ನವದೆಹಲಿ: ಈ ಬಾರಿ ವಾಡಿಕೆಗಿಂತ ಮೊದಲೇ ನೈಋತ್ಯ ಮಾನ್ಸೂನ್ ಮಾರುತಗಳು (Monsoon Rain Update) ಕೇರಳ ಪ್ರವೇಶಿಸುವ ಮುನ್ಸೂಚನೆ ಸಿಕ್ಕಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD Weather Forecast) ಶುಕ್ರವಾರ ಮಾಹಿತಿ ನೀಡಿದ್ದು, ಮೇ 26ಕ್ಕೆ ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕೇರಳದಲ್ಲಿ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಮುಂಗಾರು ಆರಂಭವಾಗುತ್ತದೆ. ಆದರೆ, ಈ ಬಾರಿ 6 ದಿನ ಮೊದಲೇ ಆಗಮಿಸುವ ನಿರೀಕ್ಷೆ ಇದೆ. ನೈಋತ್ಯ ಮಾನ್ಸೂನ್ ಮಾರುತಗಳು ದೇಶದಲ್ಲಿ ಮುಂಗಾರು ಋತುವಿನ (ಜೂನ್‌ನಿಂದ ಸೆಪ್ಟೆಂಬರ್) ಆರಂಭವನ್ನು ಸೂಚಿಸುತ್ತದೆ. ಕಳೆದ ವರ್ಷ ಮಾನ್ಸೂನ್ ಮೇ 24ರಂದು ಪ್ರಾರಂಭವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವರ್ಷ ಮಾನ್ಸೂನ್ ಋತುವಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು. ಮಾನ್ಸೂನ್ ತಿಂಗಳುಗಳಲ್ಲಿ ದೇಶ 80 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ. ದೀರ್ಘಾವಧಿಯ ಸರಾಸರಿ (1971-2020) ಮಳೆ 87 ಸೆಂ.ಮೀ ಆಗಿದೆ. ಎಲ್ ನಿನೋ ಪರಿಸ್ಥಿತಿಗಳು ದೇಶದಲ್ಲಿ ಕಡಿಮೆ ಮಳೆಗೆ ಕಾರಣವಾಗುತ್ತದೆ. ಮೇ 1ರಂದು ತನ್ನ ಮಾಸಿಕ ಮುನ್ಸೂಚನೆಯಲ್ಲಿ, ಸಮಭಾಜಕ ಪೆಸಿಫಿಕ್ ಮೇಲೆ ಎಲ್ ನಿನೋ-ದಕ್ಷಿಣ ಆಂದೋಲನ (ENSO)-ತಟಸ್ಥ ಪರಿಸ್ಥಿತಿಗಳು ಎಲ್ ನಿನೋ ಪರಿಸ್ಥಿತಿಗಳ ಕಡೆಗೆ ವಿಕಸನಗೊಳ್ಳುತ್ತಿವೆ ಎಂದು ಐಎಂಡಿ ಹೇಳಿತ್ತು.
ಮುಂಗಾರು ಆಗಮನದೊಂದಿಗೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ತಾಪಮಾನ ಕಡಿಮೆಯಾಗಲಿದ್ದು, ಜನರಿಗೆ ಬಿಸಿಲಿನಿಂದ ಗಮನಾರ್ಹ ಪರಿಹಾರ ದೊರೆಯಲಿದೆ. ಇದು ಖಾರಿಫ್ ಬೆಳೆಗಳನ್ನು ಬಿತ್ತಲು ರೈತರಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ.
ಕೇರಳದಲ್ಲಿ ನೈಋತ್ಯ ಮಾನ್ಸೂನ್ ಆರಂಭವನ್ನು ಭಾರತೀಯ ಮುಖ್ಯ ಭೂಭಾಗದಲ್ಲಿ ಮಾನ್ಸೂನ್ ಹರಡುವಿಕೆಯನ್ನು ಊಹಿಸಲು ಪ್ರಮುಖ ಸೂಚಕವೆಂದು ಹವಾಮಾನ ಇಲಾಖೆ ಪರಿಗಣಿಸುತ್ತದೆ. ಮಾನ್ಸೂನ್ ಕ್ರಮೇಣ ಉತ್ತರದ ಕಡೆಗೆ ಚಲಿಸುತ್ತಿದ್ದಂತೆ, ದೇಶದ ವಿವಿಧ ಭಾಗಗಳಲ್ಲಿ ತಾಪಮಾನವು ಗಮನಾರ್ಹವಾಗಿ ಇಳಿಯುತ್ತದೆ.
ಮಾನ್ಸೂನ್ ಆಗಮನದ ಬಗ್ಗೆ ಭಾರತ ಹವಾಮಾನ ಇಲಾಖೆಯ (ಐಎಂಡಿ) ಮುನ್ಸೂಚನೆಗಳು ನಿಖರವಾಗಿವೆ ಎಂದು ಈಗಾಗಲೇ ಸಾಬೀತಾಗಿದೆ. ಕಳೆದ ಆರು ವರ್ಷಗಳ ದತ್ತಾಂಶವನ್ನು ಪರಿಶೀಲಿಸಿದಾಗ ಹವಾಮಾನ ಇಲಾಖೆಯ ವಿಶ್ವಾಸಾರ್ಹತೆ ಸ್ಪಷ್ಟವಾಗಿ ಕಂಡುಬರುತ್ತದೆ. ಐಎಂಡಿ ಮುನ್ಸೂಚನೆಯು 2015ರಲ್ಲಿ ಮಾತ್ರ ತಪ್ಪಾಗಿತ್ತು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಹಣ್ಣು-ತರಕಾರಿ, ಖಾದ್ಯ ಎಣ್ಣೆ ದುಬಾರಿ ಸಾಧ್ಯತೆ
ಕರ್ನಾಟಕದಲ್ಲಿ ಮುಂಗಾರು ಮಳೆ ಯಾವಾಗ?:
ಕೇರಳಕ್ಕೆ ಪ್ರವೇಶಿಸಿದ ಸುಮಾರು ಒಂದು ವಾರದ ನಂತರ ಮುಂಗಾರು ಮಳೆಯು ಕರ್ನಾಟಕವನ್ನು ಪ್ರವೇಶಿಸುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಜೂನ್ ಮೊದಲ ವಾರದಲ್ಲೇ ರಾಜ್ಯಕ್ಕೆ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ.