ದೋಹಾ (ಕತಾರ್): ಕನ್ನಡ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ (Shivarajkumar Birthday) ಅವರು ಜು.12ಕ್ಕೆ 64ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕರ್ನಾಟಕ ಸಂಘ ಕತಾರ್ ವತಿಯಿಂದ ಜನ್ಮದಿನದ ಶುಭಾಶಯ ಕೋರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು (Subramanya Hebbagelu) ಅವರು, ಕನ್ನಡಿಗರ ಕಣ್ಮಣಿಯಾಗಿರುವ 'ಹ್ಯಾಟ್ರಿಕ್ ಹೀರೋ' ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮದಿನಕ್ಕೆ ಶುಭಾಶಯ ಸಲ್ಲಿಸುತ್ತಾ, ಕಳೆದ ಒಂದು ದಶಕದ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಶಿವರಾಜ್ ಕುಮಾರ್ ಅವರು ಕತಾರ್‌ಗೆ ಭೇಟಿ ನೀಡಿ ಒಂದು ದಶಕವಾಗಿದೆ. ಕರ್ನಾಟಕ ಸಂಘ ಕತಾರ್ ವಾರ್ಷಿಕ ವಿಶೇಷ "ಕರ್ನಾಟಕ ರಾಜ್ಯೋತ್ಸವ" ಕಾರ್ಯಕ್ರಮಕ್ಕೆ ಮೊಟ್ಟ ಮೊದಲ ಬಾರಿ ಆಗಮಿಸಿ ಕತಾರ್‌ನ ಕನ್ನಡ ಅಭಿಮಾನಿಗಳಿಗೆ ಶಿವಣ್ಣ ಹರುಷ ನೀಡಿದ್ದರು. ನಂತರ ಲೀಡರ್ ಚಲನಚಿತ್ರೀಕರಣಕ್ಕೆ ಆಗಮಿಸಿ ದೋಹಾದಲ್ಲಿ ಮತ್ತೊಮ್ಮೆ ಕನ್ನಡದ ಹಿರಿಮೆಯನ್ನು ಮೆರೆದಿದ್ದರು.

ಇನ್ನು ತಮ್ಮ ಜನ್ಮದಿನದಂದು ಕತಾರ್ ನಿವಾಸಕ್ಕೆ ಭೇಟಿ ನೀಡಿ ಮಹದಾನಂದವನ್ನು ಹಂಚಿದ್ದರು. ನಂತರದ ಕೆಲವು ವರ್ಷಗಳಲ್ಲಿ ಶಿವಣ್ಣನವರು ಹಲವು ಕಾರಣಗಳಿಂದ ತಮ್ಮ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಿಲ್ಲ. ಮಾತೃ ವಿಯೋಗ, ಪ್ರೀತಿಯ ತಮ್ಮನಾದ ಪುನೀತ್ ಅವರ ಅಕಾಲಿಕ ಅಗಲಿಕೆ, ತಮ್ಮ ಅನಾರೋಗ್ಯದ ಕಾರಣಗಳಿಂದಾಗಿ ಜನ್ಮದಿನಾಚರಣೆಯು ಅಷ್ಟು ಸಂತಸ ನೀಡುವಂತಿರಲಿಲ್ಲ.

ಈ ಸಂವತ್ಸರ ಕಾರ್ಮೋಡಗಳೆಲ್ಲ ಕಳೆದು ಮತ್ತೆ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು, ಎಂದಿನಂತೆ ಕನ್ನಡಿಗರಿಗೆ ಆನಂದ ಮಳೆಗರೆಯಲು ಶಿವಣ್ಣನವರು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ಎಲ್ಲರಿಗೂ ಆನಂದದ ಸಮಾಚಾರ. ಪ್ರಪಂಚದ ಸಮಸ್ತ ಕನ್ನಡಿಗರ ಹಾರೈಕೆ, ಹಾಗೂ ಆ ಭಗವಂತನ, ಗುರು ಹಿರಿಯರ ಆಶೀರ್ವಾದ ಸದಾ ಶಿವಣ್ಣನವರ ಹಾಗೂ ಅವರ ಸಮಸ್ತ ಕುಟುಂಬದ ಸದಸ್ಯರ ಮೇಲೆ ಹೂಮಳೆಗರೆಯಲಿ, ಅವರ ಮನ ಮನೆಗಳಲ್ಲಿ ಅವಿರತ ಹರ್ಷೋದ್ಗಾರ ನೆಲೆಸಿರಲಿ ಎಂದು ಸುಬ್ರಮಣ್ಯ, ಹೆಬ್ಬಾಗಿಲು ಅವರು ಹಾರೈಸಿದ್ದಾರೆ.