ಬೆಂಗಳೂರು, ಡಿ.1: ಇತ್ತೀಚೆಗೆ ಬೆಂಗಳೂರಿನ (Bengaluru potholes) ರಸ್ತೆ ಗುಂಡಿಗಳ ಬಗ್ಗೆ ಕೆಲವು ಉದ್ಯಮಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಬೆಂಗಳೂರಿನ ಹದಗೆಟ್ಟ ಟ್ರಾಫಿಕ್ (Bengaluru Traffic) ಬಗ್ಗೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಬಿಸಿ ಅವರಿಗೂ ಭಾನುವಾರ ತಟ್ಟಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನೂ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದಾರೆ.
ಎಸ್‌ಪಿ ಸಂಸದನ ಎಕ್ಸ್ ಸಂದೇಶದಲ್ಲಿ ಏನಿದೆ?
‘ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳೇ ಕ್ಷಮಿಸಿ, ಬೆಂಗಳೂರಿನದ್ದು ಅತ್ಯಂತ ಕೆಟ್ಟ ಸಂಚಾರ ವ್ಯವಸ್ಥೆ. ಜವಾಬ್ದಾರಿ ಇಲ್ಲದ, ಪ್ರಯೋಜನಕ್ಕೆ ಬಾರದ ಸಂಚಾರ ಪೊಲೀಸರು. ಅವರು ಕನಿಷ್ಠಪಕ್ಷ ದೂರವಾಣಿ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ. ನಾನು ಎಷ್ಟು ಬಾರಿ ಫೋನ್ ಮಾಡಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಯನ್ನು ಕೂಡ ಇಲ್ಲಿ ಲಗತ್ತಿಸಿದ್ದೇನೆ. ಸುಮಾರು ಒಂದು ಗಂಟೆಯಿಂದ ನಾವು ರಾಜಕುಮಾರ್ ಸಮಾಧಿ ಬಳಿ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದೇವೆ. ಇದರಿಂದಾಗಿ ನಮಗೆ ವಿಮಾನ ತಪ್ಪಲಿದೆ. ಸಂಸತ್ ಅಧಿವೇಶನಕ್ಕೆ ಹಾಜರಾಗುವುದಕ್ಕೆ ಕೂಡ ಅಡ್ಡಿಯಾಗಲಿದೆ. ಇಷ್ಟೊಂದು ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್ ಇದ್ದರೂ ಸುತ್ತಲೂ ಒಬ್ಬ ಪೊಲೀಸ್ ಕೂಡ ಕಾಡುತ್ತಿಲ್ಲ. ಈ ಸುಂದರ ನಗರದ ಹೆಸರು ಮತ್ತು ಮೋಡಿಯನ್ನು ಹಾಳು ಮಾಡಲು ಈ ಅಸಮರ್ಥ ಸಂಚಾರ ಪೊಲೀಸ್ ಅಧಿಕಾರಿಗಳು ಸಾಕು. ಈ ಬೆಂಗಳೂರು ಸಂಚಾರ ದಟ್ಟಣೆ ಅತ್ಯಂತ ಕುಖ್ಯಾತಿ ಗಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ’ ಎಂದು ರಾಜೀವ್ ರೈ ಎಕ್ಸ್ ಸಂದೇಶದಲ್ಲಿ ಭಾನುವಾರ ಸಂಜೆ ಬರೆದಿದ್ದಾರೆ.
ಎಕ್ಸ್ ಸಂದೇಶ
ಇಷ್ಟೇ ಅಲ್ಲದೆ, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸಂಬಂಧಿಸಿದ ಯಾವೆಲ್ಲ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದ್ದರೋ ಅವುಗಳ ಸ್ಕ್ರೀನ್‌ಶಾಟ್ ಲಗತ್ತಿಸಿದ್ದಾರೆ. ಯಾವ ಕರೆಗೂ ಟ್ರಾಫಿಕ್ ಪೊಲೀಸರು ಸ್ಪಂದಿಸಿಲ್ಲ ಎಂದಿದ್ದಾರೆ. ಈ ಎಕ್ಸ್ ಸಂದೇಶದ ಬಗ್ಗೆ ಈಗ ವ್ಯಾಪಕ ಚರ್ಚೆಯಾಗುತ್ತಿದೆ. ನೆಟ್ಟಿಗರು ಅನೇಕ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ. ಕೆಲವರು ʼವಿಮಾನದ ಸಮಯಕ್ಕೆ ಸಾಕಷ್ಟು ಮುಂಚಿತವಾಗಿ ಹೊರಡದೇ ಇದ್ದದ್ದು ನಿಮ್ಮದೇ ತಪ್ಪು, ಟ್ರಾಫಿಕ್ ಪೊಲೀಸರನ್ನು ದೂರಿ ಫಲವೇನು?ʼ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ʼನಿಮ್ಮ ಉತ್ತರ ಪ್ರದೇಶಕ್ಕಿಂತ ಇಲ್ಲಿನ ಟ್ರಾಫಿಕ್ ಎಷ್ಟೋ ಸುಗಮವಾಗಿದೆ. ಕಷ್ಟವೆನಿಸಿದರೆ ಇಲ್ಲಿಗೇಕೆ ಬರುತ್ತೀರಿ?ʼ ಎಂದು ಕೇಳಿದ್ದಾರೆ.
ಸಚಿವರ ಎದುರೇ ಬೆಂಗಳೂರು ಟ್ರಾಫಿಕ್ ಕುರಿತು ಶುಭಾಂಶು ಶುಕ್ಲಾ ತಮಾಷೆ
ಈ ಮಧ್ಯೆ, ಸಂಸದ ರಾಜೀವ್ ರೈ ಅಸಮಾಧಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ರಾಜೀವ್ ರೈ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಬೆಂಗಳೂರು ಏನು, ಅದರ ಮಹತ್ವ ಏನು ಎಂಬ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.