ಬೆಂಗಳೂರು: ಪಡಿತರದಾರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಬಳಿ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ʼಅನ್ನ ಸೇವೆʼ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ.
ʼಅನ್ನಸೇವೆʼ ಆ್ಯಪ್ ಅನ್ನು ಮೊದಲ ಹಂತದಲ್ಲಿ ಪೈಲೆಟ್ ಯೋಜನೆಯಡಿ ರಾಜ್ಯದ 8 ಜಿಲ್ಲೆಗಳಲ್ಲಿ ಮಾತ್ರ ಲಾಂಚ್ ಮಾಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಯ ಜನರು ಈ ಆ್ಯಪ್ ಬಳಸಬಹುದಾಗಿದ್ದು, 20 ದಿನದ ಬಳಿಕ ಅಧಿಕೃತವಾಗಿ ಉಳಿದ ಎಲ್ಲಾ ಜಿಲ್ಲೆಗೆ ಈ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಶಿವಾಜಿನಗರದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಇಂದು ‘ಅನ್ನ ಸೇವಾ’ ಇ-ಕೆವೈಸಿ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಲಾಯಿತು. ಇದು ರಾಜ್ಯದ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪೈಲೆಟ್ ಹಂತದ ಕಾರ್ಯಾರಂಭವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಿಲ್ಲವೆ? ಇಲ್ಲಿದೆ ಗುಡ್‌ನ್ಯೂಸ್; ದಿನಾಂಕ ವಿಸ್ತರಿಸಿದ ಸರ್ಕಾರ
ಫಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ, ಪಡಿತರ ಸೇವೆಗಳಲ್ಲಿ ತಂತ್ರಜ್ಞಾನ, ಪಾರದರ್ಶಕತೆ ಮತ್ತು ವೇಗವನ್ನು ಮತ್ತಷ್ಟು ಹೆಚ್ಚಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಪಡಿತರ ಸೇವೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.