ಬೆಂಗಳೂರು, ಜ.9: ಮನರೇಗಾ ಯೋಜನೆ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಬಹಿರಂಗ ಚರ್ಚೆಗೆ ಬರಲಿ. ಆ ಮೂಲಕ ಜನರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸವಾಲೆಸೆದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.
ಯುಪಿಎ ಸರ್ಕಾರದ ಅವಧಿಯ ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂಬ ಪ್ರಲ್ಹಾದ್ ಜೋಶಿ ಅವರ ಆರೋಪದ ಕುರಿತು ಕೇಳಿದಾಗ, ‘ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅಥವಾ ಕೇಂದ್ರ ಸಚಿವರು, ಈ ಮೂವರಲ್ಲಿ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆ ಮೇಲೆ ಚರ್ಚೆಗೆ ಬರಲಿ. ನಾನು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧನಿದ್ದೇನೆ. ಈ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆಗೆ ನೀಡಲಿ. ಅದು ಎಷ್ಟೇ ಕೋಟಿ ಅವ್ಯವಹಾರವಾದರೂ ತಾಕತ್ತಿದ್ದರೆ ತನಿಖೆ ಮಾಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾವುದೇ ನಾಯಕರು ಇಂತಹ ಆರೋಪ ಮಾಡಲು ಸಾಧ್ಯವಿಲ್ಲ, ಅವರು ನಿಜವಾಗಿಯೂ ಈ ರೀತಿ ಹೇಳಿದ್ದಾರಾ?’ ಎಂದು ತಿಳಿಸಿದರು.
ಮನರೇಗಾ ಉಳಿಸಲು 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಳಿದಾಗ, “2 ದಿನ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್ಣ ಚರ್ಚೆ ಮಾಡಲಾಗುವುದು. ಬಿಜೆಪಿಯವರು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಭಿಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಬಗ್ಗೆ ಅವರು ಸಮರ್ಥನೆ ಮಾಡಿಕೊಳ್ಳಲಿ, ಈ ಕಾರ್ಯಕ್ರಮದಿಂದ ಏನೆಲ್ಲಾ ಕೆಟ್ಟ ಪರಿಣಾಮ ಬೀರಲಿದೆ ಎಂದು ನಾವು ಹೇಳುತ್ತೇವೆ ಎಂದು ತಿಳಿಸಿದರು.
ಕೇರಳದ ಮಲೆಯಾಳಂ ಭಾಷೆ ಬಿಲ್ ವಿಚಾರವಾಗಿ ಕೇಳಿದಾಗ, ʼಈ ವಿಚಾರವಾಗಿ ನನಗೆ ಇನ್ನು ಸಂಪೂರ್ಣ ಮಾಹಿತಿ ಇಲ್ಲʼ ಎಂದು ತಿಳಿಸಿದರು.
ಕುಮಾರಸ್ವಾಮಿಗಿಂತ ಹೆಚ್ಚಿನ ಅನುಭವವಿದೆ, ಅವರಿಂದ ಕಲಿಯುವ ಅಗತ್ಯ ನನಗಿಲ್ಲ ಎಂದ ಡಿ.ಕೆ. ಶಿವಕುಮಾರ್
ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ನ್ಯಾಯಾಲಯ, ಬೀದಿ-ಬೀದಿಯಲ್ಲಿ ಹೋರಾಟ: ಡಿಕೆಶಿ
ಬೆಂಗಳೂರು: ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಕಾನೂನು ಹಾಗೂ ಬೀದಿಗಿಳಿದು ಹೋರಾಟ ಮಾಡಿ, ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಗರದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದ ಈ ಹೊಸ ಕಾಯ್ದೆ ಜಾರಿ ಕಷ್ಟ. ಮನರೇಗಾ ಯೋಜನೆಯಲ್ಲಿ ಕಾಮಗಾರಿ ಆಯ್ಕೆ ಮಾಡುವ ಅಧಿಕಾರ ಪಂಚಾಯಿತಿಗಳ ಬಳಿ ಇತ್ತು. ಈಗ ದೆಹಲಿಯಿಂದ ತೀರ್ಮಾನ ಆಗುತ್ತದೆ ಎಂದು ಹೇಳಿದರು.
ಶೇಕಡಾ 40 ರಷ್ಟು ಅನುದಾನ ಭರಿಸಲು ಯಾವುದೇ ರಾಜ್ಯಗಳಿಂದ ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು. ರಾಜ್ಯಗಳ ಅಭಿಪ್ರಾಯ ಪಡೆಯದೇ ಈ ತೀರ್ಮಾನ ಮಾಡಿದ್ದಾರೆ. ಇದರ ವಿರುದ್ಧ ನಾವು ನಾಯ್ಯಾಲಯದ ಮೆಟ್ಟಿಲೇರುತ್ತೇವೆ. ಜತೆಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪ್ರತಿ ಪಂಚಾಯತಿಯಲ್ಲಿ ಸಭೆ ನಡೆಸುತ್ತೇವೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನರಲ್ಲಿ ಅರಿವು ಮೂಡಿಸುತ್ತೇವೆ ಎಂದು ಹೇಳಿದರು.
ಇದು ಉದ್ಯೋಗ ಹಕ್ಕಿನ ವಿಚಾರ. ಜೀವನೋಪಾಯದ ಅಧಿಕಾರ ಮೊಟಕು ಸಹಿಸಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಯಾವುದೇ ಪಂಚಾಯ್ತಿಯಾದರೂ ಇದನ್ನು ಅರಗಿಸಿಕೊಳ್ಳಲು ಆಗದು. ಎಲ್ಲಾ ಪಂಚಾಯಿತಿಯಲ್ಲಿ ಈ ಕಾಯ್ದೆ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದರು.
ರಾಜಕಾರಣ ಪಕ್ಕಕ್ಕಿಟ್ಟು, ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹಾಕೋಣ: ಡಿ.ಕೆ. ಶಿವಕುಮಾರ್
ಪ್ರಲ್ಹಾದ್ ಜೋಶಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸವೇ ಗೊತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಆರಂಭವಾದ ಪತ್ರಿಕೆ. ಇದು ದೇಶದ ಇತಿಹಾಸದ ಭಾಗವಾಗಿದೆ. ಪ್ರಹ್ಲಾದ್ ಜೋಷಿ ಅವರಾಗಲಿ, ಅವರ ಪಕ್ಷವಾಗಲಿ ಯಾವುದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿಲ್ಲ. ಅವರು, ಅವರ ಪಕ್ಷದವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಹೀಗಾಗಿ ಅವರಿಗೆ ಅರಿವಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದು ಕಾಂಗ್ರೆಸ್ ಪಕ್ಷʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.