ಬೆಂಗಳೂರು: ರಾಜಧಾನಿಯಲ್ಲಿ ಮೆಟ್ರೋ ಹಳಿಗೆ ಬಿದ್ದು ಹಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ. ಇದೀಗ ಮೆಟ್ರೋ ನಿಲ್ದಾಣದಲ್ಲಿ (Namma Metro) ಭದ್ರತಾ ಸಿಬ್ಬಂದಿಯೊಬ್ಬರು ಆಯತಪ್ಪಿ ಹಳಿಗೆ ಬಿದ್ದಿರುವ ಘಟನೆ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮೆಟ್ರೋ ಸ್ಟೇಷನ್‌ನ ಪ್ಲಾಟ್‌ಫಾರ್ಮ್ ಮೇಲೆ ಇದ್ದ ಮೆಟ್ರೋ ಸಿಬ್ಬಂದಿ ಹಳಿಯ ಸಮೀಪ ಹೋದಾಗ ಆಯತಪ್ಪಿ ಬಿದ್ದಿದ್ದಾರೆ. ಇದನ್ನು ನೋಡಿ ಅಲ್ಲಿಯೇ ಇದ್ದ ಪ್ರಯಾಣಿಕನೊಬ್ಬ ಸಿಬ್ಬಂದಿಯನ್ನು ಕೈಹಿಡಿದು ಮೇಲಕ್ಕೆ ಎತ್ತಿದ್ದಾನೆ. ಅದೃಷ್ಟಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, 'ಗಾರ್ಡ್ ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕರ್ತವ್ಯದಲ್ಲಿದ್ದಾಗ ಜಾರಿಬಿದ್ದಿದ್ದು, ಕೂಡಲೇ ಎಚ್ಚೆತ್ತ ಸಹ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಕರ್ತವ್ಯದಲ್ಲಿದ್ದ ಮತ್ತೊಬ್ಬ ಭದ್ರತಾ ಸಿಬ್ಬಂದಿ ತಕ್ಷಣ ಹಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಗಾರ್ಡ್ ಅನ್ನು ಮತ್ತೆ ಪ್ಲಾಟ್‌ಫಾರ್ಮ್‌ಗೆ ಎಳೆಯಲು ಸಹಾಯ ಮಾಡಲು ಒಬ್ಬ ಪ್ರಯಾಣಿಕ ಕೂಡ ಮುಂದೆ ಧಾವಿಸಿದರು. 52 ವರ್ಷದ ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಅಂತೆಯೇ ಈ ಮಾರ್ಗದ ಹಳಿಯಲ್ಲಿ ಬರುತ್ತಿದ್ದ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸುರಕ್ಷತಾ ಕ್ರಮವಾಗಿ ಸುಮಾರು ಆರು ನಿಮಿಷಗಳ ಕಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಹೇಳಿದೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆಯ ಪ್ರಮುಖ ಆರೋಪಿ ಜಗದೀಶ್ ಬಂಧನ

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಹತ್ಯೆ (Rowdy Sheeter Biklu Shiva Murder case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಆಗಿರುವ ಜಗದೀಶ್ (Jagadish) ಅಲಿಯಾಸ್ ಜಗ್ಗನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಮುಖ ಆರೋಪಿ ಆಗಿರುವ ಜಗ್ಗ ಕೊಲೆಯಾದ ದಿನವೇ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ. ಇದೀಗ ಸಿಐಡಿ ಅಧಿಕಾರಿಗಳು ಆರೋಪಿ ಜಗ್ಗನನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗದೀಶ್ ಅಲಿಯಾಸ್ ಜಗ್ಗನಿಗೆ ಸಿಐಡಿ ಪೋಲೀಸರು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ಕೆಲ ದಿನಗಳಿಂದ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಇಂದು ಆರೋಪಿ ಜಗ್ಗನನ್ನು ಬಂಧಿಸಲಾಗಿದೆ. ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ (Byrathi Basavaraj) ಹೆಸರು ತಳುಕು ಹಾಕಿಕೊಂಡಿದ್ದು, ಬೈರತಿ ಬಸವರಾಜ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಭಾರತಿನಗರ ಠಾಣೆಯಲ್ಲಿ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾಜಿ ಸಚಿವ ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಜಗದೀಶ್ ಎ1, ಕಿರಣ್ ಎ2, ವಿಮಲ್ ಎ 3, ಅನಿಲ್ ಎ4 ಆರೋಪಿಗಳಾಗಿದ್ದಾರೆ.
ಎ1 ಆರೋಪಿಯಾಗಿದ್ದ ಜಗ್ಗನಿಗಾಗಿ ಶೋಧಕಾರ್ಯ ನಡೆಯುತ್ತಿತ್ತು. ಕೊನೆಗೂ ಆತ ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದು ಗೊತ್ತಾಗಿದ್ದು, ಪೊಲೀಸರು ದೆಹಲಿಯಲ್ಲಿ ಜಗ್ಗನನ್ನು ಬಂಧಿಸಿದ್ದಾರೆ. ಈಗ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಸಿಐಡಿಯ ತನಿಖಾಧಿಕಾರಿಗಳು ಜಗ್ಗನ ಸ್ಥಳವನ್ನು ಪತ್ತೆಹಚ್ಚಲು ತಿಂಗಳುಗಟ್ಟಲೆ ಕಾರ್ಯಾಚರಣೆ ನಡೆಸಿದ್ದರು. ಆತನ ಫೋನ್ ಕಾಲ್ ರೆಕಾರ್ಡ್‌ಗಳು, ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಮತ್ತು ಗುಪ್ತಚರ ಮಾಹಿತಿಯ ಆಧಾರದ ಮೇಲೆ ದೆಹಲಿಯಲ್ಲಿ ಆತನನ್ನು ಗುರುತಿಸಲಾಯಿತು.
ಇದನ್ನೂ ಓದಿ: Biklu Shiva murder case: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ಗೆ ಕೊಂಚ ರಿಲೀಫ್
ಈ ಪ್ರಕರಣದಲ್ಲಿ ಬೈರತಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಇದರಿಂದ ಶಾಸಕ ಬೈರತಿ ಬಸವರಾಜ್‌ಗೆ ಕೊಂಚ ರಿಲೀಫ್ ಸಿಕ್ಕಿತ್ತು. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಬೆಂಗಳೂರಿನ ಹಲಸೂರು ಕೆರೆ ಬಳಿ ಜುಲೈ 15ರ ರಾತ್ರಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದರು.