ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sustainable Data Park: ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ

Sustainable Data Park: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ ಡೇಟಾ ಕೇಂದ್ರಗಳು (ಸಸ್ಟೇನಬಲ್ ಡೇಟಾ ಸೆಂಟರ್ಸ್) ಅಗತ್ಯವಿದ್ದು ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು ಗುರುವಾರ ನಡೆದ ಸಂಬಂಧಿತ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ ಕುರಿತು ಬೆಂಗಳೂರಿನ ಶಕ್ತಿ ಭವನದಲ್ಲಿ ಸಭೆ ಜರುಗಿತು.

ಬೆಂಗಳೂರು, ಏ. 30: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ ಡೇಟಾ ಕೇಂದ್ರಗಳು (ಸಸ್ಟೇನಬಲ್ ಡೇಟಾ ಸೆಂಟರ್ಸ್) ಅಗತ್ಯವಿದ್ದು, ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು (Sustainable Data Park) ಗುರುವಾರ ನಡೆದ ಸಂಬಂಧಿತ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಲ್ಲಿನ ಶಕ್ತಿ ಭವನದಲ್ಲಿ ನಡೆದ ಈ ಪ್ರಾಥಮಿಕ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ ಸಾಮರ್ಥ್ಯದ ಸುಸ್ಥಿರ ಡೇಟಾ ಕೇಂದ್ರ ಪಾರ್ಕ್ ಸ್ಥಾಪಿಸಲಾಗುವುದು. ಪಾವಗಡದಿಂದ ಪೂರೈಕೆಯಾಗುವ ಸೌರ ವಿದ್ಯುತ್ ನೇರವಾಗಿ ಇಲ್ಲಿಗೆ ತಲುಪುತ್ತದೆ. ಜತೆಗೆ ಬೆಂಗಳೂರು ಜಲ‌ ಮಂಡಳಿಯು ಎರಡು ಹಂತಗಳಲ್ಲಿ ಸಂಸ್ಕರಿಸಿದ 60 ಎಂ.ಎಲ್.ಡಿ ನೀರು ಪೂರೈಕೆಗೆ ತೊಂದರೆ ಇಲ್ಲ ಎಂದು ತಿಳಿಸಿದೆ. ಸ್ವತಃ ಉದ್ಯಮಗಳೇ ಈ‌ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡಿಕೊಳ್ಳುತ್ತವೆ. ಈ ಮೂರೂ ಪಾರ್ಕುಗಳ ಒಟ್ಟು ಸಾಮರ್ಥ್ಯ 1,000 ಮೆಗಾವ್ಯಾಟ್ ಇರಲಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

ಮಂಗಳೂರಿನಲ್ಲಿ ಕೂಡ ಡೇಟಾ ಪಾರ್ಕ್ ಸ್ಥಾಪನೆಗೆ ಭೂಮಿಯು ಲಭ್ಯವಿದೆ. ಅಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಗೆ ಸೇರಿದ 350 ಎಕರೆ ಇದೆ. ಮೈಸೂರಿನಲ್ಲಿ ಈ ಉದ್ದೇಶಕ್ಕೆ ಸೂಕ್ತ ಜಾಗ ಗುರುತಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಈ ಪಾರ್ಕ್‌ಗಳಲ್ಲಿ ಯಾರೇ ಬಂದು ಡಾಟಾ ಸೆಂಟರ್ ಸ್ಥಾಪನೆಗೆ ಹೂಡಿಕೆ ಮಾಡಿದರೆ ಅವರಿಗೆ ವಿದ್ಯುತ್ ಮತ್ತು ನೀರು ನೀಡಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳಲು ಮೂವರು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸದ್ಯದಲ್ಲೇ ಹೂಡಿಕೆದಾರರ ಜತೆಗೂ ಸಭೆ ಮಾಡಲು ಸಚಿವರು ಸಲಹೆ ನೀಡಿದರು.

ಮುಂದಿನ ಹಂತದಲ್ಲಿ ಜಲ ಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇರುವ ಸಚಿವರ ತಂಡವನ್ನು ಮತ್ತು ಉನ್ನತ ಅಧಿಕಾರಿಗಳ ತಂಡವನ್ನು ಈ ಸಂಬಂಧ ರಚಿಸಲಾಗುವುದು. ಒಟ್ಟಿನಲ್ಲಿ ತ್ವರಿತವಾಗಿ ಈ ಡೇಟಾ ಪಾರ್ಕುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಐಟಿ ವಲಯಕ್ಕೆ ಭರ್ಜರಿ ಸುದ್ದಿ; ಕಾಗ್ನಿಜೆಂಟ್‌ನಿಂದ ಈ ವರ್ಷ 21,000 ಉದ್ಯೋಗಿಗಳ ನೇಮಕ

ಇಂಧನ ಮತ್ತು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಐಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆಎಸ್ಐಐಡಿಸಿ ವ್ಯವಸ್ಥಾಪಕ‌ ನಿರ್ದೇಶಕಿ ಖುಷ್ಬು ಗೋಯಲ್, ಕೆಐಎಡಿಬಿ ಆಯುಕ್ತ ಡಾ. ಮಹೇಶ್, ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷ ರಾಮ ಮನೋಹರ್ ಪ್ರಸಾದ್, ಐಟಿ ನಿರ್ದೇಶಕ ರಾಹುಲ್ ಸಂಕನೂರು ಉಪಸ್ಥಿತರಿದ್ದರು.