ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hate speech Bill: ಕರ್ನಾಟಕದ ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್‌; ಹೊಸ ಕಾನೂನಿಗೆ ಆಕ್ಷೇಪ

ಕರ್ನಾಟಕದ ದ್ವೇಷ ಭಾಷಣ ಮಸೂದೆಯಲ್ಲಿನ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು. ಹೀಗಾಗಿ ಹೊಸ ಕಾನೂನಿನ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ.

ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ಮಸೂದೆ 2025ಕ್ಕೆ ( Karnataka's hate speech bill) ಅಮಿತ್‌ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಬ್ರೇಕ್​​ ಹಾಕಿದೆ. ಈಗಿರುವ ಕಾನೂನು ವ್ಯವಸ್ಥೆಯೇ ಸಾಕಷ್ಟು ಸಮರ್ಪಕವಾಗಿದೆ. ಆ ಕಾರಣಕ್ಕೆ ಇಂತಹ ಹೊಸ ಕಾನೂನು ಅಗತ್ಯವಿದೆಯೇ ಎಂದು ಪ್ರಶ್ನಿಸಿ, ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯವು ಪತ್ರ ಬರೆದಿದೆ.

ಫೆಬ್ರವರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆಗೆ ಅನುಮೋದನೆ ನೀಡಲು ನಿರಾಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಗಾಗಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಕಠಿಣ ನಿಯಮಗಳನ್ನು ಒಳಗೊಂಡಿದ್ದ ಈ ಮಸೂದೆ ಪ್ರಕಾರ, ದ್ವೇಷ ಅಪರಾಧ ಅಥವಾ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸುವ ಅವಕಾಶವಿತ್ತು. ಮರು ಅಪರಾಧಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸುವ ಬಗ್ಗೆಯೂ ಮಸೂದೆಯಲ್ಲಿ ಸೇರಿಸಲಾಗಿತ್ತು.

ಗೃಹ ಸಚಿವಾಲಯ ಹೇಳಿದ್ದೇನು?

ಮೇ 12ರಂದು ಕಳುಹಿಸಿದ ಪತ್ರದಲ್ಲಿ ಗೃಹ ಸಚಿವಾಲಯ, ಮಸೂದೆಯಲ್ಲಿ ಪರಿಹರಿಸಲು ಯತ್ನಿಸಿರುವ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು. ಈ ಅಂಶಗಳ ಕಾರಣಕ್ಕೆ ಪ್ರಸ್ತಾವಿತ ಮಸೂದೆಯು ಈ ಹಂತದಲ್ಲಿ ಅಗತ್ಯವಿಲ್ಲವೆಂದು ಭಾವಿಸಲಾಗಿದೆ ಎಂದು ತಿಳಿಸಿದೆ.

ಈ ಮಸೂದೆಯಲ್ಲಿ ಉಲ್ಲೇಖಿಸಿರುವ ಎಲ್ಲ ಕಳವಳಗಳನ್ನು ಪರಿಹರಿಸಲು ಸದ್ಯ ಜಾರಿಯಲ್ಲಿರುವ ಕಾನೂನು ಚೌಕಟ್ಟು ಸಾಕು ಎಂದೂ ಗೃಹ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಈ ಪತ್ರವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ಇಲಾಖೆಯ ಕಾರ್ಯದರ್ಶಿಗೆ ಮೇ 12ರಂದು ಪತ್ರ ಬರೆದಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಕಾನೂನು ವಿಭಾಗ, 'ಪ್ರಸ್ತಾಪಿತ ಮಸೂದೆಯ ಕುರಿತಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳಲು, ಪತ್ರದಲ್ಲಿರುವ ಅಂಶಗಳ ಕುರಿತಂತೆ ಸ್ಪಷ್ಟಿಕರಣ ನೀಡಬೇಕು' ಎಂದು ತಿಳಿಸಿದೆ.

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ದಿನಾಂಕ ಘೋಷಣೆ; ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್​​

2025ರ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಲಾಗಿತ್ತು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್​​ ಹೆಚ್ಚಿನ ಚರ್ಚೆಗೆ ಅಥವಾ ಸದನ ಸಮಿತಿಗೆ ಒಪ್ಪದ ಹಿನ್ನೆಲೆ ವಿರೋಧ ಪಕ್ಷ ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದರು. ಜನವರಿಯಲ್ಲಿ ರಾಜ್ಯಪಾಲ ಗೆಹ್ಲೋಟ್ ಕೂಡ ಮಸೂದೆಯನ್ನು ಹಿಂದಿರುಗಿಸಿ, ಇದು ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಚರ್ಚೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.