ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Siddaramaiah Resigns: ʼʼರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲʼʼ: ಸಿದ್ದರಾಮಯ್ಯ ಸ್ಪಷ್ಟನೆ

Siddaramaiah: ಗುರುವಾರ (ಮೇ 28) ಲೋಕ ಭವನಕ್ಕೆ ತೆರಳಿದ ಸಿದ್ದರಾಮಯ್ಯ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಭಾವುಕರಾಗಿ ವಿದಾಯ ಭಾಷಣ ಮಾಡಿ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈ ವೇಳೆ ರಾಷ್ಟ್ರ ರಾಜಕೀಯಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು, ಮೇ 28: ''ರಾಷ್ಟ್ರ ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ರಾಜ್ಯ ರಾಜಕೀಯವೇ ನನಗೆ ಇಷ್ಟʼʼ-ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಗುರುವಾರ (ಮೇ 28) ಲೋಕ ಭವನಕ್ಕೆ ತೆರಳಿದ ಅವರು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಭಾವುಕರಾಗಿ ವಿದಾಯ ಭಾಷಣ ಮಾಡಿ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಆ ಮೂಲಕ ರಾಜ್ಯದ ಸುದೀರ್ಘ ಸಿಎಂ ಎನ್ನುವ ದಾಖಲೆ ಬರೆದ ಸಿದ್ದರಾಮಯ್ಯ ಅವರ ಯುಗಾಂತ್ಯವಾದಂತಾಗಿದೆ.

ʼʼಲೋಕ ಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಿದ್ದೇನೆ. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ರಾಜ್ಯಪಾಲರು ಬಂದ ಕೂಡಲೇ ರಾಜೀನಾಮೆ ಅಂಗೀಕರಿಸುವ ಭರವಸೆ ಇದೆʼʼ ಎಂದರು.

ಸಿದ್ದರಾಮಯ್ಯ ಹೇಳಿದ್ದೇನು?

ʼʼಕಾಂಗ್ರೆಸ್‌ ಹೈಕಮಾಂಡ್‌ ನನಗೆ ರಾಜ್ಯಸಭೆಯ ಆಫರ್‌ ನೀಡಿತ್ತು. ಆದರೆ ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದಿದ್ದೇನೆ. ನನಗೆ ಜನರ ಸೇವೆ ಮಾಡಲು ಇನ್ನೂ 2 ವರ್ಷಗಳ ಅವಕಾಶ ಇದೆʼʼ ಎನ್ನುವ ಮೂಲಕ ರಾಜ್ಯದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದರು. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ, ʼʼಇದನ್ನು ಹೈಕಮಾಂಡ್‌ ನಿರ್ಧರಿಸುತ್ತದೆʼʼ ಎಂದು ಹೇಳಿದರು. ಜತೆಗೆ ಹೈಕಮಾಂಡ್‌ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾಗಿ ಪುನರುಚ್ಚರಿಸಿದರು.

ಸಿದ್ದರಾಮಯ್ಯ ಸುದ್ದಿಗೋಷ್ಠಿ:



ಸೇವೆಗಾಗಿ ರಾಜಕೀಯ ಪ್ರವೇಶ

ʼʼನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು. ಜಾತಿ,ದುಡ್ಡು ಮತ್ತು ತೋಳ್ಭಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆʼʼ ಎಂದರು.

"ಡಿಕೆ ಶಿವಕುಮಾರ್‌ ಮುಂದಿನ ಸಿಎಂ"; ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಕಣ್ಣೀರು!

ʼʼನನ್ನ ನೋವು, ದುಃಖ-ದುಮ್ಮಾನಗಳನ್ನು ಈ ಸಂದರ್ಭದಲ್ಲಿ ಪಟ್ಟಿಮಾಡಿ ನನ್ನ ಮನಸ್ಸನ್ನು ಕಹಿ ಮಾಡಿಕೊಳ್ಳುವುದಿಲ್ಲ. ಆದರೆ ಈ ಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜತೆ ರಾಜಿ ಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರ ಬಂದಿದ್ದೇನೆ. ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥ ಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆʼʼ ಎಂದು ತಿಳಿಸಿದರು.

ʼʼನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ 17 ಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ. ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ'' ಎಂದು ವಿವರಿಸಿದರು.

Ramesh Ballamoole

View all posts by this author