ಲ. ಅವರು ತಮ್ಮಚ್ಛೆಯ ಭಾಷೆಗಳನ್ನು ಆಯ್ಕೆ ಮಾಡಬಹುದುʼʼ ಎಂದು ವಿಜಯನ್ ಹೇಳಿದ್ದಾರೆ.