ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SK Shyamsundar: ಹಿರಿಯ ಪತ್ರಕರ್ತ ಶ್ಯಾಮ್‌ಸುಂದರ್‌ ಇನ್ನಿಲ್ಲ

ಹಿರಿಯ ಪತ್ರಕರ್ತ ಎಸ್‌.ಕೆ. ಶ್ಯಾಮ್‌ಸುಂದರ್‌ (72) ಅವರು ಅನಾರೋಗ್ಯದಿಂದಾಗಿ ಸೋಮವಾರ (ಏ. 14) ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ಯಾಮ್‌ಸುಂದರ್‌ ಅವರನ್ನು ಬೆಂಗಳೂರಿನ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.

ಹಿರಿಯ ಪತ್ರಕರ್ತ ಶ್ಯಾಮ್‌ಸುಂದರ್‌ ಇನ್ನಿಲ್ಲ

ಎಸ್‌.ಕೆ. ಶ್ಯಾಮ್‌ಸುಂದರ್‌.

Profile Ramesh B Apr 14, 2025 11:55 PM

ಬೆಂಗಳೂರು: ಹಿರಿಯ ಪತ್ರಕರ್ತ ಎಸ್‌.ಕೆ. ಶ್ಯಾಮ್‌ಸುಂದರ್‌ (SK Shyamsundar) ಅವರು ಅನಾರೋಗ್ಯದಿಂದಾಗಿ ಸೋಮವಾರ (ಏ. 14) ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ಯಾಮ್‌ಸುಂದರ್‌ ಅವರನ್ನು ಬೆಂಗಳೂರಿನ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರು ಶಾಮಿ ಎಂದೇ ಜನಪ್ರಿಯರಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಪತ್ರಿಕೋದ್ಯಮದಲ್ಲಿ ಸರಿಸುಮಾರು 39 ವರ್ಷ ಅನುಭವ ಹೊಂದಿದ್ದ ಶ್ಯಾಮ್‌ಸುಂದರ್‌ ಅವರು ಡಿಜಿಟಲ್ ಮಾಧ್ಯಮ ಜಗತ್ತಿಗೆ ಹಿಸದೊಂದು ದಿಕ್ಕು ತೋರಿಸಿದವರು. 1991ರಿಂದ 2000ರ ವರೆಗೆ ಕನ್ನಡ ಪ್ರಭ ದಿನಪತ್ರಿಕೆಯ ಪುರವಣಿ ಸಂಪಾದಾಕರಾಗಿ ಸೇವೆ ಸಲ್ಲಿಸಿದ್ದರು. ಕಸ್ತೂರಿ ಮಾಸಿಕ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ವಿಭಾಗ, ಒನ್ ಇಂಡಿಯಾ ಕನ್ನಡ ಸುದ್ದಿ ಮಾಧ್ಯಮ, ಪಬ್ಲಿಕ್‌ ಟಿವಿ ಮುಂತಾದ ಸಂಸ್ಥೆಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು. ಏಷ್ಯನ್ ಕಾಲೇಜು ಆಫ್ ಬೆಂಗಳೂರಿನಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು.

ಶ್ಯಾಮ್‌ಸುಂದರ್ ಅವರು 2012-13ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌:



ಗಣ್ಯರ ಸಂತಾಪ

ಎಸ್‌.ಕೆ. ಶ್ಯಾಮ್‌ಸುಂದರ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡ ಪ್ರಭ ಪುರವಣಿ ಸಂಪಾದಕ ಜೋಗಿ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ʼʼಶ್ಯಾಮ್ ಸುಂದರ್‌ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮಸುಂದರ್ ಅವರು ಸುದೀರ್ಘಕಾಲ ಪತ್ರಕರ್ತರಾಗಿ ದುಡಿದವರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆʼʼ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವೇಶ್ವರ್‌ ಭಟ್‌ ಅವರ ಫೇಸ್‌ಬುಕ್‌ ಪೋಸ್ಟ್‌:



ವಿಶ್ವೇಶ್ವರ್‌ ಭಟ್‌ ಅವರು ಫೇಸ್‌ಬುಕ್‌ನಲ್ಲಿ ಶ್ಯಾಮ್‌ಸುಂದರ್‌ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ʼʼನನ್ನ ಬಹುಕಾಲದ ಸ್ನೇಹಿತ, ಸಹೋದ್ಯೋಗಿ, ಒಡನಾಡಿ, ಎಸ್.ಕೆ.ಶಾಮಸುಂದರ ಇಂದು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಾವಿಬ್ಬರೂ ʼಸಂಯುಕ್ತ ಕರ್ನಾಟಕʼ (ಆಗ ಅವರು ಕಸ್ತೂರಿ ಮಾಸಿಕದಲ್ಲಿದ್ದರು), ʼಕನ್ನಡ ಪ್ರಭʼ ಮತ್ತು ʼಏಷ್ಯನ್ ಕಾಲೇಜ್ ಆಫ್ ಜರ್ನಲಿಸಂʼನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ನಮ್ಮೆಲ್ಲರ ಪಾಲಿಗೆ ಶಾಮಿ ಎಂದೇ ಪ್ರೀತಿಪಾತ್ರರಾಗಿದ್ದ ಶಾಮಸುಂದರ, ನಾನು ಕಂಡ ಅಪರೂಪದ ಪತ್ರಕರ್ತರಲ್ಲಿ ಒಬ್ಬರು. ಅವರ ಜತೆ ಇದ್ದಾಗ, ಪತ್ರಿಕೋದ್ಯಮ, ಪತ್ರಕರ್ತರು, ಪತ್ರಿಕೆ ಹೊರತಾಗಿ ಬೇರೆ ವಿಷಯ ಮಾತಾಡಿದ್ದು ಕಮ್ಮಿಯೇ.

ನಾನು ಮತ್ತು ಶ್ಯಾಮ್ ಬೆಂಗಳೂರಿನಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಕ್ಕಿಂತ, ವಿದೇಶಗಳಲ್ಲಿ, ಅದರಲ್ಲೂ ಅಮೆರಿಕದಲ್ಲಿ ಕಳೆದಿದ್ದು ಹೆಚ್ಚು. ನಾನು ಆಗಾಗ ತಮಾಷೆಯಿಂದ, “ಶ್ಯಾಮ್, ಭೇಟಿ ಮಾಡದೇ ಬಹಳ ದಿನ ಆಯ್ತು, ಮಾತಾಡೋದು ಬಹಳ ಇದೆ, ಅಮೆರಿಕಕ್ಕೆ ಹೋಗೋಣವಾ?” ಎಂದು ಕೇಳುತ್ತಿದ್ದೆ.

ಒಮ್ಮೆ ನಾವಿಬ್ಬರೂ ಒಟ್ಟಿಗೆ ಅಮೆರಿಕಕ್ಕೆ ಹೋಗಿದ್ದೆವು. ಸುಮಾರು ಇಪ್ಪತ್ತೆರಡು ದಿನ ಒಟ್ಟಿಗೇ ಇದ್ದೆವು. ನಮ್ಮ ಜತೆಗೆ ಶ್ರೀವತ್ಸ ಜೋಶಿ, ವಲ್ಲೀಶ ಶಾಸ್ತ್ರಿ, ಜನಾರ್ದನ ಸ್ವಾಮಿ ಕೂಡ ಇದ್ದರು. ನಾನು, ಶ್ಯಾಮ್ ಮತ್ತು ಶ್ರೀವತ್ಸ ಜೋಶಿ ಗ್ರೇಟ್ ಕಾಂಬಿನೇಷನ್. ನಾವು ಮೂವರು ಹರಟೆಗೆ ಕುಳಿತರೆ ರಾತ್ರಿ ಹಗಲಾಗಿ ಮಗುಚಿ ಬೀಳುತ್ತಿತ್ತು ಮತ್ತು ಮರುದಿನವೂ ಮುಂದುವರಿಯುತ್ತಿತ್ತು.

ಜೋಶಿ ಬೆಂಗಳೂರಿಗೆ ಬಂದಾಗಲೆಲ್ಲ ನಾವು ಮೂವರು ಭೇಟಿಯಾಗಲೇಬೇಕಿತ್ತು. ನಾನು ಮತ್ತು ಜೋಶಿ, ನಾನು ಮತ್ತು ವಲ್ಲೀಶ ಫೋನಿನಲ್ಲಿ ಮಾತಿಗೆ ಸಿಕ್ಕಾಗ ಶ್ಯಾಮ್ ಪ್ರಸ್ತಾಪವಾಗಲೇಬೇಕಿತ್ತು. ಅಂಥ ಅನ್ಯೋನ್ಯ ಗೆಳೆತನ ನಮ್ಮದು.

ಶ್ಯಾಮ್ ಒಬ್ಬ ಅಪರೂಪದ ಹರಟೆಕೋರ. ನಾವು ತಿಂಗಳುಗಟ್ಟಲೆ ನಿರಂತರ ಹರಟೆ ಹೊಡೆದವರು. ದಿನಗಟ್ಟಲೆ ಹರಟೆ ಹೊಡೆದರೂ, “ಈಗ ತಾನೇ ಮಾತುಕತೆ ಆರಂಭವಾಗಿತ್ತು…ಛೇ... ಹೊರಡಬೇಕಲ್ಲ” ಎಂಬ ವಿಷಾದದೊಂದಿಗೆ ನಿರ್ಗಮಿಸುತ್ತಿದ್ದೆವು.

ಇಂದು ಈಗ ಅದೇ ವಿಷಾದದೊಂದಿಗೆ ಶ್ಯಾಮ್ ಅವರನ್ನು ಬೀಳ್ಕೊಡುತ್ತಿದ್ದೇನೆʼʼ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Bank Janardhan passes away: ಹಿರಿಯ ಹಾಸ್ಯನಟ ಬ್ಯಾಂಕ್‌ ಜನಾರ್ದನ ಇನ್ನಿಲ್ಲ

ಶ್ಯಾಮ್‌ಸುಂದರ್‌ ಅವರು ಚಿತ್ರದಲ್ಲಿಯೂ ನಟಿಸಿದ್ದರು. 2009ರಲ್ಲಿ ತೆರೆಕಂಡ ಜಗ್ಗೇಶ್‌ ಅಭಿನಯದ, ನಿರ್ದೇಶಕ ಗುರುಪ್ರಸಾದ್‌ ಅವರ ʼಎದ್ದೇಳು ಮಂಜುನಾಥʼ ಸಿನಿಮಾದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರ ನಿರ್ವಹಿಸಿದ್ದರು.