Sri Rama Navami: ಇಂದಿನಿಂದ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಮನವಮಿ ಸಂಗೀತೋತ್ಸವ-2025
Sri Rama Navami: ರಾಜರಾಜೇಶ್ವರಿ ನಗರದ ಬೆಮೆಲ್ 3ನೇ ಹಂತದ ಟಿ.ಎನ್. ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ 24ನೇ ಶ್ರೀ ರಾಮನವಮಿ ಸಂಗೀತೋತ್ಸವ ಆಯೋಜಿಸಲಾಗಿದೆ. 9 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9.30 ಕ್ಕೆ ಶ್ರೀ ರಾಮ ಪೂಜೆ, 10.30ರಿಂದ ಭಜನಾ ತಂಡದಿಂದ ಭಜನೆ, ಸಂಜೆ 5 ಗಂಟೆ ನಂತರ ಆರಂಭಗೊಂಡು ರಾತ್ರಿ 9.30 ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿವೆ.


ಬೆಂಗಳೂರು: ರಾಜರಾಜೇಶ್ವರಿ ನಗರ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಏಪ್ರಿಲ್ 5ರಿಂದ 13ರವರೆಗೆ ಅದ್ಧೂರಿಯಾಗಿ ʼ24ನೇ ಶ್ರೀ ರಾಮನವಮಿ ಸಂಗೀತೋತ್ಸವʼವನ್ನು (Sri Rama Navami Sangeethotsava) ರಾಜರಾಜೇಶ್ವರಿ ನಗರದ ಬೆಮೆಲ್ 3ನೇ ಹಂತದ ಟಿ.ಎನ್. ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. 9 ದಿನಗಳ ಈ ವೈಭವಪೂರ್ಣ ಸಂಗೀತೋತ್ಸವದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರು ಮತ್ತು ನೃತ್ಯಪಟುಗಳು ಸಂಗೀತ ಸುಧೆಯನ್ನು ಸಂಗೀತ ಪ್ರೇಮಿಗಳಿಗೆ ಉಣ ಬಡಿಸಲಿದ್ದಾರೆ.
9 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9.30 ಕ್ಕೆ ಶ್ರೀ ರಾಮ ಪೂಜೆ, 10.30ರಿಂದ ಭಜನಾ ತಂಡದಿಂದ ಭಜನೆ, ಸಂಜೆ 5 ಗಂಟೆ ನಂತರ ಆರಂಭಗೊಂಡು ರಾತ್ರಿ 9.30 ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿವೆ.
ಕರ್ನಾಟಕ ಕಲಾಶ್ರೀ ಸ್ವರಕೋಕಿಲ ದಿವಂಗತ ಸಂಗೀತ ವಿದುಷಿ ಜಾಹ್ನವಿ ಜಯಪ್ರಕಾಶ್ ಅವರ ಕಲ್ಪನೆಯ ಕೂಸಾದ ರಾಜರಾಜೇಶ್ವರಿ ನಗರ ಕಲ್ಚರಲ್ ಅಸೋಸಿಯೇಷನ್ (Rajarajeshwarinagar Cultural Association) ಅನ್ನು ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಇತರ ಕಲೆಗಳನ್ನು ರಾಜರಾಜೇಶ್ವರಿ ನಗರ ಹಾಗೂ ಸುತ್ತಮುತ್ತ ಪೋಷಿಸಿ ಬೆಳೆಸುವ ಉದ್ದೇಶದೊಡನೆ 2001ರಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಿಂದಲೂ ಬೆಂಗಳೂರಿನ ಸಾಂಸ್ಕೃತಿಕ ಭೂಪಟದಲ್ಲಿ ಸತತವಾಗಿ ತನ್ನ ಪ್ರಸ್ತುತತೆಯನ್ನು ಸಾಬೀತುಪಡಿಸುತ್ತಾ ಬಂದಿರುವ ಸಂಸ್ಥೆಯು ಈ ದಿಶೆಯಲ್ಲಿ 500ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಮಾಸಿಕ ಸಂಗೀತ ಕಾರ್ಯಕ್ರಮಗಳು, ವೈಭವಯುತ ಶ್ರೀ ರಾಮನವಮಿ ಸಂಗೀತೋತ್ಸವ, ದಸರಾ ಸಂಗೀತೋತ್ಸವ, ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಶಾಸ್ತ್ರೀಯ ನೃತ್ಯೋತ್ಸವ 'ನೃತ್ಯ ಜಾಹ್ನವಿ' ಇವುಗಳನ್ನು ಆಚರಿಸುವ ಮೂಲಕ ಭಾರತೀಯ ಕಲಾಪರಂಪರೆಯನ್ನು ಸಂರಕ್ಷಿಸಿ ಪೋಷಿಸುವಲ್ಲಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತಾ ಬಂದಿದೆ.
ಇಷ್ಟೆ ಅಲ್ಲದೆ ಮಕ್ಕಳ ದಿನಾಚರಣೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗಳನ್ನು ಆಚರಿಸಿ ಈ ಸಂರ‍್ಭದಲ್ಲಿ ಪ್ರದೇಶದ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಈ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಚರಣೆಗಳಿಗೆ ಸಾಂಸ್ಕೃತಿಕ ಲೇಪ ನೀಡುವ ಕಾರ್ಯವನ್ನು ನಿರ್ವಹಿಸುತ್ತಿದೆ. ಶಾಸ್ತ್ರೀಯ ಕಲಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ, ಈ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದವರನ್ನು ಸಂಸ್ಥೆಯು ಗುರುತಿಸಿ ಬೆಂಗಳೂರು ನಾಗರತ್ನ ಸ್ಮಾರಕ ಟ್ರಸ್ಟ್ ನೊಡನೆ ಪ್ರತಿವರ್ಷದ ಶ್ರೀ ರಾಮನವಮಿ ಸಂಗೀತೋತ್ಸವದ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಶ್ರೀ ತ್ಯಾಗರಾಜ ಪ್ರಶಸ್ತಿ ಹಾಗೂ ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರಿಗೆ 'ಶ್ರೀ ಪುರಂದರ ಪ್ರಶಸ್ತಿ'ಯನ್ನು ಪ್ರದಾನ ಮಾಡುತ್ತಾ ಸಾಗಿದೆ.
ವಿದುಷಿ ವೀಣಾ ಮೂರ್ತಿ ವಿಜಯ್‌ಗೆ ಶ್ರೀ ಪುರಂದರ ಪ್ರಶಸ್ತಿ
ಕಾರ್ಯಕ್ರಮದ ಅಂಗವಾಗಿ 2025ರ ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ತಮ್ಮ ಅಮೂಲ್ಯ ಸೇವೆ ನೀಡಿರುವ ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ವಿದುಷಿ ವೀಣಾ ಮೂರ್ತಿ ವಿಜಯ್ ಅವರಿಗೆ ರಾಜರಾಜೇಶ್ವರಿ ನಗರ ಕಲ್ಚರಲ್ ಅಸೋಸಿಯೇಷನ್ ಮತ್ತು ಬೆಂಗಳೂರು ನಾಗರತ್ನ ಸ್ಮಾರಕ ಟ್ರಸ್ಟ್ ವತಿಯಿಂದ 'ಶ್ರೀ ಪುರಂದರ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಏಪ್ರಿಲ್ 5, ಶನಿವಾರ: ಬೆಳಗ್ಗೆ 10.30ಕ್ಕೆ ಸ್ವರಾರ್ಣವ ಸಂಗೀತ ಶಾಲೆ ತಂಡದಿಂದ ಭಜನಾ ಕಾರ್ಯಕ್ರಮದೊಂದಿಗೆ ಶ್ರೀ ರಾಮನವಮಿ ಸಂಗೀತೋತ್ಸವ ವಿಧ್ಯುಕ್ತವಾಗಿ ಪ್ರಾರಂಭಗೊಳ್ಳಲಿದೆ.
ಸಂಜೆ 6.30ರಿಂದ 9.30ರವರೆಗೆ ವಿದ್ವಾನ್ ಜೆ.ವಿ. ಜಯಂತ್ ಮತ್ತು ಪಂಡಿತ್ ಅಶ್ವನಿ ಶಂಕರ್, ಕರ್ನಾಟಕ ಕೊಳಲು ಮತ್ತು ಹಿಂದುಸ್ತಾನಿ ಶೆಹನಾಯಿ ಜುಗಲ್ ಬಂದಿ ನಡೆಯಲಿದೆ.
ಏಪ್ರಿಲ್ 6, ಭಾನುವಾರ: ಬೆಳಗ್ಗೆ 9 ಗಂಟೆಗೆ ಶ್ರೀ ತ್ಯಾಗರಾಜ ಮತ್ತು ಪುರಂದರ ದಾಸರ ಆರಾಧನೆ.
ಸಂಜೆ 6.30ರಿಂದ 9.30ರವರೆಗೆ ವಿದ್ವಾನ್ ಅಭಿಷೇಕ್ ರಘುರಾಮ್, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ.
ಏಪ್ರಿಲ್ 7, ಸೋಮವಾರ: ಸಂಜೆ 6.30ಕ್ಕೆ ವಿದ್ವಾನ್ ವಿನಯ್ ಶರ್ವ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ.
ಏಪ್ರಿಲ್ 8, ಮಂಗಳವಾರ: ಸಂಜೆ 6.30ಕ್ಕೆ ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ, ದಾಸವಾಣಿ ಮತ್ತು ಸುಗಮ ಸಂಗೀತ.
ಏಪ್ರಿಲ್ 9, ಬುಧವಾರ: ಸಂಜೆ 6.30ಕ್ಕೆ ವಿದುಷಿ ಸುಮಾ ಸುಧೀಂದ್ರ, ಕರ್ನಾಟಕ ಸಂಗೀತ ವೀಣಾ ವಾದನ.
ಏಪ್ರಿಲ್ 10, ಗುರುವಾರ: ಸಂಜೆ 6.30ಕ್ಕೆ ವಿದುಷಿ ಜೋತ್ಸ್ನಾ ಶ್ರೀಕಾಂತ್, ಕರ್ನಾಟಕ ಸಂಗೀತ ವಯೋಲಿನ್ ವಾದನ.
ಏಪ್ರಿಲ್ 11, ಶುಕ್ರವಾರ: ಸಂಜೆ 6.30ಕ್ಕೆ ಬೆಂಗಳೂರು ಸಹೋದರರು, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ.
ಏಪ್ರಿಲ್ 12, ಶನಿವಾರ: ಸಂಜೆ 6.30ಕ್ಕೆ ವಿದುಷಿ ಮಾನಸಿ ಪ್ರಸಾದ್ ಮತ್ತು ವಿದುಷಿ ರಾಧಿಕಾ ಜೋಶಿ,
ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಜುಗಲ್ ಬಂದಿ.
ಏಪ್ರಿಲ್ 13, ಭಾನುವಾರ: ಸಂಜೆ 6 ಗಂಟೆಗೆ ಭರತನಾಟ್ಯ: ಮಯೂರ ಲಲಿತಾ ಮತ್ತು ತಂಡ ಡಾ. ಶೋಭಾ ಶಶಿಕುಮಾರ್ ಅವರ ಶಿಷ್ಯವೃಂದ.
ಸಂಜೆ 7 ಗಂಟೆಗೆ ʼಶ್ರೀ ಪುರಂದರ ಪ್ರಶಸ್ತಿʼ ಪ್ರದಾನ: ಪ್ರಖ್ಯಾತ ಸಂಗೀತ ಗುರು ಡಾ.ಮಂಜುಳಾ ಶ್ರೀರಾಮ್ ಅವರಿಂದ ವೀಣಾ ಮೂರ್ತಿ ವಿಜಯ್ ಅವರಿಗೆ ಪ್ರಶಸ್ತಿ ಪ್ರದಾನ.
ಸಂಜೆ 7.45ಕ್ಕೆ ಕೂಚುಪುಡಿ ನೃತ್ಯ: ವೀಣಾ ಮೂರ್ತಿ ವಿಜಯ್ ಮತ್ತು ಶಿಷ್ಯರಿಂದ.
ಭಾರತೀಯ ಶಾಸ್ತ್ರೀಯ ಸಂಗೀತ, ನಾಟ್ಯ ಹಾಗೂ ಇತರ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಹೆಮ್ಮೆಯೊಡನೆ ಈ ವೈಭವೋಪೇತ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಕಲಾರಸಿಕರು ಹಾಗೂ ಸಂಗೀತ ಪ್ರೇಮಿಗಳನ್ನು ಆಹ್ವಾನಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ಮತ್ತು ದೇಣಿಗೆ ನೀಡುವವರು ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಮತಿ ಬೃಂದಾ ಲಕ್ಷ್ಮಿ (9448553482) ಸಂಪರ್ಕಿಸಬಹುದು.
ಶ್ರೀ ರಾಮನವಮಿ ಸಂಗೀತೋತ್ಸವವನ್ನು ಆಚರಿಸುವ ಬೆಂಗಳೂರಿನ ಕೆಲವೇ ಸಂಸ್ಥೆಗಳ ಪೈಕಿ ಹೆಗ್ಗುರುತಾದ ರಾಜರಾಜೇಶ್ವರಿ ನಗರ ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯು, ಕಾರ್ಯಕ್ರಮದಲ್ಲಿ ತನ್ನೊಡನೆ ಕೈಜೋಡಿಸುವಂತೆ ಕಲಾ ಪೋಷಕರು, ಪ್ರಾಯೋಜಕರು ದಾನಿಗಳನ್ನು ಆಹ್ವಾನಿಸಿದ್ದು, ಕಲೆಗಳನ್ನು ಜೀವಂತವಾಗಿಡುವಲ್ಲಿ ಶ್ರಮಿಸುತ್ತಿರುವ ಕಲಾವಿದರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದೆ.
ಶ್ರೀ ರಾಮನವಮಿ ಸಂಗೀತೋತ್ಸವದ ಆಹ್ವಾನ ಪತ್ರಿಕೆ ಇಲ್ಲಿದೆ
RCA-SRS2025-Program Pamphlet (1)
ಈ ಸುದ್ದಿಯನ್ನೂ ಓದಿ | Dr Sadhanashree Column: ಶಿರಸ್ಸೆಂಬ ಹೊನ್ನ ಕಳಸದ ಕಾಳಜಿ