ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿ ಖಾತಾ ಆಸ್ತಿಗೆ ಎ ಖಾತಾ, ಗೃಹ ಕಾರ್ಮಿಕರ ಮಸೂದೆಗೆ ಅಸ್ತು; ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ

Karnataka cabinet Meeting: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2026ನೇ ಸಾಲಿನ 2ನೇ ಸಚಿವ ಸಂಪುಟ ಸಭೆ ಗುರುವಾರ ನಡೆದಿದೆ. ಬಿ-ಖಾತಾ ನಿವೇಶನ ಹಾಗೂ ಕಟ್ಟಡಗಳಿಗೆ ಎ-ಖಾತಾ ನೀಡುವುದು, ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ವಿಧೇಯಕ, 2026ಕ್ಕೆ ಒಪ್ಪಿಗೆ ಸೇರಿ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.9: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ನಿವೇಶನ ಹಾಗೂ ಕಟ್ಟಡಗಳಿಗೆ ಎ-ಖಾತಾ ನೀಡುವುದು, ಕರ್ನಾಟಕ ಗೃಹ ಕಾರ್ಮಿಕರ ಮಸೂದೆ, ರಾಜ್ಯದ ಕಾರಾಗೃಹಗಳಲ್ಲಿರುವ 33 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವುದು, ಎರಡು ಕಡೆ ಕಾಂಗ್ರೆಸ್‌ ಭವನಗಳಿಗೆ ಜಮೀನು ಮಂಜೂರು ಮಾಡುವುದು ಸೇರಿ ಹಲವು ಪ್ರಮುಖ ನಿರ್ಣಯಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka cabinet Meeting) ಅನುಮೋದನೆ ನೀಡಲಾಗಿದೆ.

ಬಿ-ಖಾತಾ ನಿವೇಶನ, ಕಟ್ಟಡ ಎ-ಖಾತಾ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್, ಫ್ಲಾಟ್‌ಗಳಿಗೆ ಎ-ಖಾತಾ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಯಡಿ 10 ಲಕ್ಷ ಆಸ್ತಿಗಳು ಒಳಪಡಲಿವೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ-ಕಲ್ಯಾಣ) ವಿಧೇಯಕ, 2026ಕ್ಕೆ ಅನುಮೋದನೆ

"ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ವಿಧೇಯಕ, 2026"ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಯು, ರಾಜ್ಯದ ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು, ಸಾಮಾಜಿಕ ಭದ್ರತೆ ವಿಸ್ತರಿಸಲು ಉದ್ದೇಶಿಸಿದೆ. ಕಾರ್ಮಿಕರಿಗೆ ಕನಿಷ್ಠ ವೇತನ, ವಾರಕ್ಕೆ 48 ಗಂಟೆಗಳ ಕೆಲಸ ಮಿತಿ, ಓವರ್‌ಟೈಮ್ ವೇತನ, ಸಾಪ್ತಾಹಿಕ ರಜೆ ಮತ್ತು ಹೆರಿಗೆ, ಪಿತೃತ್ವ ರಜೆ, ಕಾರ್ಮಿಕರಿಗೆ ಅಪಘಾತ ಪರಿಹಾರ, ವೈದ್ಯಕೀಯ ವೆಚ್ಚಗಳು, ಮಕ್ಕಳ ಶಿಕ್ಷಣ ನೆರವು, ಪಿಂಚಣಿ ಸೇರಿದಂತೆ ಹಲವು ಸಾಮಾಜಿಕ ಭದ್ರತೆ ಒದಗಿಸಲು ಈ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ.

33 ಜೀವಾವಧಿ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 33 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪೈಕಿ ಇಬ್ಬರು ಶಿಕ್ಷಾ ಬಂಧಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಬಿಡುಗಡೆ ಮಾಡಲು ನಿರ್ಣಯ ಮಾಡಿದೆ.

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಮೀನು

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಲ್ಲುಕೋಟೆ ಗ್ರಾಮದ ಸ.ನಂ.49 ರಲ್ಲಿ 7/2 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ʼಕಾಂಗ್ರೆಸ್ ಭವನ ಟ್ರಸ್ಟ್‌, ಬೆಂಗಳೂರುʼ ಇವರಿಗೆ ಮಂಜೂರು ಮಾಡಲು ನಿರ್ಣಯಿಸಲಾಯಿತು. ಅದೇ ರೀತಿ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಸಿರವಾರ ಸೀಮಾದ 2.2.39// ರಲ್ಲಿ 10 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣದ ಉದ್ದೇಶಕ್ಕಾಗಿ "ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು” ಇವರಿಗೆ ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯ ಮಾಡಿದೆ.

ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು

  • ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL), ಬೆಂಗಳೂರು ಸಂಕೀರ್ಣಕ್ಕೆ ಸಾಬೂನು ತಯಾರಿಸುವ ಯಂತ್ರವನ್ನು ರೂ. 17.70 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ.
  • ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 50 TPD Bio CNG ಘಟಕವನ್ನು ರೂ.24.96 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸುವ ಯೋಜನೆಯನ್ನು ಕೈಬಿಟ್ಟು, ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು GAIL ಸಂಸ್ಥೆಯವರು ಕೋಲಾರದಲ್ಲಿ ಸ್ಥಾಪಿಸುತ್ತಿರುವ 150 TPD CBG ಘಟಕಕ್ಕೆ ಪೂರೈಸುವ ಬಗ್ಗೆ ಸಚಿವ ಸಂಪುಟ ಅನುಮೋದನೆ.
  • ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ರೂ. 50.00 ಕೋಟಿಗಳ ಮೊತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ.
  • ಕಲಬುರಗಿಯಲ್ಲಿ ರೂ.10.00 ಕೋಟಿಗಳ ಮೊತ್ತದಲ್ಲಿ ಪ್ರಾದೇಶಿಕ ಸಹಕಾರ ಭವನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • PM-ABHIM ಯೋಜನೆಯಡಿ 2024-2026ನೇ ಸಾಲಿನಲ್ಲಿ ರಾಜ್ಯಾದ್ಯಂತ 196 SC-AAM (Rural Health and Wellness Centre) ಗಳನ್ನು ರೂ. 127.40 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ದಿನಾಂಕ: 31.12.2025 ರಂದು ಸರ್ಕಾರಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
  • ಬೆಂಗಳೂರಿನ ಜಯನಗರದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 2ನೇ ಹಂತದ ಕಟ್ಟಡ ಕಾಮಗಾರಿಯನ್ನು ರೂ.24.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಹೊಳೆನರಸೀಪುರ ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 12.30 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ.
  • ಭಾರತಿ ಎಜುಕೇಷನ್ ಟ್ರಸ್ಟ್(ರಿ) ಇವರಿಗೆ ಮಂಜೂರು ಮಾಡಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದ 2.0.26 ರಲ್ಲಿ 17-06 ಎಕರೆ/ಗುಂಟೆ ಜಮೀನಿಗೆ ವಿಧಿಸಿರುವ ಮೊತ್ತವನ್ನು ಪರಿಷ್ಕರಿಸಲು ಸಚಿವ ಸಂಪುಟ ಒಪ್ಪಿಗೆ.
  • ಚಾಮರಾಜನಗರ ಜಿಲ್ಲೆಯ ಹಾಗೂ ತಾಲ್ಲೂಕಿನ 166 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾಮಗಾರಿಯನ್ನು ರೂ. 33.04 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳ ಹಾಗೂ ಮಾರ್ಗ ಮಧ್ಯದ 32 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾಮಗಾರಿಯನ್ನು ರೂ. 27.38 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸರಪಾಡಿ ಮತ್ತು ಇತರೆ 95 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾಮಗಾರಿಯನ್ನು ರೂ. 16.70 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಕಲಬುರಗಿ ಜಿಲ್ಲೆಯ ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ GTTC ಕೇಂದ್ರವನ್ನು ಬಹುಕೌಶಲ್ಯಾಭಿವೃದ್ಧಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (KKRDB) ಅನುದಾನದಿಂದ ಎರಡನೇ ಹಂತದಲ್ಲಿ ರೂ.66.75 ಕೋಟಿಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
  • ಹಳಿಯಾಳ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ ನಿರ್ಮಿಸಲಾಗಿರುವ ವಿವಿಧ ಘಟಕಗಳ 5 ವರ್ಷಗಳ ನಿರ್ವಹಣೆ ಮತ್ತು ದುರಸ್ಥಿ ಕಾಮಗಾರಿಯನ್ನು ರೂ.10.60 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • "ಅಕ್ಕ ಪಡೆ" ಯೋಜನೆಯನ್ನು ಒಳಾಡಳಿತ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ 31 ಜಿಲ್ಲೆ ಹಾಗೂ 05 ಪೊಲೀಸ್ ಆಯುಕ್ತಾಲಯಗಳಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.
  • "ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸ್ಥಾಪನೆ ಹಾಗೂ ಸಂಘದ ಉಪವಿಧಿಗಳಿಗೆ ಅನುಮೋದನೆ ನೀಡುವ ಬಗ್ಗೆ.
  • ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ದುಬ್ಬನಶಶಿಯ ಮತ್ತು ಗಂಗೆಕೊಳ್ಳದ ಕಡಲ ತೀರದಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಯ ರೂ.11.03 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ.
  • ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕು, ಬಾಳೆಪುಣಿ ಗ್ರಾಮದ ಸ.ನಂ. 87/4ರಲ್ಲಿ 5-00 ಎಕರೆ ಜಮೀನನ್ನು ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ ಇವರಿಗೆ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ರಾವುತ್ತನಹಳ್ಳಿ ಗ್ರಾಮದ ಸ.ನಂ. 57 ಮತ್ತು 58ರಲ್ಲಿನ ಜಮೀನನ್ನು ದಲಿತ ಹಾಗೂ ಹಿಂದುಳಿದ ವರ್ಗಗಳ 22 ಮಠಗಳಿಗೆ ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು, ಸಂಪಾಜೆ ಹೋಬಳಿ, ಮದೆ ಗ್ರಾಮದ ಸ.ನಂ. 98/1 ರಲ್ಲಿನ 2.00 ಅಥವಾ 3.00 ಎಕರೆ ಜಮೀನನ್ನು ಅರೆಭಾಷಿಕ ಗೌಡ ಜನಾಂಗಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆ ಉದ್ದೇಶಕ್ಕೆ "ಕೊಡಗು ಗೌಡ ಸಮಾಜ(ರಿ)" ಇವರಿಗೆ ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಬಾರ್ಡ್ ಸಹಯೋಗದಲ್ಲಿ ರೂ.20 ಕೋಟಿಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಚಿಕ್ಕಬಳ್ಳಾಪುರ ಇಲ್ಲಿನ ನೂತನ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಯಂತ್ರೋಪಕರಣ ಮತ್ತು ಪೀಠೋಪಕರಣಗಳನ್ನು ರೂ. 40 ಕೋಟಿ ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ .
  • ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮಾ ಗಾಂಧಿ, ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಜವಾಹರಲಾಲ್ ನೆಹರೂ ಮತ್ತು ಶ್ರೀ ರಾಜೀವ್ ಗಾಂಧಿ ಇವರ ಪುತ್ಥಳಿಗಳನ್ನು ಸ್ಥಾಪಿಸಲು ಸಚಿವ ಸಂಪುಟ ನಿರ್ಧರಿಸಿದೆ.
  • ನಬಾರ್ಡ್ ಪ್ರಾಯೋಜಿತ ಆರ್.ಐ.ಡಿ.ಎಫ್ ಟ್ರಾಂಚ್ 31ರಡಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ಇಲ್ಲಿ ಆಡಳಿತ ಭವನ ನಿರ್ಮಾಣದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲು ಅನುಮೋದನೆಯಾಗಿರುವ ರೂ.70.70 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.