ಬೆಂಗಳೂರು: ಕೇಂದ್ರ ಸರ್ಕಾರವೂ ತನ್ನ ವೆಚ್ಚ ನಿರ್ವಹಣೆಗೆ ಸಾಲದ ಮೇಲೆ ಅವಲಂಬಿತವಾಗಿದೆ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರದ ಸಾಲದ ಪ್ರಮಾಣವೂ ಹೆಚ್ಚಾಗುತ್ತಾ ಬಂದಿದೆ. 2024-25 ರಲ್ಲಿ 14.72 ಲಕ್ಷ ಕೋಟಿ ರೂ. ಇದ್ದದ್ದು, 2026-27ನೇ ಸಾಲಿಗೆ 16.96 ಲಕ್ಷ ಕೋಟಿ ರೂ. ಆಗಿದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 16ನೇ ಹಣಕಾಸು ಆಯೋಗದ ಮಾರ್ಗಸೂಚಿ 4.2 % ಗಿಂತ ಹೆಚ್ಚಿಗೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಯ ವೇಳೆ ಮಾತನಾಡಿದ ಸಿಎಂ ಅವರು, ಕೇಂದ್ರ ಸರ್ಕಾರ ಮಾಡಿದ ಸಾಲ 2014 ರ ಮಾರ್ಚ್‌ಗೆ ಹೋಲಿಸಿದರೆ 2027ರ ಮಾರ್ಚ್ ವೇಳೆಗೆ 165.52 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗುತ್ತಿದೆ [53.11 ಲಕ್ಷ ಕೋಟಿ ರೂ.ಗಳಿದ್ದದ್ದು ಈಗ 218.63 ಲಕ್ಷ ಕೋಟಿ ರೂ.ಗೆ ಏರಿಕೆಯಾಗುತ್ತಿದೆ ]
ಬಿಜೆಪಿ ಸರ್ಕಾರ ಸಾಲ ಮಾಡಿ ಮಾಡಿದ್ದೇನು? ಸಾಮಾಜಿಕ ನ್ಯಾಯಕ್ಕೆ ಕೊಟ್ಟ ಅನುದಾನವೆಷ್ಟು? ಕೊರೊನಾ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವು ಪ್ರತಿ ಕುಟುಂಬಕ್ಕೆ 10,000 ರೂ. ಕೊಡಿ, ಜನರ ಕೈಯಲ್ಲಿ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟ ಸ್ವಲ್ಪವಾದರೂ ಕಡಿಮೆಯಾಗಲಿ ಎಂದು ಹೇಳಿದರೆ ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಕೇಳಲಿಲ್ಲ. ಆದರೂ ಸಾಲ ಮಾಡಿ ಮಾಡಿದ್ದೇನು? ಒಂದು ರಸ್ತೆ ಸರಿ ಮಾಡಲಿಲ್ಲ. ತಮ್ಮ 4 ವರ್ಷಗಳ 2019-23ರ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಕೇವಲ 5 ಹಾಸ್ಟೆಲ್‌ಗಳನ್ನು ಕೊಟ್ಟರು. 2832 ಸಂಖ್ಯೆಯ ಬಸ್ಸುಗಳನ್ನು ಕೊಂಡುಕೊಳ್ಳಲಾಯಿತು. ನಾಲ್ಕು ವರ್ಷಗಳಲ್ಲಿ 5.75 ಲಕ್ಷ ಮನೆಗಳನ್ನು ನಿರ್ಮಿಸಿದರು. ಹೊಸ ಆಸ್ಪತ್ರೆಗಳಿರಲಿಲ್ಲ. ವೈದ್ಯರ ನೇಮಕಾತಿ ಇರಲಿಲ್ಲ. ಆದರೂ 5,53,363 ಕೋಟಿ ರೂಗಳಷ್ಟು ಔಟ್‌ಸ್ಟ್ಯಾಂಡಿಂಗ್ ಸಾಲವನ್ನು 2023ರಲ್ಲಿ ಉಳಿಸಿ ಹೋಗಲಾಯಿತು. ಹಾಗಿದ್ದರೆ ಅಷ್ಟು ಹಣ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.
ನಾನು ಎಂದೂ ಸಾಲ ಮಾಡಬಾರದು ಎಂದು ಹೇಳಿಲ್ಲ. ಹೇಳುವುದೂ ಇಲ್ಲ. ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲೂ ಸಾಲ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಮಾಡುವ ಸಾಲ ಜನರ ಕಲ್ಯಾಣಗಳಿಗಾಗಿ ಮತ್ತು ನಾಡಿನ ಕಲ್ಯಾಣಕ್ಕಾಗಿ ಬಳಕೆಯಾಗಿದೆಯೇ ಇಲ್ಲವೇ ಎಂದು ನೋಡಿ.
ಬುದ್ಧಬಸವಾದಿ ಶರಣರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು. ಆದರೂ ಸಮಾಜದಲ್ಲಿ ಜಾತಿವರ್ಗ ವ್ಯವಸ್ಥೆ ಇದೆ. ಸುಧಾರಣೆಗಳನ್ನು ತಂದರೂ ಜಾತಿವ್ಯವಸ್ಥೆ ಇದ್ದೇ ಇದೆ. ಸರ್ವಜನಾಂಗದ ಶಾಂತಿಯ ತೋಟ ಎಂಬುದು ನಮ್ಮ ಸರ್ಕಾರದ ಸಿದ್ಧಾಂತ. ಎಲ್ಲರನ್ನೊಳಗೊಂಡ ಸಮಸಮಾಜ ನಿರ್ಮಾಣ ನಮ್ಮ ಗುರಿ. ಯಾವ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆಯೇ ಹೊರತು ದ್ವೇಷವನ್ನಲ್ಲ.
ನಾನು ಯಾವುದೇ ಮೂಢನಂಬಿಕೆಗಳನ್ನು ಬೆಂಬಲಿಸುವುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇರಬೇಕು. ಆದ್ದರಿಂದ ನಮ್ಮ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತಂದಿತು ಎಂದು ತಿಳಿಸಿದರು.
ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗದಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹಾರಾಷ್ಟ್ರದಲ್ಲಿ ಶೇ.3.0 ರಷ್ಟು, ಆಂಧ್ರಪ್ರದೇಶ ಶೇ.4.5, ಕೇರಳ ಶೇ.3.8, ತಮಿಳುನಾಡು ಶೇ.3.5 ರಷ್ಟು ಇದೆ. ಎಲ್ಲಾ ರಾಜ್ಯಗಳು ವಿತ್ತೀಯ ಕೊರತೆಯಿದೆ. ನಮ್ಮ ರಾಜ್ಯದ ವಿತ್ತೀಯ ಕೊರತೆ 0.7 ಇದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 1.5 ರಷ್ಟಿದೆ.
ಬಿಜೆಪಿಯ ವಿಜಯೇಂದ್ರ ಅವರು, ರೆವಿನ್ಯೂ ಸಂಗ್ರಹ ಆಗದ ಕಾರಣ, ಪ್ರತಿ ವರ್ಷ ಬಜೆಟ್‌ನಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ. ಆದರೆ ಆಯವ್ಯಯ ಅಂದಾಜಿಗೆ ಹೋಲಿಸಿದರೆ, ಪಕ್ಕದ ರಾಜ್ಯಗಳ ಸ್ವಂತ ರಾಜಸ್ವ ಸಂಗ್ರಹಣೆಯು ವಾಸ್ತವ/ ಪರಿಷ್ಕರತ ಸಂಗ್ರಹಣೆಯಲ್ಲಿ ಕಡಿಮೆ ಆಗಿದೆ. ದೇಶದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ನಂ.2 ರಲ್ಲಿದೆ ಹಾಗೂ ಬಂಡವಾಳ ಹೂಡಿಕೆಯಲ್ಲಿಯೂ ಕರ್ನಾಟಕ ನಂ.2 ಇದೆ.
2014 ರಲ್ಲಿ ಮೋದಿಯವರು ಪ್ರಧಾನಿಯಾದಾಗ, ಸಾಲದ ಮೊತ್ತ 53,11,000 ಕೋಟಿ , ಅವರು ಬಂದ ಅವಧಿಯಿಂದ ಇಂದಿಗೆ 218 ಲಕ್ಷ ಕೋಟಿಗೆ ಸಾಲದ ಮೊತ್ತ ಏರಿಕೆಯಾಗಿದೆ. ಅವರ ಅವಧಿಯಲ್ಲಿ 165 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ. ಮೋದಿಯವರು ದೇಶವನ್ನು ಸಾಲಕ್ಕೆ ದೂಡಿದ್ದಾರೆ. ಈ ವರ್ಷ 16,96,000 ಕೋಟಿ ಸಾಲ ಮಾಡಿದ್ದಾರೆ. ನಿಯಮಗಳ ಪ್ರಕಾರ ಸಾಲದ ಮೊತ್ತ 40 ರಷ್ಟಿರಬೇಕಿದ್ದು, ಕೇಂದ್ರದ ಈ ಪ್ರಮಾಣ 56 ರಷ್ಟು ಹೆಚ್ಚಿದೆ. ಆದರೆ ನಮ್ಮ ಸರ್ಕಾರ ಈ ವರ್ಷ 1,32,000 ಕೋಟಿ ಸಾಲ ಮಾಡಿದೆ.
ರಾಜ್ಯಕ್ಕೆ ಅನ್ಯಾಯವಾದಾಗ ಯಾವುದೇ ಸರ್ಕಾರವಿದ್ದರೂ, ವಿರೋಧಿಸಲೇಬೇಕು. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಈ ಅನ್ಯಾಯವನ್ನು ವಿರೋಧಿಸಬೇಕು. ಆಯೋಗದಲ್ಲಿ 29 % ಶಿಫಾರಸ್ಸು ಮಾಡಿದ್ದು, ಆಗ ನಾನು 40% ಕೊಡಬೇಕೆಂದು ಒತ್ತಾಯಿಸಿದ್ದೆ. ಆಗ ಮೋದಿಯವರು, ಗುಜರಾತಿನ ಸಿಎಂ ಆಗಿದ್ದಾಗ, ತೆರಿಗೆ ಪಾಲಿನಲ್ಲಿ ಶೇ. 50 ರಷ್ಟು ರಾಜ್ಯಗಳಿಗೆ ಕೊಡಬೇಕೆಂದು ಒತ್ತಾಯಿಸಿದ್ದರು. ಕರ್ನಾಟಕದಿಂದ 4.50 ಲಕ್ಷ ಕೋಟಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ರಾಜ್ಯಕ್ಕೆ ಮರಳಿ ಬರುವುದು 14-15% ರಷ್ಟು ಮಾತ್ರ.
ಕರ್ನಾಟಕಕ್ಕೆ 14 ನೇ ಆಯೋಗದಲ್ಲಿ 4.713 ರಷ್ಟು ಪಾಲು ದೊರಕಿತ್ತು. ಆದರೆ 15 ನೇ ಹಣಕಾಸಿನ ಆಯೋಗದಲ್ಲಿ 3.647 ರಷ್ಟಾಗಿ, 1.1 ರಷ್ಟು ಕಡಿಮೆಯಾಗಿ ಅನ್ಯಾಯವಾಗಿತ್ತು.. ಇದರಂತೆ 11,495 ಕೋಟಿ ರಾಜ್ಯಕ್ಕೆ ಖೋತಾ ಆಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು. ಈ ಅನ್ಯಾಯವನ್ನು ಪ್ರಶ್ನಿಸಿ ಪ್ರತಿಭಟನೆ ಮಾಡಲಾಯಿತು. ಕೇಂದ್ರ ಸರ್ಕಾರ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ 5,300 ಕೋಟಿ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಲಿಲ್ಲ. ಹಿಂದಿನ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವುದಾಗಿ ತಿಳಿಸಿದರು. ಆದರೆ ಈ ಯಾವ ಘೋಷಣೆಗಳು ಫಲ ಕಾಣಲಿಲ್ಲ. ಆದ್ದರಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿಯವರೂ ಪ್ರಶ್ನಿಸಬೇಕು.
ನ್ಯಾಯಯುತವಾದ ರಾಜ್ಯದ ಪಾಲನ್ನು ನಮಗೆ ನೀಡಿಲ್ಲ. 16ನೇ ಆಯೋಗದಲ್ಲಿ ಸ್ವಲ್ಪ ಸುಧಾರಣೆಯಾಗಿ 4.131 ರಷ್ಟು ರಾಜ್ಯಕ್ಕೆ ನಿಗದಿಯಾಗಿದೆ. ಆದರೆ ರಾಜ್ಯ ಕೋರಿದ್ದ 4.7 ಯಷ್ಟು ಬರಲಿಲ್ಲ. ಆದ್ದರಿಂದ ಕೇಂದ್ರದ ವಿರುದ್ಧದ ಹೋರಾಟ ಮುಂದುವರಿಯಲಿದೆ. ಸದ್ಯದಲ್ಲಿಯೇ ರಾಜ್ಯದ ಅನುದಾನದ ಬೇಡಿಕೆಯನ್ನಿಟ್ಟು ಪಕ್ಷಾತೀತವಾದ ನಿಯೋಗವೊಂದು ಕೇಂದ್ರಕ್ಕೆ ಹೋಗಬೇಕು ಎಂದರು.