ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sapna Book House: ಬೆಂಗಳೂರಿನ ನಾಗರಭಾವಿಯಲ್ಲಿ ಸಪ್ನ ಬುಕ್ ಹೌಸ್ 27ನೇ ಶಾಖೆ ಪ್ರಾರಂಭ

ಬೆಂಗಳೂರಿನ ನಾಗರಭಾವಿಯಲ್ಲಿ ಸಪ್ನ ಬುಕ್ ಹೌಸ್ 27ನೇ ಶಾಖೆ ಉದ್ಘಾಟನೆಯಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಪ್ರೊ. ಹಂಪ ನಾಗರಾಜಯ್ಯ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಸಪ್ತಮಿಗೌಡ, ಕಣ್ವ ಡಯಾಗ್ನೋಸ್ಟಿಕ್ಸ್ ಸಂಸ್ಥಾಪಕ ಡಾ.ಎಚ್.ಎಂ.ವೆಂಕಟಪ್ಪ, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕೆಪಿಟಿಸಿಲ್ ಮಾಜಿ ನಿರ್ದೇಶಕ ಎಸ್. ಶಿವಮಲ್ಲು, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಶಾ ಮತ್ತು ನಿಜೇಶ್ ಎನ್. ಶಾ, ಪ್ರಧಾನ ವ್ಯವಸ್ಥಾಪಕ ಆರ್.ದೊಡ್ಡೇಗೌಡರು ಉಪಸ್ಥಿತರಿದ್ದರು.

ಬೆಂಗಳೂರು: ನಗರದ ನಾಗರಭಾವಿಯಲ್ಲಿ ಭಾರತದ ಅತಿದೊಡ್ಡ ಪುಸ್ತಕ ಬಂಡಾರದ ಸಪ್ನ ಬುಕ್ ಹೌಸ್ (Sapna Book House) 27ನೇ ಶಾಖೆ ಆರಂಭವಾಗಿದೆ. ನೂತನ ಶಾಖೆಯನ್ನು ಹಿರಿಯ ಸಾಹಿತಿ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರು ಶನಿವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಹಂಪನಾಗರಾಜಯ್ಯ ಅವರು ಮಾತನಾಡಿ, 1967ರಲ್ಲಿ ಗಾಂಧಿನಾಡಿನಿಂದ ಗಾಂಧಿನಗರಕ್ಕೆ ಸುರೇಶ್ ಸಿ. ಶಾ ರವರು ಬಂದಿದ್ದರು. ಸಪ್ನ ಬುಕ್‌ ಹೌಸ್‌ ಚಿಕ್ಕ ಮಳಿಗೆಯಿಂದ ಆರಂಭವಾಗಿ ಇಂದು 27ನೇ ಮಳಿಗೆ ಲೋಕಾರ್ಪಣೆಯಾಗಿದೆ. ರಾಜರುಗಳು ಸಾಮ್ರಾಜ್ಯ ವಿಸ್ತರಿಸಿದಂತೆ ಇವರು ಶಾಖೆ ವಿಸ್ತರಿಸಿ ಕನ್ನಡದ ಕೀರ್ತಿ ಹರಡುತ್ತಿದ್ದಾರೆ ಎಂದರು.

ಸಪ್ನ ಬುಕ್ ಹೌಸ್ ಓದುಗರ ದೇವಾಲಯವಾಗಿದೆ. ಇವರು ಲೇಖಕರು, ಪ್ರಕಾಶಕರಿಗೆ ಪ್ರೋತ್ಸಾಹ ನೀಡುತ್ತಿದ್ದು, ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

_Sapna Book House Nagarbhavi

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ, ರಾಜ್ಯ, ಹೊರ ರಾಷ್ಟ್ರಗಳಲ್ಲಿ ಗ್ರಂಥಾಲಯಗಳು ಮತ್ತು ಪುಸ್ತಕ ಮಳಿಗೆಗಳು ಎಷ್ಟು ಇದೆ ಎಂಬುದು ನೋಡಿದಾಗ ಅವುಗಳ ಸಂಖ್ಯೆ ಕಡಿಮೆ ಇದೆ. ಬ್ರಿಸ್ಬೇನ್‌ಗೆ ಹೋದಾಗ ಪುಸ್ತಕ ಮಳಿಗೆ ನೋಡಲು ಟಿಕೇಟ್‌ ತೆಗೆದುಕೊಂಡು ಹೋಗವುದನ್ನು ನಾನು ನೋಡಿದೆ. ಪುಸ್ತಕ ಲೋಕ ಅಪೂರ್ವವಾದುದು ಎಂದರು.

ಸಪ್ನ ಬುಕ್ ಹೌಸ್ ಲೇಖಕರಿಗೆ ಉತ್ತಮ ವೇದಿಕೆಯಾಗಿದೆ. ಪುಸ್ತಕಗಳನ್ನು ಓದಿದ ಹಳ್ಳಿಯ ಜನರು ಕವಿಗಳಾಗಿದ್ದಾರೆ, ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಪುಸ್ತಕದಲ್ಲಿ ಅಂತಹ ಶಕ್ತಿ ಇದೆ. ಕುವೆಂಪು ಪುಸ್ತಕ ಓದಿದರೆ ಮಲೆನಾಡಿನ ಜೀವನಶೈಲಿ ಏನು ಎಂಬುದು ಅರಿವು ಮೂಡುತ್ತದೆ. ಪುಸ್ತಕಗಳು ತಾಳ್ಮೆ ಬೋಧಿಸುವ ಹಾಗೂ ವಿಷಯ ವಿವರಿಸಲು ಎರಡು ಸಾಲುಗಳು ಸಹ ತಿಳಿಯತ್ತದೆ. ಸಾಹಿತ್ಯ ಮತ್ತು ಚಲನಚಿತ್ರಕ್ಕೆ ಬಹಳ ದೊಡ್ಡ ಕಂದಕವಿದೆ. ಅದು ಹತ್ತಿರವಾಗಬೇಕು ಎಂದರು.

ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಮಾತನಾಡಿ, ಸಪ್ನ ಬುಕ್ ಹೌಸ್ ನನ್ನ ಪಾಲಿಗೆ ಪುಸ್ತಕ ಮಳಿಗೆ ಅಲ್ಲ, ನನ್ನನ್ನು ಲೇಖಕ ಮಾಡಿದ, ನನಗೆ ಉಪಕಾರ ಮಾಡಿದ ಸಂಸ್ಥೆ. ಕನ್ನಡ ಸಾಹಿತ್ಯ, ಕನ್ನಡಕ್ಕೆ ಸಹಕಾರ ನೀಡಿದ ಸಂಸ್ಥೆ ಎಂದರು.

ಪತ್ರಕರ್ತರು ಸುದ್ದಿಗಳಿಗೆ ಹೆಡ್ ಲೈನ್ ಹಾಕುತ್ತೇವೆ, ಅದರ ಹಿಂದೆ ದೊಡ್ಡ ಸಾಮಾಜಿಕ ಸಂದೇಶವಿರುತ್ತದೆ. ಪೊಲೀಸ್ ಠಾಣೆ ಉದ್ಘಾಟನೆ ಎಂದರೆ ಅಪರಾಧ ಚಟುವಟಿಕೆ ಹೆಚ್ಚಾಗಿದೆ ಎಂಬ ಅರ್ಥ ಬರುತ್ತದೆ. ಪಬ್, ಬಾರ್ ಹೆಚ್ಚಾಗಿದೆ ಎಂದರೆ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರ್ಥ. ಆದರೆ ಪುಸ್ತಕ ಮಳಿಗೆ ಉದ್ಘಾಟನೆಯಾಗುತ್ತಿದೆ ಎಂದರೆ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ ಎಂಬುದು ಅರ್ಥ ಮಾಡಿಕೊಳ್ಳಬಹುದು.

ನಗರದಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪನೆ ಮಾಡಲು ಆಗಿಲ್ಲ, ಆದರೆ 47 ಮಾಲ್‌ಗಳು ಬಂದಿವೆ, ಗ್ರಂಥಾಲಯ ಬೇಕು ಎಂದು ಜನರು ಅಗ್ರಹ ಮಾಡದಿರುವುದು ಶೋಚನೀಯ ಎಂದರು.

_Sapna Book House Nagarbhavi (2)

ನಟಿ ಸಪ್ತಮಿಗೌಡ ಅವರು ಮಾತನಾಡಿ, ಓದುವುದು, ಬರವಣಿಗೆ ಇಲ್ಲದೇ ಹೋದರೆ ಸಮಾಜದ ಬೆಳವಣಿಗೆ ಅಸಾಧ್ಯ. ಪುಸ್ತಕ ಓದಿದಾಗ ಹೊಸ ಜಗತ್ತು ಕಟ್ಟುತ್ತದೆ. ತಾಳ್ಮೆ ಬೇಕು ಎಂದರೆ ಪುಸ್ತಕ ಓದಬೇಕು. ಗ್ರಂಥಾಲಯಕ್ಕೆ ಹೋದಾಗ ಉತ್ತಮ ಸ್ನೇಹ ಬೆಳವಣಿಗೆಯಾಗುತ್ತದೆ. ನಾನು ಸಹ ಪುಸ್ತಕ ಪ್ರೇಮಿಯಾಗಿದ್ದು, ಪುಸ್ತಕದಿಂದ ಉತ್ತಮ ಜ್ಞಾನ ಬೆಳೆಯತ್ತದೆ. ಪ್ರಸ್ತುತ ಮಕ್ಕಳಲ್ಲಿ ಲ್ಯಾಪ್ ಟಾಪ್, ಮೊಬೈಲ್ ಅಭ್ಯಾಸ ಹೆಚ್ಚಾಗಿದೆ, ಕೈಯಲ್ಲಿ ಬರೆಯುವ, ಪುಸ್ತಕ ಓದುವ ಅಭ್ಯಾಸ ಮರೆಯು ಹೋಗಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ ಅವರು ಮಾತನಾಡಿ, ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂಬ ಕೀರ್ತಿ ಸಪ್ನ ಬುಕ್ ಹೌಸ್‌ಗಿದ್ದು, ರಾಜ್ಯ, ಹೊರರಾಜ್ಯ ಸೇರಿ 27 ಶಾಖೆಗಳು ಇವೆ. ನಗರದಲ್ಲಿ 12 ಶಾಖೆ ಇದ್ದು, ಶಿಕ್ಷಣಕ್ಕೆ ಉತ್ತೇಜನ ನೀಡುವಲ್ಲಿ ಸಪ್ನ ಬುಕ್ ಸಹಕಾರಿಯಾಗಿದೆ ಎಂದರು.

ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿಜೇಶ್ ಎನ್.ಶಾ ಅವರು ಮಾತನಾಡಿ 1967ರಲ್ಲಿ ನಮ್ಮ ತಾತನವರಾದ ಸುರೇಶ್ ಸಿ.ಶಾ ಅವರು ಸಪ್ಮ ಬುಕ್‌ ಹೌಸ್ ಸ್ಥಾಪನೆ ಮಾಡಿದರು. ಇಂದು ಸಂಸ್ಥೆಯ 27ನೇ ಶಾಖೆ ಪ್ರಾರಂಭವಾಗಿದೆ. ನಾಗರಭಾವಿಯು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಓದುಗರು ಹೆಚ್ಚಿರುವ ಪ್ರದೇಶವಾಗಿದೆ. ಆದ್ದರಿಂದ ಇಲ್ಲಿ ಮಳಿಗೆ ಆರಂಭಿಸಲಾಗಿದೆ. ಪುಸ್ತಕದಲ್ಲಿ ಅದ್ಭುತ ಶಕ್ತಿ ಇದೆ ಎಂದು ಹೇಳಿದರು.

Roopa Gururaj Column: ವರುಣದೇವನ ಅಹಂಕಾರ ಮುರಿದ ಉತಥ್ಯ ಮಹರ್ಷಿಗಳ ತಪಶ್ಯಕ್ತಿ

ಉದ್ಘಾಟನಾ ಕಾರ್ಯಕ್ರಮದಲ್ಲಿ ಕಣ್ವ ಡಯಾಗ್ನೋಸ್ಟಿಕ್ಸ್ ಸಂಸ್ಥಾಪಕ ಡಾ.ಎಚ್.ಎಂ.ವೆಂಕಟಪ್ಪ, ಕೆಪಿಟಿಸಿಲ್ ಮಾಜಿ ನಿರ್ದೇಶಕ ಎಸ್. ಶಿವಮಲ್ಲು, ಸಪ್ನ ಬುಕ್ ಹೌಸ್ ಪ್ರಧಾನ ವ್ಯವಸ್ಥಾಪಕರಾದ ಆರ್.ದೊಡ್ಡೇಗೌಡರು ಉಪಸ್ಥಿತರಿದ್ದರು.