ಬೆಂಗಳೂರು: ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಜಯನಗರದ ರಾಜಬೀದಿಯಲ್ಲಿ ಮಹಾರಥೋತ್ಸವವೂ (Raghavendra Swamy's Maharathotsava) ಅತ್ಯಂತ ವೈಭವ ಸಡಗರ ಸಂಭ್ರಮದಿಂದ ನೆರವೇರಿತು.

ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ನಡೆಯಿತು.

ಈ ಮಹಾರಥೋತ್ಸವಕ್ಕೆ ಸುಧಾ ನಾರಾಯಣಮೂರ್ತಿ ಹಾಗೂ ಸಿ.ಕೆ. ರಾಮಮೂರ್ತಿ ಅವರು ಪೂಜೆ ನೆರವೇರಿಸಿ ಚಾಲನೆ ನೀಡುವ ಮೂಲಕ ರಾಯರ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀ ನಂದಕಿಶೋಚಾರ್ಯರು ತಿಳಿಸಿದರು.

ಈ ಮಹಾರಥೋತ್ಸವವು ಜಯನಗರದ ರಾಯರ ಮಠದಿಂದ ಐದನೇ ಬಡಾವಣೆಯ ರಾಜಭೀದಿಯಲ್ಲಿ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಯಿತು. ಈ ಉತ್ಸವದಲ್ಲಿ ವಿಶೇಷವಾಗಿ ಕೇರಳದ ಚಂಡೆ ವಾದನ, ಉಡುಪಿಯ ಗೊಂಬೆಗಳ ಕುಣಿತ, ನಾಸಿಕ್ ಪಾಂಡ್ಯ, ಕಬ್ಬಾಲ್ಲಮ್ಮ್ ರಾಮನಗರ್ ಡೊಳ್ಳು ಕುಣಿತದೊಂದಿಗೆ ಪಟಾಕಿಗಳನ್ನು ಸಿಡಿಸುವ ಮೂಲಕ ಅತ್ಯಂತ ವೈಭವದಿಂದ ನೆರವೇರಿತು. ಉತ್ಸವದಲ್ಲಿ ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೆ ನೂರಾರು ಭಕ್ತರು ಭಾಗಿಯಾಗಿದ್ದರು.
