ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Stampede: ಬೆಂಗಳೂರು ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಎಚ್‌ಡಿಕೆ ವಾಗ್ದಾಳಿ

H.D. Kumaraswamy: ʼಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ. 4ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸರ್ಕಾರವೇ ನೇರ ಹೊಣೆ. ತಕ್ಷಣವೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ʼʼಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ. 4ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸರ್ಕಾರವೇ (Bengaluru Stampede) ನೇರ ಹೊಣೆ. ಕಾಂಗ್ರೆಸ್ ಹೈಕಮಾಂಡ್‌ಗೆ ಮಾನ ಮರ್ಯಾದೆ, ಕನ್ನಡಿಗರ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಕಿತ್ತೆಸೆಯಬೇಕುʼʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ಆಗ್ರಹಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್‌ಡಿಎ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

ʼʼದುರಂತಕ್ಕೆ ಮುಖ್ಯಮಂತ್ರಿ ಮತ್ತವರ ಕಚೇರಿ ನೇರ ಕಾರಣ. ಎರಡು ಮೂರು ಕಡೆ ವಿಜಯೋತ್ಸವ ಮಾಡಲು ಸಾಧ್ಯವಿಲ್ಲ. ಭದ್ರತೆ ಕೊಡುವುದು ಕಷ್ಟ ಆಗುತ್ತದೆ ಎಂದು ಪೊಲೀಸರು ಪರಿಪರಿಯಾಗಿ ಹೇಳಿದರೂ ಕೇಳದೇ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ಪಟ್ಟು ಹಿಡಿದರು. ಅಲ್ಲದೆ ಪೊಲೀಸರಿಗೆ ತಾಕೀತು ಮಾಡಿ ಧಮ್ಕಿಯನ್ನು ಹಾಕಿದ್ದರುʼʼ ಎಂದು ಅವರು ವಾಗ್ದಾಳಿ ನಡೆಸಿದರು.



ರಾಜೀನಾಮೆ ಕೊಡಿ

ʼʼವಿಜಯೋತ್ಸವ ಆಚರಣೆಗೆ ಇದಕ್ಕೆ ಮೊದಲೇ ಆರ್‌ಸಿಬಿ ಪೊಲೀಸರ ಅನುಮತಿ ಕೇಳಿತ್ತು. ಆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು. ಹಾಗಿದ್ದರೂ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ತಾಕೀತು ಮಾಡಿದ್ದು ಯಾಕೆ? 11 ಜನರ ಸಾವಿಗೆ ಸಿಎಂ, ಡಿಸಿಎಂ ಹಾಗೂ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಕಾರಣ. ಮಾತೆತ್ತಿದರೆ ನಾವು ಜನರ ಪರ ಎಂದು ರಾಗ ತೆಗೆಯುವ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಇವರಿಂದ ರಾಜಿನಾಮೆ ಪಡೆಯಬೇಕು. ಮಾತೆತ್ತಿದರೆ ಸಿಎಂ ಗೋವಿಂದ...ಗೋವಿಂದ...ಎನ್ನುತ್ತಾರಲ್ಲ.. ಈ ದುರಂತಕ್ಕೆ ಮೂಲ ಪುರುಷನೇ ಆತ'' ಎಂದು ಎಚ್‌ಡಿಕೆ ಆರೋಪಿಸಿದರು.

ಕೆಟ್ಟ ಸಂದೇಶ

ʼʼತಪ್ಪು ಮಾಡಿದ್ದು ಸರ್ಕಾರ, ಶಿಕ್ಷೆಗೆ ಗುರಿಯಾಗಿದ್ದು ಅಧಿಕಾರಿಗಳು. ದಕ್ಷ ಪೊಲೀಸ್ ಆಯುಕ್ತ ದಯಾನಂದ್ ಅವರೂ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಸಂದೇಶ ನೀಡಿದೆʼʼ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ʼʼದಯಾನಂದ್ ಹೊಸ ವರ್ಷದ ಆಚರಣೆ, ಅನೇಕ ಕ್ರಿಕೆಟ್ ಪಂದ್ಯಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಅವರೇ ನಗರದ ಪೊಲೀಸ್ ಕಮೀಷನರ್ ಅಗಿದ್ದರು. ಹೊಸ ವರ್ಷದ ಹಿಂದಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಮಾಡಿದ್ದರು. ಅಂತಹ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಇವರು ಯಾವ ರೀತಿಯ ಸಂದೇಶ ನೀಡಿದ್ದಾರೆ?ʼʼ ಎಂದು ಅವರು ಪ್ರಶ್ನಿಸಿದರು.

ʼʼಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಎಂಬ ವ್ಯಕ್ತಿ ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣ. ಅವರ ಬಗ್ಗೆ ಏನೇನೋ ಕಥೆಗಳನ್ನು ಹೇಳುತ್ತಾರೆ. ಸುತ್ತಲೂ ಸಿಎಂ ಎಂತಹ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಪ್ರಶ್ನಾರ್ಹ. ರಾಜ್ಯದಲ್ಲಿ ಈ ಸರ್ಕಾರದ ಮಾನ ಮರ್ಯಾದೆ ಉಳಿಯಬೇಕು ಎನ್ನುವುದಾದರೆ ತಮ್ಮ ಸುತ್ತಮುತ್ತ ಇರುವ ಇಂತಹ ಕೆಟ್ಟ ಹುಳಗಳನ್ನು ಮೊದಲು ಕಿತ್ತು ಬಿಸಾಡಬೇಕುʼʼ ಎಂದು ಎಚ್‌ಡಿಕೆ ಹೇಳಿದರು.

ʼʼಕಾಂಗ್ರೆಸ್ ಹೈಕಮಾಂಡ್ ಎನ್ನುವುದು ಇದ್ದರೆ, ಅದಕ್ಕೆ ಸಂಕೋಚ ನಾಚಿಕೆ ಎನ್ನುವುದು ಇದ್ದರೆ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ತೆಗೆದು ಅವರ ಜಾಗಕ್ಕೆ ಸಭ್ಯರನ್ನು ತರಬೇಕು. ಕುಮಾರಸ್ವಾಮಿ ಮಾತಾಡಿದರೆ ಅಸೂಯೆ ಎಂದು ಟೀಕೆ ಮಾಡುತ್ತಾರೆ. ನಾನು ಮಂತ್ರಿ ಆಗಿದ್ದೇನೆ. ಪ್ರಧಾನಿ ಮೋದಿ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ದೂರದೃಷ್ಟಿ ಅನುಸಾರ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಅಸೂಯೆ ಎನ್ನುವುದು ಯಾಕೆ ಬರುತ್ತದೆʼʼ ಎಂದರು.

ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ

ʼʼಎಚ್‌ಎಂಟಿಗೆ ಕಾಯಕಲ್ಪ ‌ನೀಡಲು ಪ್ರಯತ್ನ ಮಾಡುತ್ತಿದ್ದೇನೆ. ವೈಝಾಗ್ ಸ್ಟೀಲ್ ನಂತರ, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸೇಲಂ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನ ಮಾಡುವ ಪ್ರಯತ್ನ ನಡೆಯುತ್ತಿದೆ. ಕುಮಾರಸ್ವಾಮಿ ಎಲ್ಲಿ ಎಚ್ಎಂಟಿಯನ್ನು ಉಳಿಸಿಬಿಡುತ್ತಾನೋ ಎಂದು ಆ ಕಾರ್ಖಾನೆಯ ಒಳಿತಿಗಾಗಿ ಪ್ರಯತ್ನಿಸಿದ ಐಎಫ್‌ಎಸ್ ಅಧಿಕಾರಿಯನ್ನು ಅಮಾನತು ಮಾಡಿದೆ ಈ ಸರ್ಕಾರ. ನನ್ನ ಅನುಭವದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ಎಂದು ನೋಡಿಲ್ಲ, ಇಂತಹ ಕೆಟ್ಟ ಮುಖ್ಯಮಂತ್ರಿಯನ್ನು ಎಂದೂ ಕಂಡಿಲ್ಲʼʼ ಎಂದು ಕಿಡಿ ಕಾರಿದರು.

ʼʼವರ್ಚಸ್ಸು ಹೆಚ್ಚಿಸಿಕೊಳ್ಳುವ, ಪ್ರಚಾರದ ಹಪಾಹಪಿಗೆ ಸಿಕ್ಕಿರುವ ಸಿಎಂ, ಡಿಸಿಎಂ ಇಬ್ಬರೂ ಈ ದುರ್ಘಟನೆಗೆ ಕಾರಣ. ಡಿಸಿಎಂ ಡಿ.ಕೆ.ಶಿವಕುಮಾರ್ ಶೋಡಲು ಹೋಗಿ ತಗುಲಿಕೊಂಡಿದ್ದಾರೆ. ಕೇಸಿನ ನಿಮಿತ್ತ ಅವರು ಕನಕಪುರದ ಕೋರ್ಟ್‌ನಲ್ಲಿದ್ದರು. ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರಿಗೆ ಬರುತ್ತಿದೆ. ತಂಡವನ್ನು ಸ್ವಾಗತಿಸಲು ಸಿಎಂ, ಮತ್ತವರ ಪಟಾಲಂ ಸಜ್ಜಾಗಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ತಂಡಕ್ಕೆ ಸನ್ಮಾನ ಮಾಡಲು ಸಿಎಂ ಟೀಮ್ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿಕೆಶಿಗೆ ಮಾಹಿತಿ ಹೋಗುತ್ತದೆ. ಇದರಿಂದ ಕೋರ್ಟ್ ನಲ್ಲಿಯೇ ಕಕ್ಕಾಬಿಕ್ಕಿಯಾದ ಡಿಕೆಶಿ, ಅಲ್ಲಿಂದಲೇ ನೇರವಾಗಿ ಕೈಯ್ಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆʼʼ ಎಂದು ಡಿಕೆಶಿ ತಿಳಿಸಿದರು.

ʼʼಕಪ್ ಗೆದ್ದವರು ಆಟಗಾರರು. ಅದರೇ ಡಿಕೆಶಿಗೆ ತಾನೇ ಕಪ್ ಗೆದ್ದಷ್ಟು ಉಮೇದು. ಅಲ್ಲಿಂದಲೇ ಕಪ್‌ಗೆ ಅವರಿಂದ ಮುತ್ತಿನ ಸುರಿಮಳೆ ಶುರುವಾಯಿತು. ಅಲ್ಲಿ ಡಿಸಿಎಂ ಅವರು ವಿರಾಟ್ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟರು. ಆದರೆ ಡಿಸಿಎಂ ಅವರು ಕನ್ನಡ ಶಾಲು ಹಾಕಿಕೊಳ್ಳದೆ ಕುತ್ತಿಗೆಯ ಸುತ್ತ ವಿದೇಶಿ ಮಫ್ಲರ್ ಹಾಕಿದ್ದರು. ಆದರೆ ಕೊಹ್ಲಿ ಪುನಾ ಆ ಕನ್ನಡ ಬಾವುಟವನ್ನು ಡಿಕೆಶಿಗೆ ವಾಪಸ್ಸು ಕೊಟ್ಟರು. ಇಷ್ಟೆಲ್ಲಾ ನಾಟಕ ಆಡುವ ಅಗತ್ಯ ಇದೆಯಾ?ʼʼ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ʼʼವಿಧಾನಸೌಧ ಮೆಟ್ಟಿಲು ಮೇಲಿನ ವೇದಿಕೆಯಲ್ಲಿ ನಡೆದ ವಿಜಯೋತ್ಸವ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು ಸೇರಿ ಕುಟುಂಬದ ಕಾರ್ಯಕ್ರಮ ಆಗಿತ್ತು. ಸನ್ ಗ್ಲಾಸ್ ಹಾಕಿಕೊಂಡು ಎಲ್ಲರೂ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ವೇದಿಕೆಯ ಮೇಲೆಯೇ ಡಿಕೆಶಿ ಒಬ್ಬರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಡಿದು ಆಚೆ ತಳ್ಳಿದರು. ಇದೆಲ್ಲಾ ಏನು? ಅಸಹ್ಯ ಅಲ್ಲವೇ?ʼʼ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಸಾವಿನ ನಡುವೆ ಸಿಎಂ, ಡಿಸಿಎಂ ಶೋಕಿ

ʼʼಕಾಲ್ತುಳಿತದಲ್ಲಿ ಮೊದಲ ಸಾವು ಅಪರಾಹ್ನ 3.10ಕ್ಕೆ ಸಂಭವಿಸಿದೆ. ಆದರೆ ಡಿ.ಕೆ.ಶಿವಕುಮಾರ್ ಮೈದಾನಕ್ಕೆ ಹೋಗಿ ಅಲ್ಲಿ ಕಪ್‌ಗೆ ಮುತ್ತಿಕ್ಕುತ್ತಿದ್ದರು. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿ ಜನಾರ್ದನ ಹೊಟೇಲ್‌ಗೆ ಮಸಾಲೆ ದೋಸೆ, ಹಲ್ವಾ ತಿನ್ನುತ್ತಿದ್ದರು. ಸತ್ಯಮೇವ ಜಯತೆ ಅಂತಾರೆ. ಕಂಡೋರ ಮಕ್ಕಳ ಸಾವು ಇವರಿಗೆ ಸತ್ಯಮೇವ ಜಯತೇಯೇ? ಇವರಿಗೆ ನಾಚಿಕೆ ಆಗಬೇಕು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಇವರಿಗೆ ಎಚ್ಚರವಾಗಿದೆʼʼ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ʼʼಕಾಂಗ್ರೆಸ್ ಸರ್ಕಾರ ಮಾಡುವ ಕೆಲಸ ಬಿಟ್ಟು ಜೆಡಿಎಸ್ಬಿ-ಜೆಪಿ ನಂಟು ಕಿತ್ತು ಹೋಗಲಿ ಎಂದು ಬಯಸುತ್ತಿದೆ. ಅದು ಎಂದಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹೊಂದಾಣಿಕೆ ಇದೆ. ಬಿಜೆಪಿ ಹಾಗೂ ಜೆಡಿಎಸ್ ಚೆನ್ನಾಗಿ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿವೆ. ಈ ಸರ್ಕಾರದ ಅದಕ್ಷತೆಯ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಎರಡು ಪಕ್ಷಗಳು ಕಾನೂನು ಹೋರಾಟ ಮಾಡುತ್ತೇವೆʼʼ ಎಂದು ಅವರು ಹೇಳಿದರು.

ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರವಿಕುಮಾರ್, ಶ್ರೀ ಹರೀಶ್ ಪೂಂಜಾ, ಮಾಜಿ ಶಾಸಕರಾದ ಎಚ್.ಎಂ.ರಮೇಶ್ ಗೌಡ ಚೌಡರೆಡ್ಡಿ ತೂಪಲ್ಲಿ ಉಪಸ್ಥಿತರಿದ್ದರು.

image

ಗೃಹ ಸಚಿವ ಜಿ.ಪರಮೇಶ್ವರ್ ಓರ್ವ ನಿಷ್ಕ್ರಿಯ ಸಚಿವರು. ಪಾಪ ಅವರು ಕೀಲುಗೊಂಬೆ ಇದ್ದಂತೆ. ಕೀ ಕೊಟ್ಟರೆ ಮಾತ್ರ ಮೇಲೆ ಏಳುತ್ತಾರೆ. ಇಲ್ಲವಾದರೆ ಇಲ್ಲ. ಅವರನ್ನು ನೋಡಿದರೆ ಪಾಪ ಎನಿಸುತ್ತದೆ ಎಂದು ಕುಟುಕಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಎಷ್ಟು ಜನ ಸೇರುತ್ತಾರೆ? ಎಂಬುದು ಸರಕಾರಕ್ಕೆ ಗೊತ್ತಿಲ್ಲವೇ? ಗುಪ್ತದಳ ಏನು ಮಾಡುತ್ತಿತ್ತು. ಈ ಘಟನೆಯಲ್ಲಿ ಇಂಟಲಿಜೆನ್ಸ್ ತಪ್ಪಿದೆ ಎಂದು ಸರ್ಕಾರ ಒಪ್ಪಿಕೊಂಡರೂ ಅದರ ಮುಖಸ್ಥರನ್ನು ಸಸ್ಪೆಂಡ್ ಮಾಡಿಲ್ಲ ಯಾಕೆ? ಅವರು ಪ್ರಭಾವಶಾಲಿ ಎಂದಾ? ಅಥವಾ ಹೈಕಮಾಂಡ್‌ಗೆ ಕೇಳಬೇಕಾ?

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

Ramesh Ballamoole

View all posts by this author