ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Electricity Price Hike: ರಾಜ್ಯದ ಜನರಿಗೆ ವಿದ್ಯುತ್‌ ದರ ಏರಿಕೆ ಶಾಕ್‌ ನೀಡಿದ ಸರ್ಕಾರ; ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ!

ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' ಪ್ರಕ್ರಿಯೆಯಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿರು ಬಿಸಿಲಿನಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಮತ್ತೊಂದು ದರ ಏರಿಕೆಯ ಶಾಕ್‌ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ದರ ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಈ ಹೊಸ ಆದೇಶದನ್ವಯ ಗ್ರಾಹಕರಿಗೆ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆ ಬೀಳಲಿದೆ.

ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' (True up Charges) ಪ್ರಕ್ರಿಯೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿತ್ತು. ಆದರೆ, ವಾಸ್ತವದಲ್ಲಿ ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿಗಳು ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ.

ಈ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್‌ಸಿ, ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.

ಗೃಹ ಬಳಕೆ ವಿದ್ಯುತ್‌ ಅನ್ಯ ಉದ್ದೇಶಗಳಿಗೆ ಬಳಸಿದ್ರೆ ಬೀಳುತ್ತೆ ಕೇಸ್‌: ಬೆಸ್ಕಾಂ ಎಚ್ಚರಿಕೆ

ಹೊಸ ದರ ಯಾವಾಗಿನಿಂದ ಜಾರಿ?

ಕೆಇಆರ್‌ಸಿಯ ಈ ಆದೇಶವು ಏಪ್ರಿಲ್ 17, 2026 ರಂದು ಹೊರಬಿದ್ದಿದ್ದು, ಪರಿಷ್ಕೃತ ದರವು 2026 ರ ಮೇ 1 ರಿಂದ ಜಾರಿಗೆ ಬರಲಿದೆ. ಅಂದರೆ, ಮೇ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್‌ಗಳಲ್ಲಿ ಗ್ರಾಹಕರು ಪ್ರತಿ ಯೂನಿಟ್‌ಗೆ ಹೆಚ್ಚುವರಿ 56 ಪೈಸೆ ಪಾವತಿಸಬೇಕಾಗುತ್ತದೆ. ಈ ವಸೂಲಾತಿಯು 2026-27ರ ಇಡೀ ಆರ್ಥಿಕ ವರ್ಷದಲ್ಲಿ ಅನ್ವಯವಾಗಲಿದ್ದು, ಏಪ್ರಿಲ್ 30, 2027 ರವರೆಗೆ ಮುಂದುವರಿಯಲಿದೆ. ವಿದ್ಯುತ್‌ ದರ ಏರಿಕೆಯಿಂದ ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ.