ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ವಿಡಿಯೊ ಹಂಚಿಕೆ ಪ್ರಕರಣಕ್ಕೆ (Karnataka sting operation) ಸಂಬಂಧಿಸಿ ಇಬ್ಬರು ಶಂಕಿತರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿ, ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ (Siddaramaiah) ಅವರು ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸ್ಟಿಂಗ್ ಆಪರೇಷನ್ ವಿಡಿಯೊ ವದಂತಿ ಬೆನ್ನಲ್ಲೇ ನ್ಯಾಯಾಲಯದ ಮೊರೆಹೋಗಿ ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ ಸಿದ್ದರಾಮಯ್ಯ ಪ್ರತಿಬಂಧಕಾದೇಶ ತಂದಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಸೂಚನೆಯಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಈಗಾಗಲೇ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಜತೆಗೆ ಸುಳ್ಳು ಮಾಹಿತಿ ಹರಡುತ್ತಿದ್ದ ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳ ಐಪಿ ವಿವರಗಳನ್ನೂ ಒದಗಿಸಿದ್ದರು. ಈ ಬೆನ್ನಲ್ಲೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಕ್ಷೇಪಾರ್ಹ ವಿಡಿಯೊ ಪ್ರಕಟಿಸದಂತೆ ನಿರ್ಬಂಧ ವಿಧಿಸಲು ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಸಂಜೆ ಪುರಸ್ಕರಿಸಿರುವ ಸೆಷನ್ಸ್ ನ್ಯಾಯಾಲಯ, 42 ಮಾಧ್ಯಮಗಳಿಗೆ ತಾತ್ಕಾಲಿಕ ಪ್ರತಿಬಂಧಕಾಜ್ಞೆ ವಿಧಿಸಿತ್ತು. ನ್ಯಾಯಾಲಯದ ಆದೇಶ ಹೊರ ಬಿದ್ದ ಬೆನ್ನಲ್ಲೆ ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ವಿಡಿಯೋ ಡಿಲೀಟ್ ಮಾಡಲಾಗಿದೆ.