ಬೆಂಗಳೂರು: 2020ರ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಯನ್ನು ಹತ್ಯೆ (Murder Case) ಮಾಡಿದ ಆರೋಪದಲ್ಲಿ ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಇರ್ಫಾನ್ ಖಾನ್ ಎಂಬ ವ್ಯಕ್ತಿಯನ್ನು ಏಪ್ರಿಲ್ 22 ರಂದು ಎಚ್‌ಬಿಆರ್ ಲೇಔಟ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ವ್ಯಕ್ತಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯ ಪತ್ನಿಯೊಂದಿಗೆ ಸಂಬಂಧ ಹೊಂದಿ, ಆಕೆಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿ ಉಮರ್‌ನಗರ ನಿವಾಸಿಗಳಾದ ಮೊಹಮ್ಮದ್ ಓವೈಸ್ (48), ಮೊಹಮ್ಮದ್ ಹನೀಫ್ (34) ಮತ್ತು ರಶಾದ್‌ನಗರದ ಅಬ್ದುಲ್ ಅಲೀಮ್ (37) ಸೇರಿ ಮೂವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಇವರು ಎಸ್‌ಡಿಪಿಐ ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮೂವರು ಈ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೂ ನಂಟು ಹೊಂದಿದ್ದರು ಎಂದು ಹೇಳಲಾಗಿದೆ. ಇವರು ಬೇರೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಗಲಭೆ ಪ್ರಕರಣದಲ್ಲಿ ಹತ್ಯೆಯಾದ ಇರ್ಫಾನ್ ಖಾನ್ ಹಾಗೂ ನಾಗವಾರದ ಅಬ್ಬಾಸ್‌ನನ್ನು ಎನ್ಐಎ ಬಂಧನಕ್ಕೊಳಪಡಿಸಿತ್ತು. ಇಬ್ಬರೂ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದು, ಜೈಲಿಗೆ ಹೋದ ಬಳಿಕ ಆಪ್ತರಾಗಿದ್ದರು. ಈ ನಡುವೆ ಇರ್ಫಾನ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದು, ಅಬ್ಬಾಸ್ ಇನ್ನೂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿಯೇ ಸೆರೆವಾಸ ಅನುಭವಿಸುತ್ತಿದ್ದಾನೆ.
ಈ ಸುದ್ದಿಯನ್ನೂ ಓದಿ | Ranya Rao Case: ಗೋಲ್ಡ್ ಲೇಡಿ ರನ್ಯಾ ವಿರುದ್ಧ ಕೋಫೆಪೋಸಾ ಕೇಸು, ಇನ್ನೊಂದು ವರ್ಷ ಅಂದರ್
ಜೈಲಿನಿಂದ ಹೊರಬಂದ ಇರ್ಫಾನ್, ಅಬ್ಬಾಸ್ ಪತ್ನಿಗೆ ಹತ್ತಿರವಾಗಿ, ಆಕೆಯ ಪತಿಗೆ ವಿಚ್ಛೇದನ ನೀಡುವಂತೆ ಮಾಡಿದ್ದೇನೆ. ಬಳಿಕ ಆಕೆಯನ್ನು ವಿವಾಹವಾಗಿದ್ದಾನೆ ಎನ್ನಲಾಗಿದೆ. ಈ ನಡುವೆ ಇವರಿಬ್ಬರ ನಡುವಿನ ಸಂಬಂಧವನ್ನು ಕೊನೆಗೊಳಿಸಲು ಅಬ್ಬಾಸ್ ಸಾಕಷ್ಟು ಯತ್ನ ನಡೆಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ನಾಗವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ತನ್ನ ಸಹಚರರ ಮೂಲಕ ಇರ್ಫಾನ್‌ಗೆ ಬೆದರಿಸಲು ಪ್ರಯತ್ನಿಸಿದ್ದಾನೆ. ಆದರೆ, ಪ್ರಯೋಜನವಾಗದ ಹಿನ್ನೆಲೆ ಹತ್ಯೆ ಮಾಡಲು ಮೂವರಿಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದುಂದಿದೆ. ಅದರಂತೆ ಆಟೋದಲ್ಲಿ ಬಂದ ಆರೋಪಿಗಳು ಇರ್ಫಾನ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಅಗತ್ಯವಿದ್ದರೆ ಅಬ್ಬಾಸ್‌ನನ್ನು ವಶಕ್ಕೆ ಪಡೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಡಿ ದೇವರಾಜ ತಿಳಿಸಿದ್ದಾರೆ.