ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಉಮರ್ ಖಾಲಿದ್​​ ದೇಶಪ್ರೇಮಿʼʼ: ವಿವಾದದ ಕಿಡಿ ಹೊತ್ತಿಸಿದ ಬಿ.ಕೆ. ಹರಿಪ್ರಸಾದ್​​

B.K. Hariprasad: ಜೈಲಿನಲ್ಲಿರುವ ಉಮರ್ ಖಾಲಿದ್ ದೇಶಪ್ರೇಮಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದು, ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ʼʼನಾನು ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ಅದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿ.ಕೆ. ಹರಿಪ್ರಸಾದ್‌ ಮತ್ತು ಉಮರ್‌ ಖಾಲಿದ್‌ (ಸಂಗ್ರಹ ಚಿತ್ರ)

ಬೆಂಗಳೂರು, ಸೆ. 17: ʼʼನಾನು ಉಮರ್ ಖಾಲಿದ್ (Umar Khalid) ಅವರನ್ನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ಅದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲʼʼ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (Hariprasad B.K.) ಸಮರ್ಥಿಸಿಕೊಂಡ ರೀತಿ ಇದು. ಎನ್‌ಎಲ್‌ಎಸ್‌ಐ ವಿಶ್ವವಿದ್ಯಾನಿಲಯದಲ್ಲಿ ಉಮರ್ ಖಾಲಿದ್ ಕುರಿತ ಡಾಕ್ಯುಮೆಂಟರಿ ಪ್ರದರ್ಶನ ಬಗ್ಗೆ ವಿವಾದ ಭುಗಿಲೆದ್ದ ಹಿನ್ನೆಲೆಯಲಲಿ ಪತ್ರಕರ್ತರೊಂದಿಗೆ ಮಾತನಾಡಿದ್ದ ಹರಿಪ್ರಸಾದ್‌ ಖಾಲಿದ್ ಒಬ್ಬ ‘ದೇಶಪ್ರೇಮಿ’ ಎಂದು ಬಣ್ಣಿಸಿದ್ದರು. ಇದೀಗ ಎಕ್ಸ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ್ದ ಹರಿಪ್ರಸಾದ್‌, ʼʼಉಮರ್ ಖಾಲಿದ್ ರಾಷ್ಟ್ರೀಯವಾದಿ. ಎಬಿವಿಪಿಗೆ ಉಮರ್ ಖಾಲಿದ್ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಎಬಿವಿಪಿ ನಾಥೂರಾಮ್ ಗೋಡ್ಸೆಯನ್ನು ಆರಾಧಿಸುತ್ತದೆ. ನಾಥೂರಾಮ್ ಗೋಡ್ಸೆ ದೇಶ ವಿರೋಧಿ. ಉಮರ್ ಖಾಲಿದ್ ಬಗ್ಗೆ ಮಾತನಾಡಲು ಎವಿವಿಪಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ಉಮರ್ ಖಾಲಿದ್​​ ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳುʼʼ ಎಂದಿದ್ದರು.

ಬಿ.ಕೆ. ಹರಿಪ್ರಸಾದ್ ಅವರ ಎಕ್ಸ್‌ ಪೋಸ್ಟ್‌:



ಸಮರ್ಥನೆ

ಇದೀಗ ಈ ಬಗ್ಗೆ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ. ʼʼನಾನು ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ಅದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ. ಯಾರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಅವರನ್ನು ನ್ಯಾಯಾಲಯದಲ್ಲಿ ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವ ನ್ಯಾಯಾಲಯ ಖಾಲೀದ್ ನನ್ನು ದೇಶದ್ರೋಹಿ ಎಂದಿದೆ? ಆರು ವರ್ಷಗಳ ಕಾಲ ವಿಚಾರಣೆ ನಡೆಸದೆ ಯಾಕೆ ಮೀನಾಮೇಷ ಎಣಿಸುತ್ತಿದೆ? ಆರೋಪ ಮತ್ತು ಅಪರಾಧ ಸಾಬೀತಾಗಿರುವುದು ಒಂದೇ ಅಲ್ಲ. ಈ ಸರಳ ಕಾನೂನು ತತ್ವವನ್ನು ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳದೆ ತಮ್ಮ ಅವಿವೇಕಿತನವನ್ನ ಪ್ರದರ್ಶನ ಮಾಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ʼʼನೇಣು ಹಾಕಿದ್ರೂ ʼವಂದೇ ಮಾತರಂʼ ಹಾಡೋದು 2 ಪ್ಯಾರಾ ಮಾತ್ರʼʼ: ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಿದ ಬಿ.ಕೆ. ಹರಿಪ್ರಸಾದ್‌

ಮುಂದುವರಿದು, ʼʼದೇಶಪ್ರೇಮದ ಸರ್ಟಿಫಿಕೇಟ್ ನೀಡುವ ಅಧಿಕಾರವನ್ನು ಬಿಜೆಪಿಗೆ ಯಾರೂ ಕೊಟ್ಟಿಲ್ಲ. ದೇಶಪ್ರೇಮ ಎಂದರೆ ಬಿಜೆಪಿಯನ್ನು ಬೆಂಬಲಿಸುವುದು ಅಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದ ಪರ ನಿಲ್ಲುವುದೂ ದೇಶಪ್ರೇಮವೇ. ಸ್ವತಂತ್ರ ಹೋರಾಟ, ಸಂವಿಧಾನ,ತ್ರಿವರ್ಣ ಧ್ವಜ, ರಾಷ್ಟ್ರಗೀತೆಯನ್ನು ವಿರೋಧ ಮಾಡಿದವರಿಂದ ದೇಶಪ್ರೇಮದ ಪಾಠ ಹೇಳಿಸಿಕೊಳ್ಳುವ ದಾರಿದ್ರ್ಯ ನನಗಂತೂ ಬರುವುದಿಲ್ಲʼʼ ಎಂದಿದ್ದಾರೆ.

ʼʼಉಮರ್ ಖಾಲಿದ್ ಆರ್‌ಎಸ್‌ಎಸ್‌ನಂತೆ ಪಾಕಿಸ್ತಾನದ ಜತೆ ಗುಪ್ತ ಚರ್ಚೆ ನಡೆಸಿಲ್ಲ. ಸಂಘ ಪರಿವಾರದವರಂತೆ ಐಎಸ್ಐ ಏಜೆಂಟ್‌ಗಳ ಜತೆ ಮಾತುಕತೆಯನ್ನೂ ನಡೆಸಿಲ್ಲ. ಕನಿಷ್ಠ ಪಕ್ಷ ಆಮಂತ್ರಣವೇ ಇಲ್ಲದ ಪಾಕ್ ಪ್ರಧಾನಿಯ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿ ಬಿರಿಯಾನಿ ತಿಂದಿಲ್ಲ. ದೇಶದ ಜನರ ಪರವಾಗಿ ಮಾತನಾಡಿದ ವಿದ್ಯಾವಂತ ಜನಪರ ಚಳವಳಿಗಾರ ಉಮರ್ ಖಾಲಿದ್ ರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು. ಉಮರ್ ಖಾಲಿದ್ ಅವರನ್ನು ನಾನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ನನ್ನ ಹೇಳಿಕೆಯನ್ನು ‘ದೇಶದ್ರೋಹ’ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಹರಿಪ್ರಸಾದ್‌ಗೆ ಒಲಿದ ಕೆಪಿಸಿಸಿ ಅಧ್ಯಕ್ಷ ಸ್ಥಾನ; ಡಿ.ಕೆ. ಶಿವಕುಮಾರ್‌ ಉತ್ತರಾಧಿಕಾರಿಯಾಗಿ ಆಯ್ಕೆ

ಯಾರು ಈ ಉಮರ್‌ ಖಾಲಿದ್‌?

ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ 2020ರ ಸೆಪ್ಟೆಂಬರ್ 13ರಂದು ಬಂಧನಕ್ಕೊಳಗಾದರು. ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ದೊಡ್ಡ ಪಿತೂರಿ ಪ್ರಕರಣದಲ್ಲಿ ಅವರ ವಿರುದ್ಧ ಕಠಿಣ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author