ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bike Taxi Accident: ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಬಿದ್ದು ಶಿಕ್ಷಕಿ ಸಾವು

ಬೆಂಗಳೂರಿನ ಜೆ.ಪಿ. ನಗರದಲ್ಲಿ ಅಪಘಾತ ನಡೆದಿದೆ. ಬೈಕ್‌ ಟ್ಯಾಕ್ಸಿಯಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ರಭಸಕ್ಕೆ ಶಿಕ್ಷಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಶಿಕ್ಷಕಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೃತ ಶಿಕ್ಷಕಿ ಎಸ್. ರಾಧಾ.

ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಬಿದ್ದು ಶಿಕ್ಷಕಿ ಮೃತಪಟ್ಟಿರುವ ಘಟನೆ (Bike Taxi Accident) ಬೆಂಗಳೂರಿನಲ್ಲಿ ನಡೆದಿದೆ. ಮೃತರನ್ನು ಅರಕೆರೆ ನಿವಾಸಿಯಾದ ಎಸ್. ರಾಧಾ (54) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಪ್ರತಿಷ್ಠಿತ ಡೆಲ್ಲಿ ಪಬ್ಲಿಕ್ ಸ್ಕೂಲ್ (ಸೌತ್) ಶಾಖೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಶಿಕ್ಷಕಿ ರಾಧಾ ಅವರು ನಾಗರಭಾವಿಯಲ್ಲಿದ್ದ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದರು. ಅಲ್ಲಿಂದ ಭಾನುವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ತಮ್ಮ ಮನೆಗೆ ಮರಳಲು ರ‍್ಯಾಪಿಡೋ ಬೈಕ್‌ ಪಿಂಕ್‌ (ಮಹಿಳಾ ಪ್ರಯಾಣಿಕರಿಗಾಗಿ ಲೇಡಿ ರೈಡರ್‌ ಇರುವ ಸ್ಕೂಟರ್‌/ಬೈಕ್‌) ಬುಕ್ ಮಾಡಿದ್ದರು.

ಬೈಕ್, ಜೆ.ಪಿ. ನಗರದ 24ನೇ ಮುಖ್ಯ ರಸ್ತೆಯ ನಂದಿನಿ ಜಂಕ್ಷನ್ ತಲುಪಿದಾಗ ಅಪಘಾತ ಸಂಭವಿಸಿದೆ. ರಾಧಾ ಅವರು ಬೈಕ್‌ನಲ್ಲಿ ಒಂದೇ ಬದಿಗೆ ಎರಡೂ ಕಾಲುಗಳನ್ನು ಹಾಕಿ ಕುಳಿತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಗೊಂದಲದಲ್ಲಿ ಬೈಕ್ ಚಾಲಕಿ ಶ್ವೇತಾ (27) ಕೂಡ ಕೆಳಗೆ ಬಿದ್ದಾರೆ.

SIT SP's Car Accident: ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಎಸ್‌ಪಿ ತೆರಳುತ್ತಿದ್ದ ಕಾರು ಪಲ್ಟಿ; ಹಲವರಿಗೆ ಗಾಯ

ಘಟನೆಯ ಸಮಯದಲ್ಲಿ ಇಬ್ಬರೂ ಹಾಫ್-ಹೆಲ್ಮೆಟ್‌ಗಳನ್ನು ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಬೈಕ್‌ನಿಂದ ಕೆಳಗೆ ಬಿದ್ದ ರಭಸಕ್ಕೆ ರಾಧಾ ಅವರ ಮೂಗು ಮತ್ತು ಹಣೆ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ತಲೆಯಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿತ್ತು. ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಬೈಕ್‌ ಚಾಲಕಿಗೂ ಗಾಯಗಳಾಗಿದ್ದು, ಅವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.