ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Sowjanya case) ಮರು ತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠವು, ಕೇಂದ್ರೀಯ ತನಿಖಾ ದಳ (ಸಿಬಿಐ) ಕರ್ತವ್ಯ ಲೋಪ ಹಾಗೂ ತನಿಖಾ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆ ವೇಳೆ ತನಿಖಾ ಸಂಸ್ಥೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, ಹಲವು ನೇರ ಪ್ರಶ್ನೆಗಳನ್ನು ಕೇಳಿತು. "ಘಟನೆ ನಡೆದು 14 ವರ್ಷಗಳೇ ಕಳೆದಿವೆ. ಆದರೂ ತೃಪ್ತಿಕರ ತನಿಖೆ ನಡೆದಿಲ್ಲ. ಮೂಲ ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದರೆ ಏನರ್ಥ?" ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.
ಕೆಳ ಹಂತದ ನ್ಯಾಯಾಲಯದಲ್ಲಿ ಇನ್ನೂ ಕೆಲವರ ವಿರುದ್ಧ ತನಿಖೆ ನಡೆಸಬೇಕಿದೆ ಎಂದು ಈ ಹಿಂದೆ ಹೇಳಿದ್ದ ಸಿಬಿಐ, ಈಗ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯ ನೆಪಗಳನ್ನು ಮುಂದೆ ತರುತ್ತಿರುವುದೇಕೆ?, ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಲ್ಲಿಸಿದ್ದ ವರದಿಯನ್ನೇ ಸಿಬಿಐ ಭಾಷಾಂತರಿಸಿ ಕೋರ್ಟ್‌ಗೆ ಸಲ್ಲಿಸಿದೆಯೇ ವಿನಃ ಸ್ವತಂತ್ರ ಹಾಗೂ ಆಳವಾದ ತನಿಖೆ ನಡೆಸಿಲ್ಲ ಎಂದು ಕಿಡಿಕಾರಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಪರ ವಕೀಲರು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಕೋರಿದರು. ಇದಕ್ಕೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರ್ಕಾರದ ಪರ ವಕೀಲರು, "ಪ್ರಕರಣದ ನೈಜ ಸತ್ಯಾಸತ್ಯತೆ ಹೊರಬರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸುಪ್ರೀಂಕೋರ್ಟ್ ನಿರ್ದೇಶಿಸಿದರೆ ವಿಶೇಷ ತನಿಖಾ ತಂಡ ರಚನೆ ಮಾಡಿ ತನಿಖೆಗೆ ಪೂರ್ಣ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ" ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ಸಾಕ್ಷಿಗಳಿಗೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇನ್ನು ಮಧ್ಯಂತರ ವರದಿ ಪಡೆದು ಮುಂದಿನ ತನಿಖಾ ಮಾದರಿಯನ್ನು ನಿರ್ಧರಿಸುವುದಾಗಿ ಹೇಳಿರುವ ಕೋರ್ಟ್, ಅರ್ಜಿಯ ಆದೇಶವನ್ನು ಕಾಯ್ದಿರಿಸಿದೆ.
Vijayalakshmi Darshan: ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಪ್ರಕರಣ; 4ನೇ ಆರೋಪಿಗೆ ಜಾಮೀನು ಮಂಜೂರು
ಏನಿದು ಪ್ರಕರಣ?
2012ರ ಅಕ್ಟೋಬರ್‌ನಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಅವರು ಧರ್ಮಸ್ಥಳದ ಸಮೀಪ ನಾಪತ್ತೆಯಾಗಿದ್ದರು. ಮರುದಿನ ಅವರ ಮೃತದೇಹ ಬರ್ಬರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದವು. ತೀವ್ರ ಸಾರ್ವಜನಿಕ ಒತ್ತಡದ ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲಾಗಿತ್ತು. ತೀವ್ರ ವಿಚಾರಣೆ ಬಳಿಕ ಪ್ರಕರಣದ ಆರೋಪಿ ಸಂತೋಷ್ ರಾವನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು.