ಬೆಂಗಳೂರು: ಮಕ್ಕಳ ಸ್ಕೂಲ್ ಫೀಸ್ ಕಟ್ಟಲು 20 ಲಕ್ಷ ರೂಪಾಯಿ ಕಳ್ಳತನ (Theft case) ಮಾಡಿದ್ದ ಕಳ್ಳನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್ ಬಂಧಿತ ಕಳ್ಳ. ಹೆಂಡತಿ, ಮಕ್ಕಳಿಲ್ಲದ ಶಿವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ಏರಿಯಾದಲ್ಲಿ ಸ್ನೇಹಿತರ ಮಕ್ಕಳು ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಬಳಿಕ ಶಿವು ಬ್ಯಾಡರಹಳ್ಳಿ ಸೇರಿ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದು, ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ ಮತ್ತು ವಿವೇಕ್‌ನ ಸಹಾಯದಿಂದ ಮಾರಾಟ ಮಾಡಿದ್ದಾನೆ.
ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು, ಬಂದ ಹಣದಲ್ಲಿ ವಿವೇಕ್‌ಗೆ 4 ಲಕ್ಷ, ಅನಿಲ್‌ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜ್ ಫೀಸ್ ಕಟ್ಟಿದ್ದಾನೆ. ಮನೆಗಳ್ಳರ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗು ವಿವೇಕ್‌ನನ್ನು ಬಂಧಿಸಿದ ಪೊಲೀಸರು 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | CT Ravi: ಸಿಟಿ ರವಿಗೆ ರಿಲೀಫ್, ಸಚಿವೆಗೆ ನಿಂದನೆ ಪ್ರಕರಣ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
ಗೆಳತಿ ಜೊತೆ ಸಲಿಗೆಯ ಅನುಮಾನ, ವ್ಯಕ್ತಿಯ ಪೆಟ್ರೋಲ್ ಸುರಿದು ಸಜೀವ ದಹನ
ಬೆಂಗಳೂರು: ತನ್ನ ಗೆಳತಿಯೊಂದಿಗೆ ಅಕ್ರಮ ಸಂಬಂಧ (illicit relationship) ಹೊಂದಿದ್ದಾನೆಂದು ಅನುಮಾನಗೊಂಡು ವ್ಯಕ್ತಿಯೊಬ್ಬನನ್ನು ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಸಜೀವವಾಗಿ ದಹಿಸಿರುವ (burnt alive) ದಾರುಣ ಘಟನೆಯೊಂದು ಕಡುಬೀಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿ ಶುಕ್ರವಾರ (Murder case) ನಡೆದಿದೆ. ಮೃತ ವ್ಯಕ್ತಿಯನ್ನು ಇಜುಲ್ ಹಕ್ (25) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಡೆಲಿವರಿ ಏಜೆಂಟ್ ಆಗಿದ್ದ ಮುನಾವರ್ ಅಲಿ (22) ಎಂಬಾತನನ್ನು ಪೊಲೀಸರು ಬಂದನಕ್ಕೊಳಪಡಿಸಿದ್ದಾರೆ.
ಮೃತ ಇಜುಲ್ ಹಕ್ ಹಾಗೂ ಆರೋಪಿ ಅಲಿ ಇಬ್ಬರೂ ಅಸ್ಸಾಂ ಮೂಲದವರಾಗಿದ್ದಾರೆ. ಮೃತ ವ್ಯಕ್ತಿ ವಿವಾಹಿತನಾಗಿದ್ದು, 6 ತಿಂಗಳ ಹೆಣ್ಣು ಮಗುವಿದೆ. ಪತ್ನಿ ಹಾಗೂ ಮಗು ಅಸ್ಸಾಂನಲ್ಲೇ ವಾಸವಿದ್ದು, ಒಂದು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಸಲಾವುದ್ದೀನ್ ಎಂಬವರ ಶೆಡ್‌ನಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.
ಆರೋಪಿ ಅಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಹಕ್ ಅಕ್ರಮ ಸಂಬಂಧ ಹೊಂದಿದ್ದಾನೆಂದು ಅನುಮಾನಿಸಿದ್ದಾನೆ. ಇದರಂತೆ ಕಳೆದ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ವೇಳೆ ಹಕ್ ಅವರ ಇಬ್ಬರು ಸ್ನೇಹಿತರಾದ ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಬೆಂಬಲಕ್ಕೆ ಬಂದಿದ್ದು, ಈ ವೇಳೆ ಆರೋಪಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ, ಹೋಗಿದ್ದಾನೆ.
ಈ ನಡುವೆ ಶುಕ್ರವಾರ ಬೆಳಗಿನ ಜಾವ 3.30 ರಿಂದ 4.30 ರ ಸುಮಾರಿಗೆ ಶೆಡ್ ಬಳಿ ಬಂದಿರುವ ಆರೋಪಿ, ಗಾಢನಿದ್ರೆಗೆ ಜಾರಿದ್ದ ಇಜುಲ್ ಹಕ್, ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಘಟನೆ ವೇಳೆ ಹಕ್ ಅವರ ಸೋದರ ಮಾವ ರಶೀದುಲ್ ಹಕ್ ಶೆಡ್‌ನಿಂದ ದೂರದಲ್ಲಿ ಮಲಗಿದ್ದು, ಮೂವರ ಕೂಗಾಟ ಕೇಳಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಇಜುಲ್ ಹಕ್ ಸಾವನ್ನಪ್ಪಿದ್ದು, ಮತ್ತಿಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ವಾರ್ಡ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಗಾಯಗೊಂಡಿರುವ ಇಬ್ಬರ ಪೈಕಿ ಶಹನೂರ್ ಆನ್‌ಲೈನ್ ಡೆಲಿವರಿ ಬಾಯ್ ಆಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಇನ್ನು ಫರಿದುಲ್ ಕಳೆದ ಒಂದು ವರ್ಷದಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಘಟನೆ ಸಂಬಂಧ ಮಾರತಹಳ್ಳಿ ಪೊಲೀಸರು ಆರೋಪಿ ವಿರುದ್ಧ ಕೊಲೆ (ಬಿಎನ್‌ಎಸ್ 103) ಮತ್ತು ಕೊಲೆಯತ್ನ (ಬಿಎನ್‌ಎಸ್ 109) ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: Crime News: ಮಹಿಳೆಯ ಪ್ರೇಮಿಯಿಂದಲೇ ಆಕೆಯ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ