ಬೆಂಗಳೂರು: ಮೈಸೂರು ದಸರಾ ಉತ್ಸವದಲ್ಲಿ (Mysuru Dasara 2026) ಕಂಬಳ ಆಯೋಜನೆಗೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು (Kambala) ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕ. ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು.
ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮ. ಇಂಥ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ ಎನ್ನುವುದು ನನ್ನ ಭಾವನೆ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್; ಅ.11ಕ್ಕೆ ನಾಡಹಬ್ಬ ಉದ್ಘಾಟನೆ
ಕಂಬಳಕ್ಕೆ ಯದುವೀರ್ ಒಡೆಯರ್ ಆಕ್ಷೇಪ
ಕರಾವಳಿಯ ಕಂಬಳವನ್ನು ಮೈಸೂರು ದಸರಾದಲ್ಲಿ ಆಯೋಜನೆ ಮಾಡುವ ವಿಚಾರವಾಗಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದರು. ಕಂಬಳ ಕ್ರೀಡೆಗೆ ತನ್ನದೇ ಆದ ಹಿನ್ನೆಲೆ ಹಾಗೂ ಗೌರವವಿದೆ. ಮೈಸೂರು ದಸರಾ ಧಾರ್ಮಿಕವಾದ ಆಚರಣೆಯಾಗಿದೆ. ಹಾಗಾಗಿ ಇಲ್ಲಿ ಕಂಬಳ ಆಚರಣೆ ಬೇಡ. ಕಂಬಳ ಕರಾವಳಿಯ ಸಂಸ್ಕೃತಿ, ಅಲ್ಲಿನ ಸಂಸ್ಕೃತಿಗಳು ಅಲ್ಲಲ್ಲಿಯೇ ಆಚರಣೆ ಆಗಬೇಕು. ಮೈಸೂರಿಗೆ ಕಂಬಳ ಸಂಸ್ಕೃತಿಯನ್ನು ಹೇರುವುದು ಬೇಡ ಎಂದಿದ್ದರು. ಇದೀಗ ಕೇಂದ್ರ ಸಚಿವ ಎಚ್‌ಡಿಕೆ ಕುಮಾರಸ್ವಾಮಿ ಅವರು ಕೂಡ ಇವರ ಮಾತಿಗೆ ಸಹಮತ ಸೂಚಿಸಿದ್ದಾರೆ.