ಬೆಂಗಳೂರು, ಅಕ್ಟೋಬರ್ 31: ಮಂಡ್ಯದಲ್ಲಿ ಕೇಂದ್ರ ಸರಕಾರದ ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ವತಿಯಿಂದ ಸ್ಥಾಪಿಸಲು ಪ್ರಸ್ತಾಪಿಸಲಾಗಿರುವ 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' (CIE test centre) ಹಾಗೂ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' (EV test centre) ಸ್ಥಾಪನೆಗಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ನೀಡಿರುವ ಹೇಳಿಕೆ ಸುಳ್ಳು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ಅವರ ಕಚೇರಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಆ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಇ-ಮೇಲ್ ಮಾಡಲಾಗಿದೆ.
ಮಂಡ್ಯದಲ್ಲಿ ಶನಿವಾರ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ಸಿಎಂ ಅವರ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರು ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಜಿಲ್ಲೆಯ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 100 ಎಕರೆ ಜಾಗವನ್ನು ARAI ಸಂಸ್ಥೆಗೆ ಈಗಾಗಲೇ ಭೂಮಿ ನೀಡಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದಲ್ಲದೆ, ಸಾರ್ವಜನಿಕ ಸಭೆಯಲ್ಲಿಯೂ ಅದೇ ವಿಚಾರವನ್ನು ಪುನರುಚ್ಚರಿಸಿ ಈಗಾಗಲೇ 100 ಎಕರೆ ನೀಡಿದ್ದೇವೆ. ಇನ್ನೂ 500 ಎಕರೆ ಜಮೀನು ಬೇಕಾದರೂ ನೀಡುವುದಾಗಿ ಘೋಷಣೆ ಮಾಡಿರುತ್ತಾರೆ. ಸಚಿವರ ಹೇಳಿಕೆ ಸಂಪೂರ್ಣ ಸುಳ್ಳು. ಜನತೆಗೆ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ARAI ಸಂಸ್ಥೆಗೆ 100 ಎಕರೆ ಭೂಮಿ ಮಂಜೂರು ಮಾಡಿರುವ ಬಗ್ಗೆ ರಾಜ್ಯ ಸರ್ಕಾರದಿಂದಾಗಲೀ ಹಾಗೂ ಜಿಲ್ಲಾಡಳಿತದಿಂದ ಆಗಲಿ ಅಥವಾ ಸಂಬಂಧಿತ ARAI ಸಂಸ್ಥೆಗೆ ಹಾಗೂ ಕೇಂದ್ರ ಸಚಿವರ ಕಚೇರಿಗೆ ಯಾವುದೇ ಮಾಹಿತಿ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿರುತ್ತದೆ. ಆದುದರಿಂದ ಮಂಡ್ಯ ಜಿಲ್ಲಾಡಳಿತದಿಂದ ಕೂಡಲೇ ಈ ಕೆಳಕಂಡಂತೆ ಸ್ಪಷ್ಟೀಕರಣವನ್ನು ತುರ್ತಾಗಿ ಒದಗಿಸಿಕೊಡುವಂತೆ ತಮ್ಮನ್ನು ಕೋರಲು ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಿಂದ ನಿರ್ದೇಶಿತನಾಗಿದ್ದೇನೆ ಎಂದು ಅವರ ಕಾರ್ಯದರ್ಶಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿ ಹಾಗೂ ಸಾರ್ವಜನಿಕ ಸಭೆಯಲ್ಲಿ ARAI ಸಂಸ್ಥೆಗೆ 100 ಎಕರೆ ಭೂಮಿ ಮಂಜೂರು ಮಾಡಿದ್ದೇವೆ ಅಥವಾ ಕೊಟ್ಟಿದ್ದೇವೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಭೂಮಿ ಮಂಜೂರು ಮಾಡಿರುವ ಬಗ್ಗೆ ಮಂಜೂರಾತಿ ಆದೇಶದ ಪತ್ರದ ಪ್ರತಿಯನ್ನು ARAI ಸಂಸ್ಥೆಗೆ 100 ಎಕರೆ ಭೂಮಿಯನ್ನು ಮಂಡ್ಯ ಜಿಲ್ಲಾಡಳಿತದಿಂದ ಕೊಟ್ಟಿದ್ದಲ್ಲಿ, ಭೂಮಿ ನೀಡಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
ಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಪಡೆದ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್ ಜೋಶಿ ಆಕ್ರೋಶ
ARAI ಸಂಸ್ಥೆಗೆ 100 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ಬಗ್ಗೆ ಮಂಡ್ಯ ಜಿಲ್ಲಾಡಳಿತದಿಂದ ARAI ಸಂಸ್ಥೆಗೂ ಹಾಗೂ ಕೇಂದ್ರ ಸಚಿವರಿಗೆ ಹಾಗೂ ಸಚಿವರ ಕಚೇರಿಗೆ ಮಾಹಿತಿ ನೀಡದಿರಲು ಕಾರಣಗಳೇನು? ಎಂದು ಸಚಿವ ಕುಮಾರಸ್ವಾಮಿ ಅವರ ಕಾರ್ಯದರ್ಶಿ ಕೆ.ಆರ್. ರಘುಕುಮಾರ್ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.